ADVERTISEMENT

ದಾವಣಗೆರೆ: ಸೋತು ಗೆದ್ದ ‘ಚಿನ್ನದ ವಿದ್ಯಾರ್ಥಿನಿ’

ಪಿಯುನಲ್ಲಿ ಅನುತ್ತೀರ್ಣಳಾಗಿದ್ದ ರಿಯಾಗೆ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ

ಜಿ.ಬಿ.ನಾಗರಾಜ್
Published 3 ಏಪ್ರಿಲ್ 2025, 6:08 IST
Last Updated 3 ಏಪ್ರಿಲ್ 2025, 6:08 IST
ದಾವಣಗೆರೆಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸೌಂದರ್ಯ ಎಸ್.ಜಿ, ಶಾಶ್ವತಾ ಆರ್.ಟಿ, ವರ್ಷಾ ಸಣ್ಣಪ್ಪನವರ್, ಐ.ಕೆ.ರಿಯಾ, ಸ್ನೇಹಾ ಎಸ್, ಅಕ್ಷತಾ ಸಿ.ಎನ್, ಸಿಂದೂ ಕೆ, ಭವ್ಯಶ್ರೀ ಎನ್.ಪಿ ಚಿನ್ನದ ಪದಕ ಹಿಡಿದು ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸೌಂದರ್ಯ ಎಸ್.ಜಿ, ಶಾಶ್ವತಾ ಆರ್.ಟಿ, ವರ್ಷಾ ಸಣ್ಣಪ್ಪನವರ್, ಐ.ಕೆ.ರಿಯಾ, ಸ್ನೇಹಾ ಎಸ್, ಅಕ್ಷತಾ ಸಿ.ಎನ್, ಸಿಂದೂ ಕೆ, ಭವ್ಯಶ್ರೀ ಎನ್.ಪಿ ಚಿನ್ನದ ಪದಕ ಹಿಡಿದು ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣಳಾದಾಗ ಬದುಕು ಭಾರವಾಗಿತ್ತು. ಪಾಲಕರ ಹೊರತು ಯಾರೊಬ್ಬರೂ ನನ್ನೊಂದಿಗೆ ಇರಲಿಲ್ಲ. ಮನದಾಳದ ಆಸಕ್ತಿಯನ್ನು ಅಚಲಗೊಳಿಸಿ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆದೆ. ಅಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿ ಸಿಕ್ಕಿತು..’

ಹೀಗೆ ಮಾತನಾಡುತ್ತ ಭಾವುಕರಾದವರು ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ ಪಡೆದ ಐ.ಕೆ.ರಿಯಾ. ಪಾಲಕರ ಒತ್ತಡಕ್ಕೆ ಮಣಿದು ಪದವಿಪೂರ್ವ ಹಂತದಲ್ಲಿ ಸೋಲು ಕಂಡಿದ್ದ ಅವರು ಗೆಲುವಾಗಿ ಪರಿವರ್ತನೆ ಮಾಡಿಕೊಂಡ ಬಗೆಯೇ ಸ್ಫೂರ್ತಿದಾಯಕವಾಗಿದೆ.

ಹರಿಹರದ ಎಚ್‌.ಕುಬೇರ ನಾಯ್ಕ ಹಾಗೂ ರಶ್ಮಿ ದಂಪತಿಯ ಪುತ್ರಿ ಐ.ಕೆ.ರಿಯಾ, ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದ ಚಿನ್ನದ ವಿದ್ಯಾರ್ಥಿನಿ. ದಾವಣಗೆರೆಯ ಗಾಂಧಿನಗರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಆಗಿರುವ ಕುಬೇರ ನಾಯ್ಕ ಅವರಿಗೆ ಪುತ್ರಿ ವೈದ್ಯಯಾಗಬೇಕು ಎಂಬ ಕನಸಿತ್ತು. ತಂದೆಯ ಒತ್ತಾಸೆಗೆ ಮಣಿದು ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿದ್ದರು. ಆದರೆ, ರಸಾಯನ ವಿಜ್ಞಾನದಲ್ಲಿ ಉತ್ತೀರ್ಣರಾಗಲು ಅವರಿಗೆ ಸಾಧ್ಯವಾಗಲಿಲ್ಲ.

