ADVERTISEMENT

ದಾವಣಗೆರೆ: ಜನರ ಜೀವ ಹಿಂಡುತ್ತಿದೆ ವಾಯುಮಾಲಿನ್ಯ

ರಾಮಮೂರ್ತಿ ಪಿ.
Published 14 ಏಪ್ರಿಲ್ 2025, 7:46 IST
Last Updated 14 ಏಪ್ರಿಲ್ 2025, 7:46 IST
ಹರಿಹರ ನಗರದೊಳಗೆ ಹಾದುಹೋಗುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ವಿಭಜಕದ ಪಕ್ಕದಲ್ಲಿ ಮಣ್ಣು ಶೇಖರಣೆಗೊಂಡಿದ್ದು, ಮಾಲಿನ್ಯಕ್ಕೆ ಕಾರಣವಾಗುತ್ತಿದೆ
ಹರಿಹರ ನಗರದೊಳಗೆ ಹಾದುಹೋಗುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ವಿಭಜಕದ ಪಕ್ಕದಲ್ಲಿ ಮಣ್ಣು ಶೇಖರಣೆಗೊಂಡಿದ್ದು, ಮಾಲಿನ್ಯಕ್ಕೆ ಕಾರಣವಾಗುತ್ತಿದೆ   

ದಾವಣಗೆರೆ: ‘ಮನೆಯಿಂದ ಹೊರಬಂದು ರಸ್ತೆಗಿಳಿಯುತ್ತಿದ್ದಂತೆ ಸಣ್ಣ ಸಣ್ಣ ದೂಳಿನ ಕಣಗಳು ಮುಖಕ್ಕೆ ರಾಚುತ್ತವೆ. ಬೈಕ್‌, ಆಟೊ, ಬಸ್‌ ಸೇರಿದಂತೆ ಭಾರಿ ವಾಹನಗಳ ವಿಷಕಾರಿ ಹೊಗೆಯು ಉಸಿರುಕಟ್ಟಿಸುತ್ತದೆ. ರಸ್ತೆಯಲ್ಲಿನ ಮಣ್ಣು, ಕಾರ್ಖಾನೆಗಳ ವಿಷಕಾರಿ ಅನಿಲ, ಕಟ್ಟಡಗಳ ತ್ಯಾಜ್ಯ, ವಾಹನಗಳ ಹೊಗೆಯಿಂದಾಗಿ ಶುದ್ಧ ಗಾಳಿಯೇ ಮರೆಯಾಗಿದೆ. ಚಿಕ್ಕ ಮಕ್ಕಳೊಂದಿಗೆ ಮನೆಯಿಂದ ಹೊರ ಹೋಗಲೂ ಭಯ ಪಡುವಂತಾಗಿದೆ..’

ಇಲ್ಲಿನ ಬಾಷಾ ನಗರದ ನಿವಾಸಿ ಬಾಲಪ್ಪ ಅವರ ಬೇಸರದ ನುಡಿಗಳಿವು. ಇದು ಬಾಷಾನಗರದ ನಿವಾಸಿಗಳು ಮತ್ತು ಬಾಲಪ್ಪ ಅವರಷ್ಟೇ ಎದುರಿಸುತ್ತಿರುವ ಸಮಸ್ಯೆಯಲ್ಲ. ಇಡೀ ದಾವಣಗೆರೆ ನಗರದ ನಿವಾಸಿಗಳು ನಿತ್ಯವೂ ಎದುರಿಸುತ್ತಿರುವ ಗಂಭೀರ ಸಮಸ್ಯೆ. ಅದರಲ್ಲೂ ಮಂಡಕ್ಕಿ ಬಟ್ಟಿಗಳಿರುವ ಪ್ರದೇಶದಲ್ಲಿ ವಾಸಿಸುತ್ತಿರುವವರ ಬದುಕು ತೀವ್ರ ಯಾತನಾಮಯವಾಗಿದೆ. ಬಾಷಾ ನಗರ, ಚೌಡೇಶ್ವರಿ ನಗರ, ಮಂಡಕ್ಕಿ ಬಟ್ಟಿ ಲೇಔಟ್, ಪಾರ್ವತಮ್ಮ ಕಾಲೊನಿ, ಸಿದ್ದರಾಮೇಶ್ವರ ಕಾಲೊನಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳ ಬದುಕು ಉಸಿರುಕಟ್ಟುವಂತಿದೆ.

ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಚಿಣ್ಣರು, ವೃದ್ಧರು ಹಾಗೂ ಅಸ್ತಮಾ ಸೇರಿದಂತೆ ಇನ್ನಿತರ ಉಸಿರಾಟ ಸಂಬಂಧಿತ ಕಾಯಿಲೆಗಳಿಂದ ನರಳುತ್ತಿರುವವರ ಬದುಕು ನರಕಮಯವಾಗುತ್ತಿದೆ. ಒಂದೆಡೆ ನೆತ್ತಿ ಸುಡುವ ಬಿಸಿಲು, ಇನ್ನೊಂದೆಡೆ ಆಗಾಗ ಬೀಸುವ ಬಿರುಗಾಳಿಯಿಂದಾಗಿ ವಾತಾವರಣದಲ್ಲಿ ಭಾರಿ ಪ್ರಮಾಣದಲ್ಲಿ ದೂಳು ಆವರಿಸುತ್ತಿದೆ. ಮಳೆಗಾಲದಲ್ಲಿ ಆಗಾಗ ವರುಣ ಕೃಪೆ ತೋರುವುದರಿಂದ ದೂಳು ಹರಡುವ ಪ್ರಮಾಣ ಕಡಿಮೆ ಇರುತ್ತದೆ. ಆದರೀಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ.

ADVERTISEMENT

‘ನಗರದಲ್ಲಿ ವರ್ಷವಿಡೀ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇರುತ್ತದೆ. ಕಟ್ಟಡಗಳ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ವಾತಾವರಣದಲ್ಲಿ ದೂಳು ಆವರಿಸುತ್ತಿದೆ. ಮಹಾನಗರ ಪಾಲಿಕೆಯು ರಸ್ತೆಗಳಲ್ಲಿನ ಮಣ್ಣನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದಾಗಿ ವಾಹನಗಳು ವೇಗವಾಗಿ ಸಂಚರಿಸಿದಾಗ ರಸ್ತೆಯಲ್ಲಿನ ದೂಳಿನ ಸಣ್ಣ ಕಣಗಳು ವಾತಾವರಣ ಸೇರುತ್ತಿವೆ. ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ’ ಎಂಬುದು ಹಿರಿಯ ನಾಗರಿಕರ ದೂರು.

ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಂದ ಹೊರಸೂಸುತ್ತಿರುವ ದಟ್ಟ ಹೊಗೆ

ನಗರದಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ಸೂಚ್ಯಂಕ (ಏರ್ ಕ್ವಾಲಿಟಿ ಇಂಡೆಕ್ಸ್– ಐಕ್ಯೂಇ) ಕುಸಿಯುತ್ತಿದೆ. ಕಳೆದ ಐದು ವರ್ಷಗಳ ಅಂಕಿ ಅಂಶವನ್ನು ಗಮನಿಸಿದರೆ ವಾಯು ಗುಣಮಟ್ಟ ಸೂಚ್ಯಂಕ ಹಾವು–ಏಣಿ ಆಟವಾಡಿದಂತಿದೆ. ನಗರದಲ್ಲಿ ಮೂರು ವಾಯು ಗುಣಮಟ್ಟ ಮಾಪನ ಕೇಂದ್ರಗಳಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳನ್ನು ನಿರ್ವಹಿಸುತ್ತಿದೆ. 1 ಸ್ವಯಂಚಾಲಿತ ಹಾಗೂ 2 ಮ್ಯಾನ್ಯುವಲ್ ಕೇಂದ್ರಗಳು ನಗರದಲ್ಲಿನ ವಾಯು ಮಾಲಿನ್ಯ ಪ್ರಮಾಣದ ಅಂಕಿ ಅಂಶವನ್ನು ಒದಗಿಸುತ್ತಿವೆ. 

