ADVERTISEMENT

ದಾವಣಗೆರೆ: ಹಮಾಲಿಯ ಪುತ್ರನಿಗೆ ಚಿನ್ನದ ಪದಕ

ರ‍್ಯಾಂಕ್‌ ವಿಜೇತರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:44 IST
Last Updated 31 ಜನವರಿ 2026, 6:44 IST
13ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಪುಟ್ಟರಾಜು ಎಂ.ಆರ್. ಅವರು ತಂದೆ ರುದ್ರೇಶ್ ಜೊತೆಗೆ ಸಂತಸ ಹಂಚಿಕೊಂಡರು
13ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಪುಟ್ಟರಾಜು ಎಂ.ಆರ್. ಅವರು ತಂದೆ ರುದ್ರೇಶ್ ಜೊತೆಗೆ ಸಂತಸ ಹಂಚಿಕೊಂಡರು   

ದಾವಣಗೆರೆ: ‘ಹಮಾಲಿಯಾಗಿ ಕೆಲಸ ಮಾಡುತ್ತಿರುವ ತಂದೆ ಮಾಸಿಕ ಸರಾಸರಿ ₹ 10,000 ದುಡಿಯುತ್ತಾರೆ. ಇದರಲ್ಲಿ ಕುಟುಂಬವನ್ನು ಮುನ್ನಡೆಸುವುದೇ ಕಷ್ಟ. ಹೀಗಾಗಿ, ಎಂಜಿನಿಯರಿಂಗ್‌ ಕನಸು ಕೈಬಿಟ್ಟು ಸಾಮಾನ್ಯ ವಿಜ್ಞಾನ ಪದವಿಯತ್ತ ಹೆಜ್ಜೆ ಹಾಕಿದೆ. ಶೈಕ್ಷಣಿಕ ಸಾಧನೆಗೆ ಆರ್ಥಿಕ ಸಂಕಷ್ಟ ತೊಡಕಾಗಲಿಲ್ಲ’ ಎಂದ ಪುಟ್ಟರಾಜು ಎಂ.ಆರ್‌. ಕ್ಷಣಕಾಲ ಮಾತು ನಿಲ್ಲಿಸಿದರು.

ಇಲ್ಲಿನ ತೋಳಹುಣಸೆಯಲ್ಲಿ ಶುಕ್ರವಾರ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭೌತವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿರುವ ಪುಟ್ಟರಾಜು, ಕೊರಳಿಗೆ ಹಾಕಿಕೊಂಡಿದ್ದ ಮೂರು ಚಿನ್ನದ ಪದಕಗಳನ್ನು ಒಮ್ಮೆ ದಿಟ್ಟಿಸಿದರು. ಮಗನ ಸಾಧನೆಯಿಂದ ಸಂತಸಗೊಂಡಿದ್ದ ತಂದೆ ರುದ್ರಪ್ಪ ಮತ್ತಿಕಟ್ಟಿ ಜೊತೆಗಿದ್ದರು.

‘ಎಂಜಿನಿಯರಿಂಗ್ ಪದವಿ ಪಡೆಯುವ ಕನಸು ಕಂಡಿದ್ದೆ. ಕುಟುಂಬದ ಆರ್ಥಿಕ ಸ್ಥಿತಿ ಇದಕ್ಕೆ ಪೂರಕವಾಗಿರಲಿಲ್ಲ. ಹೀಗಾಗಿ, ಪದವಿ ಪೂರ್ವ ಶಿಕ್ಷಣ ಪೂರೈಸಿ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಪ್ರವೇಶ ಪಡೆದೆ. ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಗಣಿತವನ್ನು ಐಚ್ಛಿಕ ವಿಷಯಗಳಾಗಿ ಅಧ್ಯಯನ ಮಾಡಿದೆ. ವಿಜ್ಞಾನಿಯಾಗುವ ಆಸೆಯೊಂದಿಗೆ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದೆ’ ಎಂದು ವಿವರಿಸಿದರು.

ADVERTISEMENT

ಪ್ರಥಮ ರ‍್ಯಾಂಕ್‌ಗೆ ಭಾಜನರಾಗಿರುವ ಪುಟ್ಟರಾಜು, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. 2 ವರ್ಷಗಳವರೆಗೆ ಪ್ರತಿ ತಿಂಗಳು ₹ 32,000 ವಿದ್ಯಾರ್ಥಿ ವೇತನ ಕೈಸೇರಲಿದೆ. ಆ ಬಳಿಕ 3 ವರ್ಷ ಮಾಸಿಕ ₹ 37,000 ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.

