ADVERTISEMENT

ಪ್ರಾಣಿ– ಪಕ್ಷಿಗಳ ದಾಹ ತಣಿಸಲು ಕೃತಕ ತೊಟ್ಟಿ

ದಾವಣಗೆರೆ ಜಿಲ್ಲೆಯಲ್ಲಿ ನೀರಿನ ಕ್ಷಾಮದಿಂದ ತತ್ತರಿಸಿದ ಕಾಡುಪ್ರಾಣಿಗಳು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 6:55 IST
Last Updated 16 ಮಾರ್ಚ್ 2024, 6:55 IST
ಜಗಳೂರು ತಾಲ್ಲೂಕಿನ ಅಣಬೂರು ಮೀಸಲು ಅರಣ್ಯದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿರುವುದು
ಜಗಳೂರು ತಾಲ್ಲೂಕಿನ ಅಣಬೂರು ಮೀಸಲು ಅರಣ್ಯದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿರುವುದು   

ಜಗಳೂರು: ಹಿಂದೆಂದೂ ಕಂಡರಿಯದ ಸುಡುಬಿಸಿಲಿನ ತಾಪದಿಂದ ಕಂಗೆಟ್ಟ ಕಾಡುಪ್ರಾಣಿ– ಪಕ್ಷಿಗಳ ದಾಹ ತಣಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಇದೇ ಮೊದಲ ಭಾರಿಗೆ ಜಗಳೂರು ಸೇರಿ ಇಡೀ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ನೀರನ್ನು ಪೂರೈಸುತ್ತಿದ್ದಾರೆ.

ತೀವ್ರ ಬರಗಾಲದ ಕಾರಣ ಅರಣ್ಯ ಪ್ರದೇಶದ ಒಳಭಾಗದಲ್ಲಿರುವ ಕೆರೆ– ಕಟ್ಟೆಗಳು, ಹಳ್ಳಗಳು ಬತ್ತಿ ಹೋಗಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಕಂಡುಬಂದಿದೆ. ಕಾಡುಪ್ರಾಣಿಗಳು ನೀರನ್ನು ಅರಸಿ ವಸತಿ ಪ್ರದೇಶಗಳು ಹಾಗೂ ರೈತರ ತೋಟಗಳತ್ತ ಧಾವಿಸುವ ಮೂಲಕ ಮಾನವ ವನ್ಯಜೀವಿ ಸಂಘರ್ಷದ ದೂರುಗಳು ಕೇಳಿಬಂದಿವೆ.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಅರಣ್ಯ ಇಲಾಖೆ, ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ನೀರಿನ ತಾತ್ಕಾಲಿಕ ಬೃಹತ್ ಪಾಲಿಥಿನ್ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುತ್ತಿದೆ.

ADVERTISEMENT

ಜಗಳೂರು, ಹೊನ್ನಾಳಿ, ದಾವಣಗೆರೆ, ಮಲೇಬೆನ್ನೂರು, ನೀರ್ಥಡಿ, ಬೇವಿನಹಳ್ಳಿ, ಕೊಂಡಜ್ಜಿ ಸೇರಿ ಕಾಡುಪ್ರಾಣಿಗಳು ಹೆಚ್ಚಾಗಿರುವಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ ಕಾಡಿನಲ್ಲೇ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮದಲ್ಲಿ ಈ ಹಿಂದೆ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ ಬೇಸಿಗೆಯ ವೇಳೆ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿತ್ತು. ಸಿಮೆಂಟ್ ತೊಟ್ಟಿಗಳು ಶಿಥಿಲವಾಗಿ, ಬಿರುಕು ಬಿಡುವುದರಿಂದ ನೀರೆಲ್ಲ ಸೋರಿಕೆಯಾಗುವುದು ಅಥವಾ ಬಹುಬೇಗ ಆವಿಯಾಗುತ್ತಿದ್ದರಿಂದ ಕೃತಕ ನೀರು ಪೂರೈಕೆ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿರಲಿಲ್ಲ.