ಈ ಕೇಂದ್ರಗಳ ವ್ಯಾಪ್ತಿ 50ರಿಂದ 100 ಮೀ. ಮಾತ್ರ. ಈ ವ್ಯಾಪ್ತಿಯಲ್ಲಿ ಕಂಡುಬರುವಂತಹ ಮಾಲಿನ್ಯದ ಪ್ರಮಾಣವನ್ನು ಮಾತ್ರ ಇವು ಗಣನೆಗೆ ತೆಗೆದುಕೊಂಡು ಅಂಕಿ ಅಂಶ ಒದಗಿಸುತ್ತವೆ. ನಗರದಲ್ಲಿನ ಮೂರು ಕೇಂದ್ರಗಳ ಪೈಕಿ ಯಾವೊಂದೂ ಮಂಡಕ್ಕಿ ಬಟ್ಟಿ ಲೇಔಟ್ ಪ್ರದೇಶದಲ್ಲಿಲ್ಲ. ಇದರಿಂದಾಗಿ ಆ ಪ್ರದೇಶದಲ್ಲಿನ ಅಂಕಿಅಂಶಗಳು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ದೇವರಾಜ ಅರಸು ಬಡಾವಣೆಯಲ್ಲಿ 2 ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಬಳಿ 1 ಕೇಂದ್ರವಿದೆ.

ಬೇರೆ ಪ್ರದೇಶಕ್ಕೆ ಹೋಲಿಸಿದರೆ ಮಂಡಕ್ಕಿ ಬಟ್ಟಿ ಸುತ್ತಮುತ್ತಲು ವಾಯುಮಾಲಿನ್ಯ ಜಾಸ್ತಿ ಇದೆ. ಮಂಡಕ್ಕಿ ಬಟ್ಟಿಗಳ ಸ್ಥಳಾಂತರಕ್ಕೆ ಪಾಲಿಕೆಗೆ ಸಲಹೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ
ರಾಜಶೇಖರ ಪುರಾಣಿಕ್ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
- ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಅನುದಾನದ ಲಭ್ಯತೆಯನ್ನು ಆಧರಿಸಿ ರಸ್ತೆಯಲ್ಲಿನ ದೂಳನ್ನು ಹೀರುವ ಯಂತ್ರ ಖರೀದಿಸಲಾಗುವುದು
ಸುಬ್ರಹ್ಮಣ್ಯ ಶ್ರೇಷ್ಠಿ ನಗರಸಭೆ ಪೌರಾಯುಕ್ತ ಹರಿಹರ
ಕಾರ್ಗಿಲ್ ಕಾರ್ಖಾನೆಯಿಂದ ದುರ್ವಾಸನೆ ಬರುತ್ತದೆ. ಆಧುನಿಕ ತಂತ್ರಜ್ಞಾನ ಉಪಯೋಗಿಸಿ ದುರ್ವಾಸನೆಯನ್ನು ನಿವಾರಿಸಬಹುದು. ಹೀಗಿದ್ದರೂ ಕಾರ್ಖಾನೆಯವರು ಖರ್ಚು ಮಾಡಲು ಹಿಂದೇಟು ಹಾಕುತ್ತಿದ್ದಾರೆ
ರಮೇಶ್ ಎಂ.ಆರ್. ಬೆಳ್ಳೂಡಿ ಹರಿಹರ
ಹರಿಹರ ಪಾಲಿಫೈಬರ್ಸ್ ಕಾರ್ಖಾನೆಯಿಂದ ಬರುವ ದುರ್ವಾಸನೆಯ ಪ್ರಮಾಣ ಕೆಲವೊಮ್ಮೆ ತೀವ್ರವಾಗಿರುತ್ತದೆ. ಆಗ ಉಸಿರಾಟಕ್ಕೂ ಸಮಸ್ಯೆಯಾಗುತ್ತದೆ
ನಾಗರಾಜ್ ತೇಲ್ಕರ್ ಹರಿಹರ
ಸಕ್ಕರೆ ಕಾರ್ಖಾನೆ ಹೊರ ಸೂಸುವ ದುರ್ವಾಸನೆ ಮತ್ತು ಬೂದಿಯು ಗ್ರಾಮಸ್ಥರ ಬದುಕನ್ನು ನರಕಮಯವಾಗಿಸಿದೆ. ಬೆಳೆಗಳ ಇಳುವರಿ ಕುಸಿದಿದೆ. ಜನರಿಗೆ ಚರ್ಮವ್ಯಾಧಿ ಕಾಡುತ್ತಿದೆ. ಸಂಬಂಧಿಸಿದವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ
ಎಸ್.ಕಾಳಪ್ಪ ಚಿಕ್ಕಬಿದರಿ ಹರಿಹರ

