ದಾವಣಗೆರೆ: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ವಿಧಿಸಲಾಗುವ ದಂಡ ಪಾವತಿಸಲು ಆಸಕ್ತಿ ಕಂಡುಬರುತ್ತಿಲ್ಲ. ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಹೀಗೆ ರವಾನೆಯಾದ ಸ್ವಯಂಚಾಲಿತ ನೋಟಿಸ್‌ಗಳಿಂದ ₹ 16 ಕೋಟಿ ದಂಡ ವಸೂಲಿ ಬಾಕಿ ಉಳಿದಿದೆ.
2020ರ ಜನವರಿಯಿಂದ 2024ರ ಡಿಸೆಂಬರ್‌ವರೆಗೆ ಸಂಚಾರ ನಿಯಮ ಉಲ್ಲಂಘನೆಗೆ ರವಾನೆಯಾಗಿರುವ 2.96 ಲಕ್ಷ ನೋಟಿಸ್‌ಗಳು ವಿಲೇವಾರಿಗೆ ಬಾಕಿ ಇವೆ. ಇವುಗಳಲ್ಲಿ 2023ರ ಜನವರಿಯಿಂದ 2024ರ ಡಿಸೆಂಬರ್‌ವರೆಗೆ 1.93 ಲಕ್ಷ ನೋಟಿಸ್ ರವಾನೆಯಾಗಿದ್ದು, 9,788 ನೋಟಿಸ್‌ಗಳಿಂದ ₹ 51 ಲಕ್ಷ ದಂಡ ಮಾತ್ರ ಪಾವತಿಯಾಗಿದೆ. ಈ ಅವಧಿಯ 1.83 ಲಕ್ಷ ನೋಟಿಸ್‌ಗಳಿಂದ ₹ 9.63 ಕೋಟಿ ಬಾಕಿ ಇದೆ. ಕಳೆದ ಎರಡು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ನಗರದಲ್ಲಿ ಅಳವಡಿಸಿದ ಸಿ.ಸಿ. ಟಿವಿ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘನೆಯ ಮೇಲೆ ನಿಗಾ ಇಟ್ಟಿವೆ. ‘ಇನ್‌ಫರ್ಮೇಷನ್ ಅಂಡ್ ಕಮ್ಯೂನಿಕೇಷನ್ ಟೆಕ್ನಾಲಜಿ’ (ಐಸಿಟಿ) ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಸ್ವಯಂ ಚಾಲಿತವಾಗಿ ನೋಟಿಸ್ ರವಾನೆಯಾಗುತ್ತಿದೆ. ನಿತ್ಯ ಸರಾಸರಿ 800 ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗುತ್ತಿವೆ.
‘ಅಂಚೆ ಮೂಲಕ ಮನೆ ತಲುಪಿದ ನೋಟಿಸ್‌ಗೆ ಸ್ಪಂದಿಸುವವರ ಸಂಖ್ಯೆ ಕಡಿಮೆ ಇದೆ. ಬೆರಳೆಣಿಕೆಯಷ್ಟು ಜನರು ಮಾತ್ರ ಸ್ವಯಂ ಪ್ರೇರಿತವಾಗಿ ದಂಡ ಪಾವತಿಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹಳೆಯ ದಂಡವನ್ನೂ ವಸೂಲಿ ಮಾಡುತ್ತಿದ್ದೇವೆ. ಹೀಗೆ ಹಳೆ ಪ್ರಕರಣಗಳಿಗೆ ದಂಡ ಕಟ್ಟುವವರ ಸಂಖ್ಯೆ ಕೂಡ ಕಡಿಮೆ ಇದೆ’ ಎನ್ನುತ್ತಾರೆ ಸಂಚಾರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಮಂಜುನಾಥ್.
ವಾಹನದ ನೋಂದಣಿಯ ಸಮಯದಲ್ಲಿ ಒದಗಿಸಿದ ಮೊಬೈಲ್ ಫೋನ್‌ಗೆ ಸಂಚಾರ ನಿಯಮ ಉಲ್ಲಂಘನೆಯ ಸಂದೇಶವೂ ಹೋಗುತ್ತದೆ. ಆದರೆ, ಮೊಬೈಲ್ ಸಂಖ್ಯೆಯನ್ನು ಬದಲಿಸಿಕೊಂಡಿರುವ ಹಾಗೂ ವಾಹನ ಮಾರಾಟ ಮಾಡಿದಾಗ ಮೊಬೈಲ್ ಸಂಖ್ಯೆ ಪರಿಷ್ಕರಣೆ ಮಾಡಿಕೊಳ್ಳದ ಕಾರಣಕ್ಕೆ ಇಂತಹ ಸಂದೇಶಕ್ಕೆ ಪ್ರತಿಸ್ಪಂದಿಸುವವರು ಕಡಿಮೆ ಎನ್ನುತ್ತಾರೆ ಪೊಲೀಸರು.