ADVERTISEMENT

‘ಅದು ತುಂಬಾ ಕಷ್ಟದ ಸಮಯವಾಗಿತ್ತು. ಬದುಕಿನಲ್ಲಿ ಸೋಲು ಕಂಡ ಭಾವ ಆವರಿಸಿತ್ತು. ಆಗ ತಂದೆಯೇ ಮತ್ತೆ ಸ್ಫೂರ್ತಿ ತುಂಬಿದರು. ಗಣಿತದ ಕುರಿತು ಇದ್ದ ಆಸಕ್ತಿ ವಾಣಿಜ್ಯ ವಿಭಾಗಕ್ಕೆ ಕರೆತಂದಿತು. ವಿಜ್ಞಾನ ವಿಭಾಗವನ್ನು ಕೈಬಿಟ್ಟು ವಾಣಿಜ್ಯ ವಿಭಾಗದಲ್ಲಿ ಮತ್ತೊಮ್ಮೆ ಪ್ರಥಮ ಪಿಯುಗೆ ಪ್ರವೇಶ ಪಡೆದೆ. ಅಲ್ಲಿಂದ ಬದುಕು ಮತ್ತೊಂದು ದಿಕ್ಕಿಗೆ ಹೊರಳಿತು’ ಎಂದಾಗ ಕಣ್ಣಾಲಿಗಳು ತುಂಬಿದ್ದವು.

ರಿಯಾ ನಿತ್ಯ ಹರಿಹರದಿಂದ ತೋಳಹುಣಸೆಯ ಶಿವಗಂಗೋತ್ರಿಗೆ ಬರುತ್ತಿದ್ದರು. ಬೆಳಿಗ್ಗೆ 10ಕ್ಕೆ ಆರಂಭವಾಗುವ ತರಗತಿಗೆ ಹಾಜರಾಗಲು ಎರಡು ಗಂಟೆ ಮೊದಲೇ ಮನೆಯಿಂದ ಹೊರಡಬೇಕಿತ್ತು. ದಾವಣಗೆರೆಗೆ ಬಂದು ಮತ್ತೊಂದು ಬಸ್‌ ಹಿಡಿದು ವಿಶ್ವವಿದ್ಯಾಲಯ ತಲುಪಬೇಕಿತ್ತು. ರಿಯಾ ನಿತ್ಯ 4 ಗಂಟೆಯನ್ನು ಸಂಚಾರದಲ್ಲಿಯೇ ಕಳೆಯುತ್ತಿದ್ದರು.

‘ಬೆಳಿಗ್ಗೆ 8ಕ್ಕೆ ಮನೆ ಬಿಡುತ್ತಿದ್ದ ನಾನು ಸಂಜೆ 6ಕ್ಕೆ ಮರಳುತ್ತಿದ್ದೆ. ಒಂದು ಗಂಟೆ ವಿಶ್ರಾಂತಿ ಪಡೆದು ಅಧ್ಯಯನದಲ್ಲಿ ತೊಡಗುತ್ತಿದ್ದೆ. ಬಸ್‌ ವ್ಯವಸ್ಥೆ ಚೆನ್ನಾಗಿದ್ದಿದ್ದರೆ ಅನುಕೂಲವಾಗುತ್ತಿತ್ತು. ಸಂಸದರು, ಶಾಸಕರು ಇತ್ತ ಗಮನ ಹರಿಸಿದರೆ ವಿದ್ಯಾರ್ಥಿಗಳಿಗೆ ಒಳಿತಾಗುತ್ತದೆ. ವಾಣಿಜ್ಯಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಪ್ರಾಧ್ಯಾಪಕಿಯಾಗಬೇಕು ಎಂಬ ಹಂಬಲ ನನ್ನದು’ ಎಂದು ಸಂತಸ ಹಂಚಿಕೊಂಡರು.