‘ವಾಯು ಗುಣಮಟ್ಟ ಸೂಚ್ಯಂಕವನ್ನು ಎರಡು ರೀತಿಯಲ್ಲಿ ದಾಖಲಿಸಲಾಗುತ್ತಿದೆ. ಪಿಎಂ10– ದೊಡ್ಡ ದೂಳಿನ ಕಣ (ಕಣ್ಣಿಗೆ ಕಾಣುವಂತಹದ್ದು) ಹಾಗೂ ಪಿಎಂ 2.5– ಸಣ್ಣ ದೂಳಿನ ಕಣ (ಕಣ್ಣಿಗೆ ಕಾಣದ್ದು). ವಾರ್ಷಿಕವಾಗಿ ಪಿಎಂ10 ಪ್ರಮಾಣ 60ಕ್ಕಿಂತ ಕಡಿಮೆ ಹಾಗೂ ಪಿಎಂ 2.5 ಪ್ರಮಾಣ 40ಕ್ಕಿಂತ ಕಡಿಮೆ ಇರಬೇಕು. ಇವುಗಳ ಪ್ರಮಾಣ ಹೆಚ್ಚಾದರೆ ನಾಗರಿಕರಲ್ಲಿ ಉಸಿರಾಟ ಸೇರಿದಂತೆ ಇನ್ನಿತರ ಹಲವು ಅನಾರೋಗ್ಯ ಸಮಸ್ಯೆ ಕಂಡುಬರುತ್ತವೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.

ಕಳೆದ ಐದು ವರ್ಷಗಳ ಪೈಕಿ 2021ರಲ್ಲಿ ಮಾತ್ರ ವಾಯು ಗುಣಮಟ್ಟ ಸೂಚ್ಯಂಕ ಉತ್ತಮವಾಗಿತ್ತು. ಕೋವಿಡ್ ಕಾರಣಕ್ಕೆ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಆ ವರ್ಷ ವಾಯುಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಇನ್ನುಳಿದ ವರ್ಷಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಾಗಿಯೇ ದಾಖಲಾಗುತ್ತಿದೆ.

ವಾಯು ಮಾಲಿನ್ಯ ತಡೆಗೆ ಏನೆಲ್ಲ ಕ್ರಮ ವಹಿಸಬಹುದು?

  • ಗಿಡಮರಗಳನ್ನು ಹೆಚ್ಚಾಗಿ ಬೆಳೆಸುವುದು

  • ವಾಹನಗಳ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸುವುದು / ಸಾರ್ವಜನಿಕ ಸಾರಿಗೆ ಬಳಸುವುದು *

  • ಇವಿ (ಎಲೆಕ್ಟ್ರಿಕ್ ವೆಹಿಕಲ್ಸ್) ವಾಹನಗಳನ್ನು ಬಳಸುವುದು

  • ರಾಷ್ಟ್ರೀಯ ರಾಜ್ಯ ಹೆದ್ದಾರಿ ಬದಿಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವುದು

  • ತ್ಯಾಜ್ಯ ಪ್ಲಾಸ್ಟಿಕ್ ಸುಡುವುದನ್ನು ತಡೆಗಟ್ಟುವುದು

  • ಅವಧಿ ಮೀರಿದ ವಾಹನಗಳನ್ನು ಬಳಸದಿರುವುದು

  • ಕಟ್ಟಡದ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸುವುದು ವಾಯು ಮಾಲಿನ್ಯದ ದುಷ್ಪರಿಣಾಮಗಳು

  • ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳು

  • ದೃಷ್ಟಿ ಮಂಜಾಗುವಿಕೆ

  • ಗರ್ಭಿಣಿಯರಲ್ಲಿ ಗರ್ಭಸ್ರಾವದ ಸಾಧ್ಯತೆ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ

  • ಪಿತ್ತಕೋಶ ಮೂತ್ರಕೋಶ ಕರುಳಿಗೆ ಘಾಸಿ ಸಂತಾನೋತ್ಪತ್ತಿ ಮೇಲೆ ಅಡ್ಡ ಪರಿಣಾಮ

  • ಶ್ವಾಸಕೋಶದ ಕ್ಯಾನ್ಸರ್

ಕಾರ್ಖಾನೆ ದೂಳು ಹೆದ್ದಾರಿ ಮಣ್ಣು

– ಇನಾಯತ್ ಉಲ್ಲಾ ಟಿ.

