ದಾವಣಗೆರೆ: ಜಿಲ್ಲೆಯಲ್ಲಿ ಕಳೆದ 7–8 ವರ್ಷಗಳಿಂದ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಜಿಲ್ಲೆಯು ‘ಮಲೇರಿಯಾ ಮುಕ್ತ’ ಎಂಬ ಹಿರಿಮೆ ಹೊಂದಲು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಯಾವ ಜಿಲ್ಲೆಯಲ್ಲಿ 3 ವರ್ಷಗಳಿಂದ 1ಕ್ಕಿಂತ ಹೆಚ್ಚು ಮಲೇರಿಯಾ ಪ್ರಕರಣಗಳು ಪತ್ತೆಯಾಗದಿದ್ದರೆ, ಆರೋಗ್ಯ ಇಲಾಖೆಯ ಮಾನದಂಡಗಳ ಪ್ರಕಾರ ಆ ಜಿಲ್ಲೆಯನ್ನು ‘ಮಲೇರಿಯಾ ಮುಕ್ತ’ ಎಂದು ಘೋಷಿಸಬಹುದಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಅತೀ ಕಡಿಮೆ ಪ್ರಕರಣಗಳು ಕಂಡುಬಂದಿವೆ. ಆದರೆ, ಈ ಎಲ್ಲ ಪ್ರಕರಣಗಳು ವಲಸೆ ಕಾರ್ಮಿಕರಲ್ಲಿ ಪತ್ತೆಯಾಗಿವೆ. ಸ್ಥಳೀಯರಲ್ಲಿ ಒಂದೇ ಒಂದು ಪ್ರಕರಣವೂ ಕಂಡುಬಂದಿಲ್ಲ.
‘7–8 ವರ್ಷಗಳಿಂದ ಜಿಲ್ಲೆಯಲ್ಲೇ ನೆಲೆಸಿರುವ ಜನರಲ್ಲಿ ಯಾರೊಬ್ಬರಲ್ಲೂ ಮಲೇರಿಯಾ ಜ್ವರ ಕಾಣಿಸಿಕೊಂಡಿಲ್ಲ. ದಕ್ಷಿಣ ಕನ್ನಡದ ಮಂಗಳೂರು, ಗೋವಾ, ದಕ್ಷಿಣ ಆಫ್ರಿಕಾದಿಂದ ಬರುವ ವಲಸಿಗರಲ್ಲಿ ಮಾತ್ರ ಕೆಲವು ಮಲೇರಿಯಾ ಪ್ರಕರಣ ಕಂಡುಬಂದಿವೆ. ಸ್ಥಳೀಯವಾಗಿ ಯಾರೊಬ್ಬರಲ್ಲೂ ಮಲೇರಿಯಾ ಸೋಂಕು ಕಾಣಿಸಿಕೊಳ್ಳದ ಕಾರಣಕ್ಕೆ ಜಿಲ್ಲೆಯನ್ನು ಮಲೇರಿಯಾ ಮುಕ್ತ ಎಂದು ಘೋಷಿಸಲು ಮಾನದಂಡಗಳು ಅನುವು ಮಾಡಿಕೊಡುತ್ತವೆ’ ಎಂದು ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ ಕೆ.ಎಚ್.ಗಂಗಾಧರ್ ವಿವರಿಸಿದರು.
‘ಜಿಲ್ಲೆಯ ಹಕ್ಕಿಪಿಕ್ಕಿ ಸಮುದಾಯದವರು ದಕ್ಷಿಣ ಆಫ್ರಿಕಾ ಸೇರಿದಂತೆ ಇನ್ನಿತರ ರಾಷ್ಟ್ರಗಳಿಗೆ ವ್ಯಾಪಾರದ ಕಾರಣಕ್ಕೆ ವಲಸೆ ಹೋಗುತ್ತಾರೆ. ಗೋವಾ ರಾಜ್ಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಹೊರ ರಾಜ್ಯ ಅಥವಾ ವಿದೇಶಗಳಲ್ಲಿ ಕೆಲ ತಿಂಗಳು ಅಥವಾ ಕೆಲ ವರ್ಷ ಕಳೆದ ಬಳಿಕ ಜಿಲ್ಲೆಗೆ ಮರಳಿದಾಗ ಕೆಲವೊಮ್ಮೆ ಅವರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಯಲ್ಲಿ ರಕ್ತ ಲೇಪನ ಪರೀಕ್ಷೆ ನಡೆಸಿದಾಗ ಮಲೇರಿಯಾ ಪತ್ತೆಯಾಗುತ್ತಿದೆ. ಇಂತಹ ಪ್ರಕರಣಗಳನ್ನು ‘ವಲಸೆ ಪ್ರಕರಣ’ ಎಂದು ಗುರುತಿಸಲಾಗುತ್ತದೆ. ಜಿಲ್ಲೆಯಲ್ಲೇ ನೆಲೆಸಿರುವವರಲ್ಲಿ ಮಲೇರಿಯಾ ಜ್ವರ ಪತ್ತೆಯಾದರೆ, ಅವುಗಳನ್ನು ‘ಸ್ಥಳೀಯ ಪ್ರಕರಣ’ ಎಂದು ಗುರುತಿಸಲಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಸ್ಥಳೀಯ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ತಿಳಿಸಿದರು.