ಯುಪಿಎಸ್‌ಸಿ ಪರೀಕ್ಷೆಗೆ ನೆರವಾಗುವ ಕಾರಣಕ್ಕೆ ಇಂಗ್ಲಿಷ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಐಎಎಸ್‌ ಅಧಿಕಾರಿಯಾಗಬೇಕು ಎಂಬುದು ನನ್ನ ಮಹದಾಸೆ
ಎಸ್‌.ಸ್ನೇಹಾ 3 ಚಿನ್ನದ ಪದಕ ವಿಜೇತೆ
ತಂದೆಯಂತೆ ನ್ಯಾಯಾಧೀಶೆ ಅಗಬೇಕು ಎಂಬುದು ನನ್ನ ಗುರಿ. ಬಿ.ಎಸ್ಸಿ ಬಳಿಕ ಕಾನೂನು ವ್ಯಾಸಂಗ ಮಾಡುತ್ತಿದ್ದೇನೆ. ಪದವಿಯಲ್ಲಿ ಚಿನ್ನದ ಪದಕ ಸಿಕ್ಕಿರುವುದು ಖುಷಿ ಕೊಟ್ಟಿದೆ
ರಕ್ಷಾ ವಿ.ಆನಂದ್‌ 3 ಚಿನ್ನದ ಪದಕ ವಿಜೇತೆ
ಆಟೊ ಚಾಲಕನ ಪುತ್ರಿಗೆ 4 ಪದಕ
ಆಟೊ ಚಾಲಕ ಚಿತ್ರದುರ್ಗದ ತಿಪ್ಪೇಸ್ವಾಮಿ ಅವರ ಪುತ್ರಿ ಆರ್‌.ಟಿ.ಶಾಶ್ವತಾ ಅರ್ಥಶಾಸ್ತ್ರ ವಿಭಾಗದಲ್ಲಿ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಚಿತ್ರದುರ್ಗದ ಜಿ.ಆರ್‌.ಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡಿದ ಶಾಶ್ವತಾಗೆ ಹೆಚ್ಚು ಚಿನ್ನದ ಪದಕ ಸಿಕ್ಕ ಮಾಹಿತಿ ಘಟಿಕೋತ್ಸವಕ್ಕೆ ಬಂದಾಗಲೇ ತಿಳಿಯಿತು. ಆಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ‘ವಾಣಿಜ್ಯಶಾಸ್ತ್ರ ವ್ಯಾಸಂಗ ಮಾಡಬೇಕು ಎಂಬ ಹಂಬಲವಿತ್ತು. ಆದರೆ ಈ ವಿಭಾಗಕ್ಕೆ ಪ್ರವೇಶ ಪಡೆಯುವಷ್ಟು ಆರ್ಥಿಕ ಶಕ್ತಿ ಕುಟುಂಬದಲ್ಲಿ ಇರಲಿಲ್ಲ. ಆಟೊ ಚಾಲನೆ ಮಾಡುವ ತಂದೆಯ ದುಡಿಮೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಕಡಿಮೆ ಶುಲ್ಕ ಎಂಬ ಕಾರಣಕ್ಕೆ ಕಲಾ ವಿಭಾಗಕ್ಕೆ ಪ್ರವೇಶ ಪಡೆದಿದ್ದೆ. ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಆಗಬೇಕು ಎಂಬ ಗುರಿ ಇದೆ’ ಎಂದು ಸಂತಸ ಹಂಚಿಕೊಂಡರು.
ಪತ್ರಿಕೆ ಹಂಚಿ ಚಿನ್ನ ಗೆದ್ದ ಲಕ್ಷ್ಮಣ್‌
ಪತ್ರಿಕೆ ವಿತರಿಸುತ್ತ ಶಿಕ್ಷಣ ಮುಂದುವರಿಸಿದ ಆರ್‌.ಲಕ್ಷ್ಮಣ್‌ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಪತ್ನಿಯೊಂದಿಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದ ಇವರು ಪ್ರಥಮ ರ‍್ಯಾಂಕಿನೊಂದಿಗೆ ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಕೋಗುಂಡೆ ಗ್ರಾಮದ 38 ವರ್ಷದ ಆರ್‌.ಲಕ್ಷ್ಮಣ್‌ 10 ವರ್ಷದಿಂದ ಪತ್ರಿಕಾ ವಿತರಕರಾಗಿದ್ದಾರೆ. ‘ಪ್ರಜಾವಾಣಿ’ ಸೇರಿ ಹಲವು ಪತ್ರಿಕೆಗಳನ್ನು ಮನೆ–ಮನೆಗೆ ತಲುಪಿಸುತ್ತ ಶಿಕ್ಷಣವನ್ನು ಮುಂದುವರಿಸಿದ್ದಾರೆ. ‘ಪತ್ರಿಕೆಯ ಮೇಲಿನ ವ್ಯಾಮೋಹ ಸ್ನಾತಕೋತ್ತರ ಪದವಿಗೆ ಕರೆತಂದಿತು. ಪತ್ನಿ ಸುಮಲತಾ ಕನ್ನಡ ವಿಭಾಗಕ್ಕೆ ಪ್ರವೇಶ ಪಡೆದರು. ಬೆಳಿಗ್ಗೆ ಪತ್ರಿಕೆ ವಿತರಿಸಿ ಪತ್ನಿಯೊಂದಿಗೆ ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದೆ’ ಎಂದು ಪುತ್ರಿಯ ಕೊರಳಿಗೆ ಚಿನ್ನದ ಪದಕ ಹಾಕಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.