ಹರಿಹರ: ಹರಿಹರೇಶ್ವರ ದೇವಸ್ಥಾನದ ಕಾರಣಕ್ಕೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಹರಿಹರವು 1941ರಲ್ಲಿ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ ಆರಂಭದೊಂದಿಗೆ ಕೈಗಾರಿಕಾ ನಗರವಾಗಿ ಬೆಳೆಯಲು ಆರಂಭಿಸಿತು. ಟೂಲ್ ಇಂಡಸ್ಟ್ರಿಯಾದ ಕಿರ್ಲೋಸ್ಕರ್ ಕಾರ್ಖಾನೆ ಪರಿಸರಕ್ಕೆ ಮಾರಕವಾಗಿರಲಿಲ್ಲ.

ವಾಯು ಮಾಲಿನ್ಯದ ಪ್ರಮೇಯವೂ ಎದುರಾಗಿರಲಿಲ್ಲ. ಆದರೆ 1971ರಲ್ಲಿ ಗಡಿಯಂಚಿನ ರಾಣೇಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣದಲ್ಲಿ ತಲೆಎತ್ತಿದ ಹರಿಹರ ಪಾಲಿಫೈರ್ಸ್ ಕಾರ್ಖಾನೆಯ ಕಾರ್ಯಾರಂಭದೊಂದಿಗೆ ವಾಯು ಹಾಗೂ ಜಲ ಮಾಲಿನ್ಯ ಹೆಚ್ಚಾಗತೊಡಗಿತು. ಹರಿಹರ ತಾಲ್ಲೂಕಿನ ಗಡಿಯಂಚಿನ ಹರಪನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ 2000ನೇ ಇಸವಿ ನಂತರದಲ್ಲಿ ಆರಂಭವಾದ ಸಕ್ಕರೆ ಕಾರ್ಖಾನೆ ತಾಲ್ಲೂಕಿನ ಬೆಳ್ಳೂಡಿ ಗ್ರಾಮ ಸಮೀಪದ ಕಾರ್ಗಿಲ್ ಕಾರ್ಖಾನೆ ಸಹಸ್ರಾರು ಮಣ್ಣಿನ ಇಟ್ಟಿಗೆ ಬಟ್ಟಿಗಳು ಹಾಗೂ ನಗರದೊಳಗೆ ಹಾದು ಹೋಗಿರುವ 2 ರಾಜ್ಯ ಹೆದ್ದಾರಿಗಳಿಂದಾಗಿ ತಾಲ್ಲೂಕಿನಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚುತ್ತಲೇ ಇದೆ.

ಹರಿಹರ ಪಾಲಿಫೈರ್ಸ್ ಎಂಬುದು ಮೂಲತಃ ಒಂದು ರಾಸಾಯನಿಕ ಕಾರ್ಖಾನೆ. ತುಂಗಭದ್ರಾ ನದಿಯ ಜಲ ಮತ್ತು ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಆರೋಪ ಇದರ ಮೇಲಿದೆ. ಹಲವು ಪರಿಸರವಾದಿಗಳ ಹೋರಾಟದ ಫಲವಾಗಿ ಜಲಮಾಲಿನ್ಯ ತಕ್ಕಮಟ್ಟಿಗೆ ತಗ್ಗಿದೆ ಎನಿಸಿದರೂ ವಾಯು ಮಾಲಿನ್ಯ ಈಗಲೂ ಮುಂದುವರಿದಿದೆ. ಈ ಕಾರ್ಖಾನೆಯ ಎತ್ತರದ ಹೊಗೆ ಗೂಡುಗಳು ಹೊರಸೂಸುವ ಕೆಟ್ಟ ವಾಸನೆ ರಾಣೇಬೆನ್ನೂರು ಹಾಗೂ ಹರಿಹರ ತಾಲ್ಲೂಕಿನ ಹತ್ತಾರು ಗ್ರಾಮಗಳ ಜನರ ನಿದ್ದೆಗೆಡಿಸಿದೆ ಎಂದು ಸ್ಥಳೀಯರು ದೂರುತ್ತಾರೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಆರಂಭವಾದ ಸಕ್ಕರೆ ಕಾರ್ಖಾನೆಯೊಂದರಿಂದಲೂ ಮಾಲಿನ್ಯ ಹೆಚ್ಚುತ್ತಿದೆ ಎಂದು ಸುತ್ತಮುತ್ತಲಿನ ಗ್ರಾಮಗಳ ಜನರು ಆರೋಪಿಸಿದ್ದಾರೆ.