ಜಿಲ್ಲೆಯು ‘ಮಲೇರಿಯಾ ಮುಕ್ತ’ವಾಗಿರುವ ಬಗ್ಗೆ ಆರೋಗ್ಯ ಇಲಾಖೆಯು ಜಿಲ್ಲಾ ಮಟ್ಟದ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ವರದಿಯನ್ನು ಸಲ್ಲಿಸಿದ್ದಾರೆ. ರಾಜ್ಯಮಟ್ಟದ ಹಿರಿಯ ಆರೋಗ್ಯಾಧಿಕಾರಿಗಳು ಈಗಾಗಲೇ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿಯನ್ನು ಸ್ವೀಕರಿಸಿದ್ದಾರೆ. ಮಾತ್ರವಲ್ಲದೇ ಜಿಲ್ಲೆಯನ್ನು ಮಲೇರಿಯಾ ಮುಕ್ತ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಬೇಕಾಗಿದೆ. ಇಲ್ಲಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ಬರುವ ತಂಡದ ನಿರೀಕ್ಷೆಯಲ್ಲಿದ್ದು, ಯಾವಾಗ ಬರಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾಗಿದೆ.
ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಸೋಂಕಿತ ಅನಾಫಿಲಿಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳು ಪ್ಲಾಸ್ಮೋಡಿಯ ರೋಗಾಣು ಹರಡಿಸುವುದರಿಂದ ಕಾಯಿಲೆ ಒಬ್ಬರಿಂದ ಒಬ್ಬರಿಗೆ ತಗುಲಿದೆ.
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಮಲೇರಿಯಾವನ್ನು ನಿಯಂತ್ರಿಸುವ ಮತ್ತು ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನದ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಏಪ್ರಿಲ್ 25ರಂದು ‘ವಿಶ್ವ ಮಲೇರಿಯಾ ದಿನ’ ಆಚರಿಸಲಾಗುತ್ತಿದೆ. ‘ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರುಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.
ಕೇಂದ್ರ ಸರ್ಕಾರದಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಜಿಲ್ಲೆಗೆ ಯಾವಾಗ ಬೇಕಾದರೂ ಭೇಟಿ ನೀಡಿ ಅಧ್ಯಯನ ನಡೆಸುವ ಸಾಧ್ಯತೆ ಇದೆ. ಜಿಲ್ಲೆ ಮಲೇರಿಯಾ ಮುಕ್ತವಾದರೂ ಸಾರ್ವಜನಿಕರು ಮೈಮರೆಯಬಾರದುಡಾ.ಷಣ್ಮುಖಪ್ಪ ಜಿಲ್ಲಾ ಆರೋಗ್ಯಾಧಿಕಾರಿ
ಆಶ್ರಿತ ರೋಗಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರಿನ ಸಂಗ್ರಹಗಳನ್ನು ಮುಚ್ಚಿಡಬೇಕು. ಸೊಳ್ಳೆ ಪರದೆ ಸೊಳ್ಳೆ ನಿರೋಧ ಬಳಸುವುದು ಅಗತ್ಯಕೆ.ಎಚ್.ಗಂಗಾಧರ್ ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ
ಮಲೇರಿಯಾ ನಿಯಂತ್ರಣ ಕ್ರಮಗಳು
ಮಲೇರಿಯಾ ತಡೆಗೆ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಈಗಾಗಲೇ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜ್ವರದಿಂದ ಬಳಲುವವರಿಗೆ ಮಲೇರಿಯಾ ಪತ್ತೆಗೆ ರಕ್ತಲೇಪನ ಪರೀಕ್ಷೆ ನಡೆಸಲಾಗುತ್ತಿದೆ. ಮಲೇರಿಯಾ ಕೈಗೊಂಡ ಇತರ ಪ್ರಮುಖ ಕ್ರಮಗಳು ಇಲ್ಲಿವೆ. * ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆ * 24 ಗಂಟೆಗಳಲ್ಲಿ ರಕ್ತಲೇಪನಗಳ ಪರೀಕ್ಷೆ ಮತ್ತು ಚಿಕಿತ್ಸೆ * ಎಲ್ಲ ಹಂತಗಳಲ್ಲೂ ವಲಸಿಗರ ಮೇಲೆ ಕಣ್ಗಾವಲು * ಶಾಲಾ – ಕಾಲೇಜುಗಳು ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ * ಮಲೇರಿಯಾ ತಡೆಗೆ ಕೀಟನಾಶಕ ಸಿಂಪಡಣೆ * ಜೈವಿಕ ನಿಯಂತ್ರಣಾ ವಿಧಾನವಾದ ಲಾರ್ವಾಹಾರಿ ಮೀನುಗಳನ್ನು ಕೆರೆ ಹೊಂಡ ಬಾವಿ ದೊಡ್ಡ ನೀರಿನ ತೊಟ್ಟಿಗಳಲ್ಲಿ ಬಿಡುವುದು
Cut-off box - ಮಲೇರಿಯಾ– ಜಿಲ್ಲೆಯ ಅಂಕಿ ಅಂಶ ವರ್ಷ;ಪರೀಕ್ಷಿಸಿದ ರಕ್ತಲೇಪನ;ಪಾಸಿಟಿವ್ 2019;259532;8 2020;147708;5 2021;272502;3 2022;402908;1 2023;443290;13 2024;497;143;3 2025;122;998;1 (ಪಾಸಿಟಿವ್ ಕಂಡು ಬಂದ ಎಲ್ಲವೂ ವಲಸೆ ಪ್ರಕರಣಗಳಾಗಿವೆ. ಸ್ಥಳೀಯ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ) ಆಧಾರ: ಆರೋಗ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.