ದಾವಣಗೆರೆ: ಬೀದಿನಾಯಿ ಹಾವಳಿ ನಿಯಂತ್ರಿಸಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ (ಎಬಿಸಿ) ಮಹಾನಗರ ಪಾಲಿಕೆ ಕೊನೆಗೂ ಸಜ್ಜಾಗಿದೆ. ಮೂರು ತಿಂಗಳ ನಿರಂತರ ಹುಡುಕಾಟದ ಬಳಿಕ ನಗರದ ಹೊರಭಾಗದಲ್ಲಿ ಶಸ್ತ್ರಚಿಕಿತ್ಸೆಗೆ ಸ್ಥಳ ಲಭ್ಯವಾಗಿದ್ದು, ಸಿದ್ಧತೆಗಳು ನಡೆಯುತ್ತಿವೆ. ಬೀದಿನಾಯಿ ಸೆರೆಹಿಡಿಯುವ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ.
ನಗರ ವ್ಯಾಪ್ತಿಯಲ್ಲಿ 16,000 ಬೀದಿನಾಯಿಗಳಿವೆ ಎಂಬುದು ಮಹಾನಗರ ಪಾಲಿಕೆಯ ಅಂದಾಜು. ಈ ಪೈಕಿ 10,000 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನೀಡಿರುವುದಾಗಿ ಪಾಲಿಕೆ ಘೋಷಿಸಿಕೊಂಡಿದೆ. ಉಳಿದ 6,000 ಸಾವಿರ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಕಾರ್ಯವನ್ನು 2025ರಲ್ಲಿ ಪೂರ್ಣಗೊಳಿಸುವ ಗುರಿಯನ್ನು ಪಾಲಿಕೆ ಹೊಂದಿದೆ.
‘ಮನುಷ್ಯನಿಗೆ ಎಷ್ಟೇ ಕಿರುಕುಳ ನೀಡಿದರೂ ಬೀದಿನಾಯಿಗಳನ್ನು ಸಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಅವುಗಳನ್ನು ಹಿಡಿದು ಕಾಡು ಅಥವಾ ಬೇರೆಡೆ ಕೂಡ ಬಿಡುವಂತಿಲ್ಲ. ನಾಯಿಗಳ ಸಂಖ್ಯೆ ಹೆಚ್ಚಾಗದಂತೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾತ್ರ ಮಾಡಬಹುದು. ಬೆಂಗಳೂರಿನ ಎಎಸ್‌ಆರ್‌ಇ ಸಂಸ್ಥೆ ನಾಯಿಗಳ ಶಸ್ತ್ರಚಿಕಿತ್ಸೆಗೆ ₹ 99 ಲಕ್ಷಕ್ಕೆ ಗುತ್ತಿಗೆ ಪಡೆದಿದೆ. ಒಂದು ವರ್ಷದ ಕಾಲಮಿತಿಯಲ್ಲಿ ಈ ಕಾರ್ಯ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ’ ಎಂದು ಮಹಾನಗರ ಪಾಲಿಕೆಯ ಮೂಲಗಳು ಮಾಹಿತಿ ನೀಡಿವೆ.
ಸ್ಥಳಕ್ಕೆ 3 ತಿಂಗಳ ಹುಡುಕಾಟ:
ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನೀಡುವ ಸಂಸ್ಥೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾನ್ಯತೆ ಪಡೆದಿರುವುದು ಕಡ್ಡಾಯ. ಪಾಲಿಕೆ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಬೆಂಗಳೂರಿನ ಸಂಸ್ಥೆಗೆ ಗುತ್ತಿಗೆ ಸಿಕ್ಕಿದೆ. ಆದರೆ, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಕಟ್ಟಡ ಪಾಲಿಕೆಯಲ್ಲಿಲ್ಲದ ಕಾರಣಕ್ಕೆ ಈ ಕಾರ್ಯ ವಿಳಂಬವಾಗಿದೆ.
‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದ ಪಶುವೈದ್ಯಕೀಯ ಆಸ್ಪತ್ರೆಯ ಕಟ್ಟಡದಲ್ಲಿ ಹಲವು ವರ್ಷಗಳಿಂದ ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಈ ಕಟ್ಟಡ ದುಸ್ಥಿತಿಯಲ್ಲಿರುವುದರಿಂದ ಬೇರೆ ಕಟ್ಟಡಕ್ಕೆ ಹುಡುಕಾಟ ನಡೆಯಿತು. ಖಾಸಗಿ ಭೂಮಿಯನ್ನು ಬಾಡಿಗೆ ಪಡೆದು ಶಸ್ತ್ರಚಿಕಿತ್ಸಾ ಕೊಠಡಿ ಸೇರಿ ಇತರ ಸಿದ್ಧತೆಗಳನ್ನು ಮಾಡಿಕೊಳ್ಳಲು ಪರಿಶೀಲಿಸಲಾಯಿತು. ಆದರೆ, ಬೀದಿನಾಯಿಗಳ ಎಬಿಸಿಗೆ ಭೂಮಿಯನ್ನು ಬಾಡಿಗೆ ನೀಡಲು ಯಾರೊಬ್ಬರೂ ಆಸಕ್ತಿ ತೋರಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 5,000 ಚದರ ಅಡಿಯ ಸ್ಥಳಾವಕಾಶ ನಗರದ ಹೊರವಲಯದಲ್ಲಿ ಲಭ್ಯವಾಗಿದೆ. ಸೆರೆಹಿಡಿದು ತರುವ ಬೀದಿನಾಯಿಗಳನ್ನು ಶುಚಿಗೊಳಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ನೀಡಲು ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಾರ್ಯ ಪೂರ್ಣಗೊಂಡ ನಂತರ ಬೀದಿನಾಯಿಗಳ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.