ಈ ಕಾರ್ಖಾನೆ ಹೊರಸೂಸುವ ಕಪ್ಪು ಬೂದಿ ತಾಲ್ಲೂಕಿನ ಚಿಕ್ಕಬಿದರಿ ಸಾರಥಿ ಹಾಗೂ ಇತರೆ ಗ್ರಾಮಗಳ ನಿವಾಸಿಗಳ ಬದುಕನ್ನು ಹೈರಾಣಾಗಿಸಿದೆ. ರೈತರ ಜಮೀನುಗಳಲ್ಲಿನ ಬೆಳೆ ಮನೆಯಲ್ಲಿನ ದವಸ ಧಾನ್ಯ ಬಟ್ಟೆ ಅಡುಗೆ ಪಾತ್ರೆ ನೀರಿನಲ್ಲೂ ಈ ಕಪ್ಪು ಹಾರುಬೂದಿ ಕಾಣಿಸಿಕೊಳ್ಳುತ್ತಿದೆ. ತಾಲ್ಲೂಕಿನ ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಾರ್ಖಾನೆಯೂ ದುರ್ವಾಸನೆ ಬೀರುತ್ತಿದೆ. ಕಾರ್ಖಾನೆ ಸುತ್ತಲಿನ ಬೆಳ್ಳೂಡಿ ಹನಗವಾಡಿ ರಾಮತೀರ್ಥ ಬ್ಯಾಲದಹಳ್ಳಿ ಎಕ್ಕೆಗೊಂದಿ ಸಲಗನಹಳ್ಳಿ ಕಡ್ಲೆಗೊಂದಿ ಬನ್ನಿಕೋಡು ಶಂಷೀಪುರ ಹಾಗೂ ಇತರೆ ಗ್ರಾಮಗಳ ಜನರು ಕೆಟ್ಟ ವಾಸನೆಯಿಂದ ಬಸವಳಿದಿದ್ದಾರೆ. ಈ ಕಾರ್ಖಾನೆಯಿಂದ ಆಗುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ 7–8 ವರ್ಷಗಳ ಹಿಂದೆ ಕಾರ್ಖಾನೆ ಗೇಟಿನ ಮುಂದೆ ಧರಣಿ ನಡೆಸಿದ್ದರು.

ತುಂಗಭದ್ರಾ ನದಿಯಂಚಿನ ಗ್ರಾಮಗಳ ಸರಹದ್ದಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಟ್ಟಿಗೆ ಬಟ್ಟಿಗಳಿವೆ. ಇಟ್ಟಿಗೆ ಸುಡುವಾಗ ಹೊರ ಸೂಸುವ ಹೊಗೆ ದೂಳು ಬೂದಿಯು ಗುತ್ತೂರು ಸೇರಿದಂತೆ ಹತ್ತಾರು ಗ್ರಾಮಗಳ ಜನರ ಬದುಕಿನ ಮೇಲಿನ ದುಷ್ಪರಿಣಾಮ ಬೀರಿದೆ. ನಗರದೊಳಗೆ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ಹಾಗೂ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಗಳು 5–6 ಕಿ.ಮೀ. ಹಾದು ಹೋಗಿವೆ. ಇವುಗಳ ಮಧ್ಯದ ವಿಭಜಕ ಹಾಗೂ ಇಕ್ಕೆಲಗಳಲ್ಲಿ ಶೇಖರಗೊಳ್ಳುವ ಮಣ್ಣು ವಾಹನಗಳು ಚಲಿಸುವಾಗ ಸಣ್ಣ ದೂಳಿನ ಕಣಗಳ ರೂಪದಲ್ಲಿ ಸುತ್ತಲಿನ ವಾತಾವರಣ ಸೇರುತ್ತಿದೆ. ಆ ಮೂಲಕ ಜನರ ಜೀವ ಹಿಂಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.