ಹೊನ್ನಾಳಿ: ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಹಾಗೂ ಜಗಳೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ತುಂಗಭದ್ರಾ ನದಿಯಿಂದ ಯಾವುದೇ ಅಪಾಯಗಳನ್ನು ಎದುರಿಸಲು ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.
ಹೊನ್ನಾಳಿ ಪಟ್ಟಣದ ನೆರೆಹಾನಿ ಪ್ರದೇಶ ಬಾಲರಾಜ್ ಘಾಟ್ ಹಾಗೂ ರಾಘವೇಂದ್ರಸ್ವಾಮಿ ಮಠ ಸಮೀಪದ ತುಂಗಭದ್ರಾ ನದಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಎಸ್‌ಡಿಆರ್‌ಎಫ್ ತಂಡದ ಅಣಕು ರಕ್ಷಣಾ ಕಾರ್ಯವನ್ನು ವೀಕ್ಷಿಸಿ, ನಂತರ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕಳೆದ 10–12 ದಿನಗಳಿಂದ ಮಲೆನಾಡು ಪ್ರದೇಶಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಗೆ ನೀರು ಹೆಚ್ಚಾಗಿ ಹರಿದುಬರುತ್ತಿದೆ. ಇದರಿಂದ ಯಾವುದೇ ಕ್ಷಣದಲ್ಲಿ ಜಲಾಶಯಗಳಿಂದ ನದಿಗೆ ನೀರು ಹರಿದು ಬರಬಹುದು. ಹೀಗಾಗಿ ಅಧಿಕಾರಿಗಳು ಪ್ರವಾಹ ಸ್ಥಿತಿ ಎದುರಿಸಲು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.
‘ಬಹುಮುಖ್ಯವಾಗಿ ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳ ಗೋಡೆಗಳು ಬೀಳುವಂತಹ ಸ್ಥಿತಿಯಲ್ಲಿದ್ದರೆ ಅವುಗಳ ಪಟ್ಟಿ ಮಾಡಬೇಕು, ಪರಿಹಾರ ಕುರಿತು ತಕ್ಷಣವೇ ತಮಗೆ ಪ್ರಸ್ತಾವನೆಯನ್ನು ಕಳಿಸಿಕೊಡಬೇಕು’ ಎಂದು ಹೇಳಿದರು.
‘ರಸ್ತೆಗಳು, ಕಿರುಸೇತುವೆಗಳು, ಡ್ಯಾಮೇಜ್ ಆಗಿದ್ದರೆ, ಬೆಸ್ಕಾಂನ ವಿದ್ಯುತ್ ಕಂಬಗಳು ಮುರಿದು ಬೀಳುವಂತಹ ಸ್ಥಿತಿಯಲ್ಲಿದ್ದರೆ, ಅವುಗಳ ದುರಸ್ತಿ ಕಾರ್ಯಕ್ಕೆ ಬೇಕಾದ ಜೆಸಿಬಿ, ಹಿಟಾಚಿ ಮಾಲೀಕರ ಪಟ್ಟಿಯನ್ನು ಮಾಡಿಟ್ಟುಕೊಳ್ಳಬೇಕು, ಮೊದಲು ಪ್ರಾಣಹಾನಿಯನ್ನು ತಡೆಗಟ್ಟಬೇಕು. ಬೆಸ್ಕಾಂನ ಕಂಬಗಳು ಹಾಗೂ ಗಿಡಮರಗಳು ಬೀಳುವ ಸ್ಥಿತಿಯಲ್ಲಿದ್ದರೆ ಅವುಗಳ ಸಮೀಕ್ಷೆ ನಡೆಸಬೇಕು’ ಎಂದು ಸೂಚಿಸಿದರು.
‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶಿಥಿಲಗೊಂಡ ಮನೆಗಳ ಸಮೀಕ್ಷೆ ನಡೆಸಬೇಕು, ಮನೆಹಾನಿಗೆ ಸಂಬಂಧಿಸಿದಂತೆ ಪಿಡಿಒ ಹಾಗೂ ಕಾರ್ಯದರ್ಶಿಗಳಿಬ್ಬರೂ ಕೇಂದ್ರಸ್ಥಾನದಲ್ಲಿದ್ದು, ಸಮನ್ವತೆಯಿಂದ ತಡಮಾಡದೇ ಕೆಲಸ ಮಾಡಬೇಕು, ಪರಿಹಾರಕ್ಕೆ ಕೂಡಲೇ ತಮಗೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಹಾವು ಕಡಿತಕ್ಕೆ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು, ಹಾವು ಹಿಡಿಯುವವರ ಪಟ್ಟಿಯನ್ನು ಸಿದ್ಧವಿಟ್ಟುಕೊಳ್ಳಬೇಕು, ಸಹಾಯಕ್ಕಾಗಿ ಸ್ವಯಂ ಸೇವಕರು ಕಂಡುಬಂದರೆ ಅಂಥವರನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಷಣ್ಮುಖಪ್ಪ, ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಹಶೀಲ್ದಾರ್ ಪಟ್ಟರಾಜಗೌಡ ಮಾತನಾಡಿದರು.
ನ್ಯಾಮತಿ ತಹಶೀಲ್ದಾರ್ ಗೋವಿಂದಪ್ಪ, ಜಿಲ್ಲಾ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊನ್ನಾಳಿ ಪಟ್ಟಣದ ತುಂಗಭದ್ರಾ ನದಿಯಲ್ಲಿ ಎಸ್‌ಡಿಆರ್‌ಎಫ್ ತಂಡದಿAದ ಬೋಟ್ ನಲ್ಲಿ ರಕ್ಷಣಾ ಸಿಬ್ಬಂದಿಗಳು ಅಣುಕು ಪ್ರದರ್ಶನ ನಡೆಸಿದರು.
ನೆರೆಹಾನಿ ಪ್ರದೇಶ ಬಾಲರಾಜ್ ಘಾಟ್‌ಗೆ ಭೇಟಿ ತಾ.ಪಂ. ಸಾಮಾರ್ಥ್ಯಸೌಧದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ
₹ 16 ಕೋಟಿ ಅನುದಾನ ಪರಿಹಾರ ನೀಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹ 16 ಕೋಟಿ ತಹಶೀಲ್ದಾರ್ ಖಾತೆಯಲ್ಲಿ ₹ 64 ಲಕ್ಷ ಹಣದ ಲಭ್ಯತೆ ಇದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಿದರೆ ನಾವು ಎಲ್ಲ ವಿಪತ್ತುಗಳನ್ನು ಎದುರಿಸಬಹುದು ಎಂದರು. ಪರಿಹಾರ: ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ ಪೂರ್ಣ ಮನೆ ಹಾನಿಯಾದರೆ ಪಕ್ಕಾ ಮನೆಗಳಿಗೆ ₹ 1.20 ಲಕ್ಷ ಭಾಗಶಃ ಹಾನಿಯಾದರೆ ₹ 6500 ದುರಸ್ತಿಗೆ ₹ 4500 ಪರಿಹಾರ ಕೊಡಲಾಗುವುದು. ಮನೆಗಳಲ್ಲಿನ ಯಾವುದೇ ವಸ್ತುಗಳು ಹಾಳಾದರೆ ಅದಕ್ಕೆ ₹ 2500 ಪರಿಹಾರವನ್ನು ತಕ್ಷಣವೇ ಕೊಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.