ಪ್ರತಿ ನಾಯಿಗೆ ₹ 1,650 ವೆಚ್ಚ:
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆಗೆ ಪ್ರತಿ ನಾಯಿಗೆ ಸರ್ಕಾರ ₹ 1,650 ನಿಗದಿಪಡಿಸಿದೆ. ಬೀದಿನಾಯಿ ಸೆರೆಹಿಡಿದು ಶಸ್ತ್ರಚಿಕಿತ್ಸೆ ನೀಡಿ ಸುರಕ್ಷಿತವಾಗಿ ಅದೇ ಸ್ಥಳದಲ್ಲಿ ಬಿಡುವುದು ಗುತ್ತಿಗೆ ಪಡೆದ ಸಂಸ್ಥೆಯ ಜವಾಬ್ದಾರಿ. ಇದಕ್ಕೆ ಅಗತ್ಯವಿರುವ ಜನ, ಉಪಕರಣ ಹಾಗೂ ವಾಹನವನ್ನು ಸಂಸ್ಥೆಯೇ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
‘ನಾಯಿ ಸೆರೆ ಕಾರ್ಯಾಚರಣೆಗೆ ತರಬೇತಿ ಪಡೆದ ತಂಡ ಬರಲಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗದ ಹಾಗೂ ರೇಬಿಸ್ ಲಸಿಕೆ ಪಡೆಯದೇ ಇರುವ ಬೀದಿನಾಯಿಗಳನ್ನು ಹುಡುಕಲಾಗುತ್ತದೆ. ತಂಡದ ಸದಸ್ಯರು ತಲೆಗೆ ಕ್ಯಾಮೆರಾ ಕಟ್ಟಿಕೊಂಡು ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾರೆ. ಈ ಕ್ಯಾಮೆರಾ ಸೆರೆಹಿಡಿಯುವ ಚಿತ್ರ ಹಾಗೂ ವಿಡಿಯೊ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಸೆರೆಹಿಡಿದ ಸ್ಥಳದಲ್ಲಿಯೇ ಬೀದಿನಾಯಿ ಮರಳಿ ಬಿಡಲು ಇದರಿಂದ ಅನುಕೂಲವಾಗುತ್ತದೆ’ ಎಂದು ಅಧಿಕಾರಿ ವಿವರಿಸಿದರು.
ಬೀದಿನಾಯಿ ಬಗ್ಗೆ ಆಕ್ರೋಶ
ನಗರದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿರುವುದಕ್ಕೆ ಸಂಬಂಧಿಸಿದಂತೆ ಜನರು ಆಕ್ರೋಶಭರಿತರಾಗಿದ್ದಾರೆ. ಈ ಕುರಿತು ಪಾಲಿಕೆಯ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಗರದ ತರಕಾರಿ ಮಾರುಕಟ್ಟೆ ಮಾಂಸದ ಮಾರುಕಟ್ಟೆ ಖಾಸಗಿ ಬಸ್ ನಿಲ್ದಾಣದ ಸಮೀಪ ನಾಯಿಗಳ ಹಾವಳಿ ವಿಪರೀತವಾಗಿದೆ. ಹೊರವಲಯದ ಬಡಾವಣೆಯಲ್ಲಿ ಒಬ್ಬೊಬ್ಬರೇ ಸಂಚರಿಸಲು ಆತಂಕಪಡುವ ವಾತಾವರಣವಿದೆ. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ಬೀದಿನಾಯಿಗಳು ಕೂಡ ಮರಿಗಳಿಗೆ ಜನ್ಮನೀಡಿದ ಆರೋಪಗಳಿವೆ. ‘ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಬಳಿಕ ಬೀದಿನಾಯಿ ಕಿವಿ ಕತ್ತರಿಸಲಾಗುತ್ತದೆ. 10000 ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನೀಡಿದ ಬಗ್ಗೆ ದಾಖಲೆ ಇವೆ. ಶಸ್ತ್ರಚಿಕಿತ್ಸೆಗೆ ಒಳಗಾಗದ ಬೀದಿನಾಯಿಗಳು ಮಾತ್ರವೇ ಮರಿಗಳಿಗೆ ಜನ್ಮನೀಡಿವೆ’ ಎಂಬುದು ಪಾಲಿಕೆಯ ಸ್ಪಷ್ಟನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.