‘ಅಣುವಿಜ್ಞಾನದಲ್ಲಿ ಸಂಶೋಧನೆ ಮಾಡುವ ಅಪೇಕ್ಷೆ ಹೊಂದಿದ್ದೇನೆ. ಪ್ರಾಧ್ಯಾಪಕರೊಬ್ಬರು ಮಾರ್ಗದರ್ಶನಕ್ಕೆ ಉತ್ಸುಕತೆ ತೋರಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಥವಾ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೇರಬೇಕು ಎಂಬ ಕನಸನ್ನೂ ಕಟ್ಟಿಕೊಂಡಿದ್ದೇನೆ. ಫೆ.7ರಂದು ನಡೆಯಲಿರುವ ಗ್ರ್ಯಾಜುಯೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್ ಎಂಜಿನಿಯರಿಂಗ್‌ (ಗೇಟ್‌) ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇನೆ’ ಎಂದು ಮಾಹಿತಿ ನೀಡಿದರು.

13ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು (ಎಡದಿಂದ) ಜೆ.ಹುಜ್ಮಾ ಅನುಷಾ ಎಂ.ಎಂ ವಿಜಯಶ್ರೀ ಬಿ.ಎಂ ಕೌನೈನ್ ತಬಸ್ಸುಮ್ ದೀಪಾ ಆರ್. ಪ್ರಿಯಾಂಕಾ ಡಿ.ಆರ್. ಪುಷ್ಪಾ ಜೆ. ಕೀರ್ತನ್ ಎಸ್. ಕವನಾ ಪಿ.ಎಂರುಚಿತಾ ಡಿ.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಔಷಧಗಳ ಸಂಶೋಧನೆಯತ್ತ ಒಲವು ಬೆಳೆಸಿಕೊಂಡೆ
– ರಚಿತಾ ಡಿ., 4 ಚಿನ್ನದ ಪದಕ ವಿಜೇತೆ ಜೀವರಸಾಯನ ವಿಜ್ಞಾನ ವಿಭಾಗ
ಧ್ವನಿ ಚೆನ್ನಾಗಿದೆ ಶಿಕ್ಷಕಿಯಾಗು ಎಂದು ಅನೇಕರು ಪ್ರೇರಣೆ ನೀಡಿದ್ದರು. ಬಿಎಸ್ಸಿ ಬಳಿಕ ಬಿ.ಇಡಿಗೆ ಸೇರಿದೆ. ಕುಟುಂಬ ಹೆಚ್ಚು ಪ್ರೋತ್ಸಾಹ ನೀಡಿತು.
– ಹುಜ್ಮಾ ಜೆ.,3 ಚಿನ್ನದ ಪದಕ ವಿಜೇತೆ ಬಿ.ಇಡಿ ಪದವಿ

ಕನ್ನಡ ಮಾಧ್ಯಮ; ಇಂಗ್ಲಿಷ್‌ನಲ್ಲಿ ರ‍್ಯಾಂಕ್‌ ಪದವಿವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಿ.ಎಂ. ವಿಜಯಶ್ರೀ ಇಂಗ್ಲಿಷ್‌ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ‘ಈ ಸಾಧನೆಗೆ ಕಲಿಕೆಯಲ್ಲಿನ ನಿಷ್ಠೆ ಹಾಗೂ ಪರಿಶ್ರಮವೇ ಕಾರಣ’ ಎಂದು ಹೆಮ್ಮೆಯಿಂದ ಬೀಗಿದರು.

ದಾವಣಗೆರೆ ತಾಲ್ಲೂಕಿನ ಬಸವನಾಳು ಗ್ರಾಮದ ವಿಜಯಶ್ರೀ ಮೂಲತಃ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ.

ಇಂಗ್ಲಿಷ್‌ ಭಾಷೆಗೆ ಇರುವ ಉದ್ಯೋಗವಕಾಶಗಳು ಸ್ನಾತಕೋತ್ತರ ಪದವಿ ಪಡೆಯುವಂತೆ ಪ್ರೇರೇಪಿಸಿವೆ. ಇದರಲ್ಲಿ ಯಶಸ್ಸು ಕೂಡ ಕಂಡಿದ್ದಾರೆ. ‘ಶಿಕ್ಷಕರಾಗಿದ್ದ ತಂದೆ ಇಂಗ್ಲಿಷ್‌ ಸ್ನಾತಕೋತ್ತರ ಪದವಿಯ ಕನಸು ಬಿತ್ತಿದರು. ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ಆರಂಭದಲ್ಲಿ ತುಂಬಾ ಕಷ್ಟವಾಯಿತು. ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಕೈಹಿಡಿಯಿತು’ ಎಂದು ಅಭಿಪ್ರಾಯ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.