ADVERTISEMENT

ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ: ಬೆಳೆಗೆ ಜೀವ ಕಳೆ

ವಾಡಿಕೆ ಮಳೆಗಿಂತ ಶೇ 300ರಷ್ಟು ಅಧಿಕ ಮಳೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:14 IST
Last Updated 5 ಜುಲೈ 2022, 4:14 IST
ದಾವಣಗೆರೆಯ ಡಿಆರ್‌ಎಂ ಕಾಲೇಜು ರಸ್ತೆಯಲ್ಲಿ ಸೋಮವಾರ ಸುರಿಯುತ್ತಿದ್ದ ಮಳೆಯಲ್ಲಿ ಜನರು ಕೊಡೆ ಹಿಡಿದು ಸಾಗಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಡಿಆರ್‌ಎಂ ಕಾಲೇಜು ರಸ್ತೆಯಲ್ಲಿ ಸೋಮವಾರ ಸುರಿಯುತ್ತಿದ್ದ ಮಳೆಯಲ್ಲಿ ಜನರು ಕೊಡೆ ಹಿಡಿದು ಸಾಗಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರ ಸೇರಿ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಜಾನೆಯೇ ಶುರುವಾದ ಮಳೆ ಎರಡು ಮೂರು ಗಂಟೆಗಳ ಕಾಲ ನಿರಂತರವಾಗಿ ಸುರಿಯಿತು.

ಬೆಳಿಗ್ಗೆಯಿಂದಲೇ ಮಳೆ ಶುರುವಾಗಿದ್ದರಿಂದ ಮಕ್ಕಳು ಶಾಲೆಗೆ ಹೋಗಲು, ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ತೊಂದರೆಯಾಯಿತು. ಹಲವು ದಿನಗಳಿಂದ ಮಳೆಯಾಗದೇ ಆತಂಕಕ್ಕೆ ಒಳಗಾಗಿದ್ದ ರೈತರಿಗೆ ಈ ಮಳೆ ಖುಷಿ ತಂದಿದೆ. ಮೆಕ್ಕೆಜೋಳ ಬಿತ್ತನೆ ಮಾಡಿ ಮಳೆಗಾಗಿ ರೈತರು ಕಾಯುತ್ತಿದ್ದರು. ಒಣಗುವ ಸ್ಥಿತಿಯಲ್ಲಿದ್ದ ಬೆಳೆಗೆ ಜೀವಕಳೆಬಂದಿದೆ.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸಾಕಷ್ಟು ಬಿದ್ದಿತ್ತು. ನಂತರ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬಿದ್ದಿರಲಿಲ್ಲ. ಭೂಮಿಗೆ ಬಿದ್ದ
ಅಲ್ಪಸ್ವಲ್ಪ ಮಳೆಯಿಂದಲೇ ರೈತರು ಮೆಕ್ಕೆಜೋಳ ಬಿತ್ತಿದ್ದರು. ಆದರೆ 15 ದಿನಗಳಿಂದ ಮಳೆಯಾಗದೇ ಇದ್ದುದರಿಂದ ಸಹಜವಾಗಿಯೇ ರೈತರು ಆತಂಕಕ್ಕೆ ಒಳಗಾಗಿದ್ದರು. ಸೋಮವಾರ ಸುರಿದ ಮಳೆಗೆ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ADVERTISEMENT

ಭತ್ತದ ನಾಟಿಗೆ ಭದ್ರಾ ಜಲಾಶಯ ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಈಗ ಎಲ್ಲ ಕಡೆ ಉತ್ತಮ ಮಳೆಯಾಗುತ್ತಿದ್ದು, ಭತ್ತ ಬಿತ್ತನೆಗೂ ಅನುಕೂಲವಾಗಲಿದೆ.

ಹರಿಹರದಲ್ಲಿ ಹೆಚ್ಚು ಮಳೆ: ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8.30ರವರೆಗೆ ವಾಡಿಕೆ ಮಳೆ 2.5 ಮಿ.ಮೀಗೆ 10 ಮಿ.ಮಿ ಮಳೆ ಬಿದ್ದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಶೇ 300ರಷ್ಟು ಅಧಿಕ ಮಳೆ ಬಿದ್ದಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ 3.6 ಮಿ.ಮೀ ಇದ್ದು, 11.ಮಿ.ಮೀ ಮಳೆ ಬಿದ್ದಿದೆ. ದಾವಣಗೆರೆ ತಾಲ್ಲೂಕಿನಲ್ಲಿ 1.6 ಮಿ.ಮೀಗಿಂತ 12.6 ಮಿ.ಮೀ ಮಳೆ ಬಿದ್ದಿದ್ದು, ಶೇ 420 ಅಧಿಕ ಮಳೆಯಾಗಿದೆ. ಹರಿಹರದಲ್ಲಿ 1.3 ಮಿ.ಮೀಗೆ 12.4 ಮಿ.ಮೀ ಮಳೆ ಬಿದ್ದಿದ್ದು ಶೇ 854 ಮಿ.ಮೀ ಅಧಿಕ ಮಳೆ ಬಿದ್ದಿದೆ.

ಹೊನ್ನಾಳಿಯಲ್ಲಿ 2.5 ಮಿ.ಮೀಗೆ 13 ಮಿ.ಮೀ, ಜಗಳೂರಿನಲ್ಲಿ 1.2 ಮಿ.ಮೀಗೆ 2.4 ಮಿ.ಮೀ, ನ್ಯಾಮತಿಯಲ್ಲಿ 4.8 ಮಿ.ಮೀ ವಾಡಿಕೆ ಮಳೆಗಿಂತ 11.5 ಮಿ.ಮೀ ಮಳೆಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.