‘10ಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ದಂಡ ಪಾವತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ. ಮತ್ತೊಮ್ಮೆ ಇಂತಹ ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡಲಾಗುವುದು’ ಎನ್ನುತ್ತಾರೆ ಮಂಜುನಾಥ್.
ದಂಡ ಪರಿಶೀಲನೆಗೆ ಅವಕಾಶ
ವಾಹನವೊಂದು ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದನ್ನು ಮಾಲೀಕರು ಅಥವಾ ಸವಾರರು ಸುಲಭವಾಗಿ ಪರಿಶೀಲಿಸಿಕೊಳ್ಳುವ ವ್ಯವಸ್ಥೆಯೊಂದನ್ನು ರೂಪಿಸಲು ‘ಸ್ಮಾರ್ಟ್ ಸಿಟಿ’ ಮುಂದಾಗಿದೆ. ಈ ಕುರಿತು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಜೊತೆಗೆ ಚರ್ಚೆ ನಡೆಸಿದೆ. ಸಂಚಾರ ನಿಯಮ ಉಲ್ಲಂಘನೆಯ ಮಾಹಿತಿ ಪರಿಶೀಲಿಸಿಕೊಳ್ಳಲು ‘ಪರಿವಾಹನ್’ ಜಾಲತಾಣದಲ್ಲಿ ಅವಕಾಶವಿದೆ. ವಾಹನ ಸಂಖ್ಯೆ ನೀಡಿದರೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿಯನ್ನು ತೋರಿಸುತ್ತದೆ. ಆದರೆ ಈ ಜಾಲತಾಣಕ್ಕೆ ಜನರು ನಿರೀಕ್ಷಿತ ಪ್ರಮಾಣದಲ್ಲಿ ಭೇಟಿ ನೀಡುತ್ತಿಲ್ಲ. ‘ಡಿವಿಜಿ ಹೆಲ್ಪ್’ ಮೊಬೈಲ್ ಆ್ಯಪ್ ಮೂಲಕವೇ ಸಂಚಾರ ನಿಯಮ ಉಲ್ಲಂಘನೆಯ ಮಾಹಿತಿ ಪಡೆಯುವ ವ್ಯವಸ್ಥೆ ರೂಪಿಸುವ ಬಗ್ಗೆ ಆಲೋಚಿಸಿದ್ದೇವೆ. ಆಗ ವಾಹನದ ಮೇಲಿನ ದಂಡದ ಮಾಹಿತಿಯನ್ನು ಜನರು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ’ ಎಂದು ಸ್ಮಾರ್ಟ್‌ಸಿಟಿ ಲಿಮಿಟೆಡ್ ಡಿಜಿಎಂ ಜಿ.ಆರ್.ಮಮತಾ ತಿಳಿಸಿದರು.
ದಂಡ ಸಂಗ್ರಹ ಕೇಂದ್ರಕ್ಕೆ ಚಿಂತನೆ
ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ದಂಡ ಪಾವತಿಸಲು ಅಂಚೆ ಇಲಾಖೆ ಹಾಗೂ ಸಂಚಾರ ಪೊಲೀಸ್ ಠಾಣೆಯಲ್ಲಿ ಮಾತ್ರ ಅವಕಾಶವಿದೆ. ಮನೆಗೆ ತಲುಪಿದ ನೋಟಿಸ್ ಹಿಡಿದು ದಂಡ ಪಾವತಿಗೆ ಈ ಎರಡು ಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆ ವಿರಳ. ಹೀಗಾಗಿ ದಂಡ ಪಾವತಿಗೆ ಸಾರ್ವಜನಿಕವಾಗಿ ಕೇಂದ್ರಗಳನ್ನು ತೆರೆಯುವ ಆಲೋಚನೆ ಕೂಡ ‘ಸ್ಮಾರ್ಟ್‌ಸಿಟಿ’ ಮಾಡುತ್ತಿದೆ. ‘ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಸ್ವಯಂಚಾಲಿತವಾಗಿ ರವಾನೆಯಾಗುವ ನೋಟಿಸ್‌ಗಳಿಗೂ ಹಾಗೂ ದಂಡ ಸಂಗ್ರಹಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾರ್ವಜನಿಕ ಸ್ಥಳಗಳಲ್ಲಿ ದಂಡ ಸಂಗ್ರಹ ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯವಿದೆ. ಈ ಕುರಿತು ಆಲೋಚನೆ ಮಾಡಲಾಗುತ್ತಿದೆ’ ಎಂದು ಸ್ಮಾರ್ಟ್‌ಸಿಟಿ ಲಿಮಿಟೆಡ್ ಡಿಜಿಎಂ ಜಿ.ಆರ್.ಮಮತಾ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.