ADVERTISEMENT

ಸಂತೇಬೆನ್ನೂರು | ಜಿಟಿ ಜಿಟಿ ಮಳೆ: ನಳನಳಿಸುತ್ತಿರುವ ಬೆಳೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:29 IST
Last Updated 13 ಜುಲೈ 2024, 15:29 IST
ಸಂತೇಬೆನ್ನೂರು ಸಮೀಪದ ಹೊಲವೊಂದರಲ್ಲಿ ನಳನಳಿಸುತ್ತಿರುವ ಪಾಪ್ ಕಾರ್ನ್ ಮೆಕ್ಕೆಜೋಳ
ಸಂತೇಬೆನ್ನೂರು ಸಮೀಪದ ಹೊಲವೊಂದರಲ್ಲಿ ನಳನಳಿಸುತ್ತಿರುವ ಪಾಪ್ ಕಾರ್ನ್ ಮೆಕ್ಕೆಜೋಳ   

ಸಂತೇಬೆನ್ನೂರು: ಎರಡು ವಾರಗಳಿಂದ ಆಗಾಗ್ಗೆ ಸುರಿವ ಜಿಟಿ ಜಿಟಿ ಮಳೆಗೆ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ನಳನಳಿಸುತ್ತಿವೆ.

ಮಳೆ ಮುಂದುವರಿಯುವ ಆಶಾಭಾವನೆಯಿಂದ ರೈತರಿಗೆ ಬೆಳೆ ಕೈಗೆ ಸಿಗುವ ವಿಶ್ವಾಸ ಮೂಡಿದೆ. ಈಗಾಗಲೇ ರೈತರು ಬಿಡುವು ಕೊಡುವ ಮಳೆಯಲ್ಲಿ ಎಡೆಕುಂಟೆ ಹೊಡೆಯುವ ಕಾರ್ಯದ ಕೊನೆ ಹಂತದಲ್ಲಿದ್ದಾರೆ. ಲಘು ಕಳೆನಾಶಕ ಸಿಂಪಡಿಸಿದ್ದು, ಫಸಲಿನ ಸಾಲುಗಳು ಎದ್ದು ಕಾಣುತ್ತಿವೆ.

ಈ ಭಾಗದ ವಿಶೇಷ ಬೆಳೆ ಪಾಪ್‌ಕಾರ್ನ್ ಮೆಕ್ಕೆಜೋಳ ನಿರಂತರ ಮಳೆಗೆ ಚೇತರಿಸಿಕೊಂಡಿದೆ. ಮೇ ತಿಂಗಳ ಕೊನೆ ಭಾಗದಲ್ಲಿ ಪಾಪ್‌ಕಾರ್ನ್ ಬಿತ್ತನೆ ಬಿರುಸಿನಿಂದ ಸಾಗಿತ್ತು. ಮತ್ತೆ ಮಳೆ ಕೈಕೊಟ್ಟ ಕಾರಣ ರೈತರಲ್ಲಿ ಆತಂಕ ಮನೆ ಮಾಡಿತ್ತು. ಬೆಳೆ ಉಳಿಸಿಕೊಳ್ಳಬೇಕೋ, ಅಳಿಸಿ ಮರುಬಿತ್ತನೆ ಮಾಡಬೇಕೋ ಎಂಬ ದ್ವಂದ್ವದಲ್ಲಿದ್ದರು. ಮುಂಗಾರು ಚುರುಕುಗೊಂಡ ಪರಿಣಾಮ ಬೆಳೆ ಚೇತರಿಸಿಕೊಂಡಿದೆ.

ADVERTISEMENT

ಮುಳ್ಳು ಸಜ್ಜೆ ಕಳೆ ಕಾಟ:

ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ಮುಳ್ಳುಸಜ್ಜೆ ಕಳೆ ರೈತರಿಗೆ ತಲೆನೋವಾಗಿದೆ. ಕಳೆನಾಶಕಕ್ಕೂ ಬಗ್ಗದ ಮುಳ್ಳುಸಜ್ಜೆ ಬೆಳೆಗೆ ಕಂಟಕವಾಗುತ್ತಿದೆ.

ರೈತರು ಮುಳ್ಳುಸಜ್ಜೆಯನ್ನು ಕೀಳತ್ತಿದ್ದಾರೆ. ಕೂಲಿ ಕಾರ್ಮಿಕರಿಂದಲೇ ಮುಳ್ಳು ಸಜ್ಜೆ ತೆರವುಗೊಳಿಸಬೇಕಿದ್ದು, ಇದು ರೈತರಿಗೆ ಹೆಚ್ಚು ಹೊರೆಯಾಗಿದೆ. ಮುಳ್ಳು ಸಜ್ಜೆ ಜೋಳದ ದಂಟಿನ ತರವೇ ಇದ್ದು ಬೆಳೆದಂತೆ ಮುಟ್ಟಿದರೆ ತೆಳು ಹಂದರದ ಮೊನಚಾದ ಮುಳ್ಳುಗಳು ಕೈ ಚುಚ್ಚುತ್ತವೆ. ಕೈಗವುಸು ಹಾಕಿ ಕೀಳುವುದು ಕಂಡುಬರುತ್ತಿದೆ. ಇದರ ಶಾಶ್ವತ ನಿರ್ಮೂಲನೆಗೆ ಕೃಷಿ ಇಲಾಖೆ ಅಧಿಕಾರಿಗಳು ಪರಿಹಾರ ಸೂಚಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.