ಜಗಳೂರು: ತಾಲ್ಲೂಕಿನಾದ್ಯಂತ ಮಂಗಳವಾರ ಬೆಳಿಗ್ಗೆ ಉತ್ತಮ ಮಳೆಯಾಗಿದ್ದು, ಸುಡು ಬಿಸಿಲಿನ ತಾಪಕ್ಕೆ ಕಾದ ಕಾವಲಿಯಂತಾಗಿದ್ದ ಭೂಮಿ ತಂಪಾಗಿದ್ದು, ರೈತರಲ್ಲಿ ಸಂತಸ ತಂದಿದೆ.
ರಭಸದ ಮಳೆಗೆ ಪಟ್ಟಣದಲ್ಲಿ ಶಾಲಾ ಕಾಂಪೌಂಡ್ ಕುಸಿದಿದ್ದು, ಸಣ್ಣ ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ನಂತರ ಮರವನ್ನು ತೆರವುಗೊಳಿಸಲಾಯಿತು. ವೀಳ್ಯದೆಲೆ ತೋಟಗಳಿಗೆ ಹೆಚ್ಚಿನ ಹಾನಿಯಾಗಿವೆ.
ಕಸಬಾ ಹೋಬಳಿ, ಸೊಕ್ಕೆ ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಸತತವಾಗಿ ಒಂದು ತಾಸು ಬಿರುಸಿನ ಮಳೆಯಾಯಿತು. ಇದರಿಂದಾಗಿ ಭೂಮಿಯನ್ನು ಹದಗೊಳಿಸಿಕೊಂಡು ಸಿದ್ಧತೆ ನಡೆಸಿದ್ದ ರೈತರಲ್ಲಿ ಹರ್ಷ ಮೂಡಿಸಿದೆ.
‘ವೀಳ್ಯದೆಲೆ ತೋಟಗಳಿಗೆ ಪ್ರಸಿದ್ಧಿಯಾಗಿರುವ ತಾಲ್ಲೂಕಿನ ಸೊಕ್ಕೆ ಹೋಬಳಿಯ ಯರ್ಲಕಟ್ಟೆ ಗ್ರಾಮದಲ್ಲಿ ನಾಲ್ಕೈದು ತೋಟಗಳಲ್ಲಿ ವೀಳ್ಯದೆಲೆ ಬಳ್ಳಿಗಳು ನೆಲಕಚ್ಚಿದ್ದು ಹಾನಿಯಾಗಿದೆ. ಗ್ರಾಮದ ರೇವಣ್ಣ, ಮುನಿಯಪ್ಪ ಹಾಗೂ ಈಶಪ್ಪ ಎಂಬುವವರ ವೀಳ್ಯದೆಲೆ ತೋಟಗಳಿಗೆ ಮಳೆಯಿಂದ ಹಾನಿಯಾಗಿದೆ’ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕಸಬಾ ಹೋಬಳಿ ಪ್ರದೇಶದಲ್ಲಿ 35.1 ಮಿ.ಮೀ., ಸೊಕ್ಕೆಯಲ್ಲಿ 31.4 ಹಾಗೂ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ 20.3 ಮಿ.ಮೀ. ಮಳೆ ಸುರಿದಿದೆ. ಈ ಅವಧಿಯ ವಾಡಿಕೆ ಮಳೆ 0.5 ಮಿ.ಮೀ ಮಾತ್ರ. 29.6 ಮಿ.ಮೀ. ಹೆಚ್ಚುವರಿ ಮಳೆ ಬಿದ್ದಿದ್ದು ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಲಿದ್ದು, ಭೂಮಿ ಹದಗೊಳಿಸಲು ನೆರವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ತಿಳಿಸಿದ್ದಾರೆ.
ಮೂರೂ ಹೋಬಳಿಗಳ ವ್ಯಾಪ್ತಿಯಲ್ಲಿ ಕೇವಲ ಒಂದು ತಾಸಿನಲ್ಲಿ ಸರಾಸರಿ 29.6 ಮಿ.ಮೀ. ಮಳೆ ಸುರಿದಿದ್ದು, ಕೃಷಿ ಜಮೀನುಗಳಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಭರ್ತಿಯಾಗಿ ಹಳ್ಳಗಳು ಹರಿಯುತ್ತಿವೆ. ಗೋಕಟ್ಟೆಗಳು ಮತ್ತು ಬೃಹತ್ ಚೆಕ್ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಮೆದಗಿನ ಕೆರೆ ಗ್ರಾಮದ ಸಮೀಪ ಅಟಲ್ ಭೂ ಯೋಜನೆಯಡಿ ನಿರ್ಮಿಸಿರುವ ಚೆಕ್ ಡ್ಯಾಂ ಭರ್ತಿಯಾಗಿ ಹರಿಯುತ್ತಿದೆ. ಜಗಳೂರು ಕೆರೆಯತ್ತ ಹಲವು ಹಳ್ಳಗಳು ಹರಿದು ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.