
ದಾವಣಗೆರೆ: ಎಲ್ಲೆಂದರಲ್ಲಿ ಉಗಿದ ಗುಟ್ಕಾ, ಪಾನ್‌ಮಸಾಲಾ, ಎಲೆ–ಅಡಿಕೆ ಕಲೆಗಳು, ದೂಳು ಹಿಡಿದ ಎಸ್ಕಲೇಟರ್‌ಗಳು, ಅಲ್ಲಲ್ಲಿ ಒಡೆದ ಟೈಲ್ಸ್‌ಗಳು, ಪಾರ್ಕಿಂಗ್ ಜಾಗದಲ್ಲಿ ಗಲೀಜು ನೀರು, ಮೂತ್ರದ ದುರ್ವಾಸನೆ...
ನಗರದ ಹೃದಯ ಭಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ₹ 20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿದ್ದ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಕಂಡು ಬಂದ ಅವ್ಯವಸ್ಥೆಯ ಚಿತ್ರಣವಿದು.
‘ಸ್ಮಾರ್ಟ್‌ಸಿಟಿ’ ಯೋನೆಯಡಿ ಅಂದವಾಗಿ ಬಸ್ ನಿಲ್ದಾಣ ನಿರ್ಮಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಪ್ರತಿ ವರ್ಷವೂ ಲಕ್ಷಾಂತರ ರೂಪಾಯಿ ಆದಾಯ ತಂದು ಕೊಡುವ ಈ ಬಸ್ ನಿಲ್ದಾಣದ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಸಂಪೂರ್ಣವಾಗಿ ಕಡೆಗಣಿಸಿದೆ. ಇದರಿಂದ ಒಂದೂವರೆ ವರ್ಷದೊಳಗೆ ನಿಲ್ದಾಣ ಅಂದಗೆಟ್ಟಿದೆ.
2024ರಲ್ಲಿ ಉದ್ಘಾಟನೆಗೊಂಡು ಸೇವೆಗೆ ತೆರೆದುಕೊಂಡಿರುವ ಈ ಬಸ್ ನಿಲ್ದಾಣದಲ್ಲಿ ಕಿಡಿಗೇಡಿಗಳು ಏನೇ ಮಾಡಿದರೂ, ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲುಗಡೆಯ ಜಾಗ, ಮೆಟ್ಟಿಲುಗಳು ಸೇರಿದಂತೆ ಎಲ್ಲೆಂದರಲ್ಲಿ ಗುಟ್ಕಾ ಉಗುಳಿದ ಕಲೆಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಉಗಿಯುವವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಮಹಾನಗರ ಪಾಲಿಕೆಯ ಯಾವೊಬ್ಬ ಅಧಿಕಾರಿಗಳೂ ಬಸ್ ನಿಲ್ದಾಣದಲ್ಲಿ ಕಂಡು ಬರುವುದಿಲ್ಲ. ಇದೇ ಕಾರಣಕ್ಕೆ ಗುಟ್ಕಾ ಪ್ರಿಯರು ಯಾವುದೇ ಅಂಜಿಕೆ ಇಲ್ಲದೇ ಎಲ್ಲೆಂದರಲ್ಲಿ ಉಗಿಯುವ ಚಾಳಿಯನ್ನು ಮುಂದುವರಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ತ್ಯಾಜ್ಯ, ನೀರಿನ ಖಾಲಿ ಬಾಟಲಿಗಳನ್ನು ಕಂಡ ಕಂಡಲ್ಲಿ ಬಿಸಾಡಲಾಗಿದೆ. ನಾಯಿಗಳ ಹಾವಳಿಯೂ ಇಲ್ಲಿದೆ.