‘ಈ ಬಾರಿಯ ಬೇಸಿಗೆಯಲ್ಲಿ ಎಲ್ಲೆಡೆಯಂತೆ ಅರಣ್ಯಗಳಲ್ಲೂ ನೀರಿನ ಸಮಸ್ಯೆ ತೀವ್ರವಾಗಿದೆ. ಕಾಡುಪ್ರಾಣಿಗಳು ನೀರು ಹುಡುಕಿಕೊಂಡು ಊರುಗಳತ್ತ ಹಾಗೂ ರೈತರ ತೋಟಗಳತ್ತ ಹೋಗುತ್ತಿದ್ದವು. ಕೆಲವೆಡೆ ನೀರಿಗಾಗಿ ಪ್ರಾಣಿಗಳು ಪಂಪ್‌ಸೆಟ್, ಪೈಪ್‌ಗಳನ್ನು ಕಿತ್ತುಹಾಕಿದ್ದು, ನಷ್ಟ ಅನುಭವಿಸಿದ ರೈತರು ಸಾಕಷ್ಟು ಬಾರಿ ದೂರು ಸಲ್ಲಿಸುತ್ತಿದ್ದರು. ಮಾನವ– ವನ್ಯಜೀವಿ ಸಂಘರ್ಷಕ್ಕೆ ಇದು ಕಾರಣವಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿ ಜಿಲ್ಲೆಯ ಅರಣ್ಯದಲ್ಲಿ ಅಲ್ಲಲ್ಲಿ ಕೃತಕ ನೀರಿನ 20ಕ್ಕೂ ಹೆಚ್ಚು ತೊಟ್ಟಿಗಳನ್ನು ನಿರ್ಮಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹಳ್ಳ ಮತ್ತು ತಗ್ಗು ಪ್ರದೇಶದಲ್ಲಿ ಎರಡು– ಮೂರು ಅಡಿ ಮಣ್ಣು ತೆಗೆದು ಅದರೊಳಗೆ ಪಾಲಿಥಿನ್ ತೊಟ್ಟಿ ನಿರ್ಮಿಸಿ ಟ್ಯಾಂಕರ್‌ಗಳ ಮೂಲಕ ನೀರು ಹರಿಸಲಾಗುತ್ತದೆ. ನೀರು ಖಾಲಿಯಾಗುತ್ತಿದ್ದಂತೆಯೇ ಮತ್ತೆ ನೀರು ಪೂರೈಸಲಾಗುತ್ತದೆ. ಜಗಳೂರು ತಾಲ್ಲೂಕಿನ ಪ್ರಾದೇಶಿಕ ವಲಯ ಅರಣ್ಯ ವ್ಯಾಪ್ತಿಯ ಅಣಬೂರು, ತಮಲೇಹಳ್ಳಿ ಅರಣ್ಯದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ನೀರು ಕುಡಿಯಲು ಸಾಮೂಹಿಕವಾಗಿ ಕರಡಿಗಳು ಬಂದು ಹೋಗುತ್ತಿವೆ. ಕರಡಿ, ಚಿರತೆ ಮುಂತಾದ ಪ್ರಾಣಿಗಳು ನೀರಿಗಾಗಿ ಕಾಡಿನಿಂದ ಜನವಸತಿ ಪ್ರದೇಶಗಳತ್ತ ಹೋಗುವುದು ನಿಂತಿದೆ. ರೈತರ ದೂರುಗಳು ಕಡಿಮೆಯಾಗಿವೆ’ ಎಂದು ಶಶಿಧರ್ ಸ್ಪಷ್ಟಪಡಿಸಿದರು.

ಜಗಳೂರು ತಾಲ್ಲೂಕಿನ ಅಣಬೂರು ಮೀಸಲು ಅರಣ್ಯದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿರುವುದು

ಅರಣ್ಯದಲ್ಲಿ ಪಾಲಿಥಿನ್ ತೊಟ್ಟಿಗಳ ನಿರ್ಮಾಣ ಬೇಸಿಗೆ ಮುಗಿಯುವವರೆಗೆ ಟ್ಯಾಂಕರ್ ನೀರು ಪೂರೈಕೆ ಮೊದಲ ಬಾರಿ ನೀರಿನ ಕೃತಕ ತೊಟ್ಟಿಗಳ ನಿರ್ಮಾಣ

ಮಳೆಗಾಲ ಪ್ರಾರಂಭವಾಗುವವರೆಗೂ ತೊಟ್ಟಿಗಳಿಗೆ ನೀರು ಹರಿಸಲಾಗುವುದು. ಪಾಲಿಥಿನ್ ಅಥವಾ ಪ್ಲಾಸ್ಟಿಕ್ ತ್ಯಾಜ್ಯದಿಂದ ಪ್ರಾಣಿಗಳಿಗೆ ತೊಂದರೆ ಆಗದಂತೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪಾಲಿಥಿನ್ ಹೊದಿಕೆ ತೆಗೆಯಲಾಗುವುದು. - ಶಶಿಧರ್ ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.