ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿದರು
ಪ್ರಜಾವಾಣಿ ಚಿತ್ರ
ದಾವಣಗೆರೆ: ಅಳಿವಿನ ಅಂಚಿಗೆ ಸಾಗಿರುವ ವೃತ್ತಿ ರಂಗಭೂಮಿಯನ್ನು ಉಳಿಸಲು ರಂಗಾಯಣದ ವತಿಯಿಂದ ಕಲಾವಿದರಿಗೆ ತರಬೇತಿ ನೀಡಿ ನಾಟಕ ಕಂಪನಿಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯೊಂದು ರೂಪುಗೊಳ್ಳಬೇಕು ಎಂದು ನಾಟಕ ಕಂಪನಿಗಳ ಮಾಲೀಕರು ಕೋರಿಕೊಂಡರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆಯಲ್ಲಿ ಗುರುವಾರ ನಾಟಕ ಕಂಪನಿಗಳ ಮಾಲೀಕರ ಸಭೆ ನಡೆಯಿತು. ವೃತ್ತಿ ರಂಗಭೂಮಿ ರಂಗಾಯಣದ ಸ್ವರೂಪ, ನಾಟಕ ಕಂಪನಿಗಳ ಸ್ಥಿತಿ–ಗತಿಯ ಬಗ್ಗೆ ವಿವರವಾದ ಚರ್ಚೆ ನಡೆಯಿತು.
‘ವೃತ್ತಿ ರಂಗಭೂಮಿ ಕಲಾವಿದರ ಕೊರತೆ ಎದುರಿಸುತ್ತಿದೆ. ವೃತ್ತಿ ರಂಗಭೂಮಿಗೆ ಪ್ರತ್ಯೇಕವಾಗಿ ಆರಂಭವಾಗಿರುವ ರಂಗಾಯಣ ನೆರವಿಗೆ ಧಾವಿಸುವ ನಿರೀಕ್ಷೆಯಲ್ಲಿದ್ದೇವೆ. ಯುವಸಮೂಹಕ್ಕೆ ನಾಟಕ ತರಬೇತಿ ನೀಡಿ ಸಜ್ಜುಗೊಳಿಸಬೇಕಿದೆ. ನಾಟಕ ಕಂಪನಿಗಳ ಪೋಷಣೆಯ ಜವಾಬ್ದಾರಿಯನ್ನು ರಂಗಾಯಣ ಹೊರಬೇಕಿದೆ’ ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣ, ಮೊಬೈಲ್ ಪೋನ್ ಹಾಗೂ ಧಾರವಾಹಿಗಳ ಪ್ರಭಾವ ಸಮಾಜದ ಮೇಲೆ ಹೆಚ್ಚಾಗಿದೆ. ನಾಟಕಗಳತ್ತ ಯುವ ಸಮೂಹದ ಆಕರ್ಷಣೆ ಕಡಿಮೆಯಾಗಿದೆ. ರಂಗಭೂಮಿಯನ್ನು ಹೊಸ ರೀತಿಯಲ್ಲಿ ಕಟ್ಟುವ ಕೆಲಸ ಆಗಬೇಕು ಎಂದು ಸಲಹೆ ಮುಂದಿಟ್ಟರು.
‘ವೃತ್ತಿ ರಂಗಭೂಮಿ ರಂಗಾಯಣ ಕಲಾವಿದರಿಗೆ ಕನಿಷ್ಠ ಮೂರು ವರ್ಷ ತರಬೇತಿ ನೀಡಬೇಕು. ಮೊದಲ ವರ್ಷದ ತರಬೇತಿ ಮುಗಿದ ಬಳಿಕ ನಾಟಕ ಕಂಪನಿಗಳಿಗೆ ಕಳುಹಿಸಬೇಕು. ರಂಗ ಪ್ರಯೋಗಗಳ ಮೂಲಕ ಅವರು ಇನ್ನಷ್ಟು ಪರಿಪಕ್ವತೆ ಸಾಧಿಸುವ ಅವಕಾಶ ಕಲ್ಪಿಸಬೇಕು’ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ ಸಲಹೆ ನೀಡಿದರು.
‘ಮಲ್ಲಿಕಾರ್ಜುನ ಕಡಕೋಳ ಅವರು ವೃತ್ತಿ ರಂಗಭೂಮಿ ರಂಗಾಯಣಕ್ಕೆ ಭದ್ರ ಅಡಿಪಾಯ ಹಾಕುವ ವಿಶ್ವಾಸ ಮೂಡಿದೆ. ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿ ಲಭ್ಯವಾಗಿರುವ ಭೂಮಿಯಲ್ಲಿ ರೆಪರ್ಟರಿ ಪ್ರಾರಂಭಿಸಬೇಕು. ಕಂಪನಿ ನಾಟಕಗಳ ಪರಂಪರೆ ಬಿಂಬಿಸುವ ವಸ್ತುಸಂಗ್ರಹಾಲಯ ಕೂಡ ನಿರ್ಮಿಸಬೇಕು’ ಎಂದು ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್ ಮಾಸ್ತರ್ ಕೋರಿಕೆ ಮುಂದಿಟ್ಟರು.
ನಾಟಕ ಕಂಪನಿಗಳ ಮಾಲೀಕರಾದ ಪ್ರೇಮಾ ಗುಳೇದಗುಡ್ಡ, ಜ್ಯೋತಿ, ಫಯಾಜ್, ಮಹಾದೇವ್ ಸೇರಿ ಅನೇಕರು ಭಾಗವಹಿಸಿದ್ದರು.
ಹರಿಹರ ತಾಲ್ಲೂಕಿನ ಕೊಂಡಜ್ಜಿ ಬಳಿ ರಂಗಾಯಣಕ್ಕೆ 10 ಎಕರೆ ಭೂಮಿ ಮೀಸಲಿದೆ. ವೃತ್ತಿ ರಂಗಭೂಮಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ ನಿರ್ಮಿಸಲಾಗುವುದುರವಿಚಂದ್ರ, ವಿಶೇಷಾಧಿಕಾರಿ, ವೃತ್ತಿ ರಂಗಭೂಮಿ ರಂಗಾಯಣ
ಸಕ್ಕರಿ ಬಾಳಾಚಾರ್ಯ ಅವರ ಶ್ರೀವೀರ ನಾರಾಯಣ ಪ್ರಸಾತ ಕೃತಪುರ ಕರ್ನಾಟಕ ನಾಟಕ ಮಂಡಳಿ ಆರಂಭವಾದ ದಿನವಾದ ನ.14ನ್ನು ವೃತ್ತಿ ರಂಗಭೂಮಿ ದಿನವನ್ನಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಸಭೆ ನಿರ್ಣಯ ಕೈಗೊಂಡಿತು.
‘ವೃತ್ತಿ ರಂಗಭೂಮಿ ರಂಗಾಯಣವನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ವಿವರವಾದ ಚರ್ಚೆ ನಡೆಯುತ್ತಿದೆ. ರಂಗಮಂದಿರ ನಿರ್ಮಾಣದ ಬಳಿಕ ಕಲಾವಿದರಿಗೆ ತರಬೇತಿ ನೀಡಿ ನಾಟಕ ಕಂಪನಿಗಳಿಗೆ ಕಳುಹಿಸಿಕೊಡಲಾಗುವುದು’ ಎಂದು ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.