ಎಲ್ಲೆಡೆ ದೂಳು: ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ದಿನಕ್ಕೊಮ್ಮೆ ಕಸ ಗುಡಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಇಡೀ ಕಟ್ಟಡದಲ್ಲಿ ಎಲ್ಲಿಯೂ ನೆಲಹಾಸಿನ ಸ್ವಚ್ಛತೆಯೇ ನಡೆಸುತ್ತಿಲ್ಲ. ಇದರಿಂದ ಎಲ್ಲಿ ನೋಡಿದರೂ ದೂಳು ಆವರಿಸಿದೆ. ಎಲ್ಲೆಂದರಲ್ಲಿ ಜಾಡು ಕಟ್ಟಿದೆ. ಅಲ್ಲಲ್ಲಿ ಟೈಲ್ಸ್‌ಗಳನ್ನು ಒಡೆದಿವೆ. ಕೆಲವೆಡೆ ಕಿಟಕಿಗಳಿಗೂ ಹಾನಿ ಮಾಡಲಾಗಿದೆ.
ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ: ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇದರ ಪರಿಣಾಮ ಪಾರ್ಕಿಂಗ್ ಜಾಗ, ಮೊದಲ ಹಾಗೂ ಎರಡನೇ ಮಹಡಿಗೆ ಕಾಲಿಡದ ದುಃಸ್ಥಿತಿ ಇದೆ. ಶೌಚಾಲಯಗಳಲ್ಲೂ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಪಾರ್ಕಿಂಗ್ ಜಾಗದಲ್ಲಿ ದುರ್ವಾಸನೆ ಬೀರುತ್ತಿದೆ.
‘ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಆದರೆ, ಮೂತ್ರ ವಿಸರ್ಜನೆಗೆ ₹ 5 ನಿಗದಿಪಡಿಸಿರುವ ಕಾರಣ ಕೆಲವರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ನಿಗದಿಪಡಿಸಿದಂತೆ ಇಲ್ಲಿಯೂ ಮೂತ್ರ ವಿಸರ್ಜನೆಗೆ ₹ 2 ನಿಗದಿಪಡಿಸಬೇಕು’ ಎಂದು ವ್ಯಾಪಾರಿಯೊಬ್ಬರು ಒತ್ತಾಯಿಸಿದರು.
ಬಾಗಿಲು ಮುಚ್ಚಿದ ಮಕ್ಕಳ ಆರೈಕೆ ಕೊಠಡಿ: ಬಸ್ ನಿಲ್ದಾಣದಲ್ಲಿನ ಮಕ್ಕಳ ಆರೈಕೆ ಕೊಠಡಿಗೆ ಬಾಗಿಲು ಹಾಕಲಾಗಿದೆ. ಕೊಠಡಿಯೊಳಗೆ ನಿರುಪಯುಕ್ತ ವಸ್ತುಗಳನ್ನು ರಾಶಿ ಹಾಕಲಾಗಿದೆ. ಒಳಗಡೆ ಯಾರೊಬ್ಬರೂ ಕಾಲಿಡದ ಸ್ಥಿತಿ ಇದೆ. ಕೊಠಡಿಯಲ್ಲಿ ತಾಯಿ– ಮಗುವಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಾದ ಮಹಾನಗರ ಪಾಲಿಕೆಯು ಕಣ್ಣು ಮುಚ್ಚಿಕುಳಿತಿದೆ.
‘ಇಡೀ ಬಸ್ ನಿಲ್ದಾಣದ ಕಟ್ಟಡವೇ ಅಂದಗೆಟ್ಟಿದೆ. ಮೂಲ ಸೌಲಭ್ಯ ಕಲ್ಪಿಸುವುದು ಬೇರೆ ಮಾತು, ಇರುವ ಕಟ್ಟಡವನ್ನಾದರೂ ಸರಿಯಾಗಿ ನಿರ್ವಹಿಸಲಿ. ಪ್ರವಾಸಿಗರು ಈ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಕಂಡರೆ ದಾವಣಗೆರೆ ಬಗ್ಗೆ ಯಾವ ಭಾವನೆಯನ್ನು ಹೊಂದುತ್ತಾರೆ ಎಂಬ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಲಿ’ ಎಂದು ಪ್ರಯಾಣಿಕ ನಾಗಪ್ಪ ಜಿ. ಹೇಳಿದರು.
ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಖಾಸಗಿ ಬಸ್ ನಿಲ್ದಾಣ ಕಟ್ಟಡದ ನಿರ್ವಹಣೆಗೆ ಯಾರೊಬ್ಬರೂ ಇಲ್ಲದಿರುವುದು ಬೇಸರದ ಸಂಗತಿ. ಸ್ವಚ್ಛ ಭಾರತ್ ಅಭಿಯಾನಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ– ಸುರೇಶ್ ಎಂ.ಎಚ್., ಪ್ರಯಾಣಿಕ
‘ಪಾಲಿಕೆಯಿಂದ ಗಂಭೀರ ನಿರ್ಲಕ್ಷ್ಯ’
‘ಪ್ರತೀ ಬಸ್‌ಗೆ ಸ್ಟ್ಯಾಂಡ್ ಶುಲ್ಕವಾಗಿ ದಿನಕ್ಕೆ ₹ 20 ಪಾವತಿಸುತ್ತೇವೆ. ಸ್ಟ್ಯಾಂಡ್ ಶುಲ್ಕ ಹಾಗೂ ಮಳಿಗೆಗಳ ಬಾಡಿಗೆ ರೂಪದಲ್ಲಿ ಮಹಾನಗರ ಪಾಲಿಕೆಯು ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದೆ. ಆದರೆ ಸ್ವಚ್ಛತೆ ಭದ್ರತೆ ಬಸ್ ನಿಲ್ದಾಣದ ನಿರ್ವಹಣೆಯಲ್ಲಿ ಪಾಲಿಕೆಯು ಸಂಪೂರ್ಣ ನಿರ್ಲಕ್ಷ್ಯ ತೋರಿದೆ’ ಎಂದು ಖಾಸಗಿ ಬಸ್‌ಗಳ ಮಾಲೀಕರು ದೂರುತ್ತಾರೆ.
‘ಸಿ.ಸಿ. ಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿವೆ. ರಾತ್ರಿ ಬಸ್ ನಿಲ್ದಾಣದಲ್ಲಿ ಮಲಗಿದವರ ಪರ್ಸ್ ವಾಚ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣಗಳೂ ನಡೆದಿವೆ. ಆದರೂ ಇಲ್ಲಿ ಪೊಲೀಸರು ಸೇರಿದಂತೆ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರಿಗೆ ಗಮನಕ್ಕೆ ತಂದಿದ್ದರೂ ಸ್ಪಂದಿಸಿಲ್ಲ’ ಎಂದು ಹೇಳಿದರು.
ನಿರ್ವಹಣೆಗೆ ಆದ್ಯತೆ ನೀಡುವೆ: ಆಯುಕ್ತರು
‘ಖಾಸಗಿ ಬಸ್ ನಿಲ್ದಾಣದ ಮುಂಭಾಗ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಹೆಚ್ಚಿನ ದೂಳು ಆವರಿಸಿದೆ. ಆಗಾಗ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಸ್ವಚ್ಛತಾ ಸಿಬ್ಬಂದಿಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ’ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದರು.
‘ಮಳಿಗೆಗಳು ಆರಂಭಗೊಳ್ಳದ ಕಾರಣ ಇಡೀ ಬಸ್ ನಿಲ್ದಾಣದ ನಿರ್ವಹಣೆಯು ಸರಿಯಾಗಿ ನಡೆಯುತ್ತಿಲ್ಲ. ಬೀಟ್ ಪೊಲೀಸರು ಆಗಾಗ ಭೇಟಿ ನೀಡುತ್ತಿದ್ದಾರೆ. ಮತ್ತಷ್ಟು ಭದ್ರತೆ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುವುದು. ಗುಟ್ಕಾ ಉಗುಳುವವರಿಗೆ ದಂಡ ವಿಧಿಸುವುದು ಸೇರಿದಂತೆ ಇಡೀ ಬಸ್ ನಿಲ್ದಾಣದ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.