ADVERTISEMENT

ದಾವಣಗೆರೆ|ಜಿಲ್ಲೆಯ 17.04 ಲಕ್ಷ ಜನರ ಸಮೀಕ್ಷೆ: 4.41 ಲಕ್ಷ ಮನೆಗಳ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:15 IST
Last Updated 20 ಅಕ್ಟೋಬರ್ 2025, 6:15 IST
<div class="paragraphs"><p>ದಾವಣಗೆರೆಯ ಲೇಬರ್ ಕಾಲೊನಿಯಲ್ಲಿ ಸಮೀಕ್ಷರು ಮನೆ–ಮನೆಗೆ ತೆರಳಿ ಮಾಹಿತಿ ಪಡೆದರು </p></div>

ದಾವಣಗೆರೆಯ ಲೇಬರ್ ಕಾಲೊನಿಯಲ್ಲಿ ಸಮೀಕ್ಷರು ಮನೆ–ಮನೆಗೆ ತೆರಳಿ ಮಾಹಿತಿ ಪಡೆದರು

   

ಪ್ರಜಾವಾಣಿ ಚಿತ್ರ

ದಾವಣಗೆರೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಭಾನುವಾರ ನಿರ್ಣಾಯಕ ಘಟ್ಟ ತಲುಪಿತು. ಜಿಲ್ಲೆಯಲ್ಲಿ 17,04,821 ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಶೇ 93.17ರಷ್ಟು ಪ್ರಗತಿ ದಾಖಲಿಸಿದೆ.

ADVERTISEMENT

ಆನ್‌ಲೈನ್‌ ಮೂಲಕ ಸ್ವಯಂಪ್ರೇರಿತವಾಗಿ ಮಾಹಿತಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಸಮೀಕ್ಷೆಯಿಂದ ಹೊರಗೆ ಉಳಿದವರು ಇಲ್ಲಿಗೆ ಭೇಟ ನೀಡಿ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

ಸಮೀಕ್ಷೆಗೆ ಸೆ.22ರಂದು ಚಾಲನೆ ನೀಡಲಾಗಿತ್ತು. ಜಿಲ್ಲೆಯ 4.91 ಲಕ್ಷ ಮನೆಗಳಿಗೆ ‘ವಿಶಿಷ್ಟ ಗುರುತಿನ ಸಂಖ್ಯೆ’ ನೀಡಲಾಗಿತ್ತು. ಅ.7ಕ್ಕೆ ಸಮೀಕ್ಷೆ ಪೂರ್ಣಗೊಳ್ಳದಿರುವುದರಿಂದ ಸರ್ಕಾರ ಅ.19ರವರೆಗೆ ಮುಂದೂಡಿತ್ತು. ಪ್ರತಿ ಗಣತಿದಾರರಿಗೆ 150 ಮನೆಗಳಂತೆ ಬ್ಲಾಕ್‌ಗಳನ್ನು ವಿಂಗಡಿಸಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿತ್ತು. ಆರಂಭದ ಕೆಲ ದಿನ ತಂತ್ರಾಂಶದಲ್ಲಿ ತೊಂದರೆ ಕಾಣಿಸಿಕೊಂಡು ಗೊಂದಲ ಸೃಷ್ಟಿಯಾಗಿತ್ತು. ಆ ಬಳಿಕ ಇಂತಹ ಗೊಂದಲ ನಿವಾರಣೆಯಾಗಿ, ಸಮೀಕ್ಷೆ ಸರಾಗವಾಗಿ ನಡೆದಿತ್ತು.

ಸಾಂಖ್ಯಿಕ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಪ್ರಸ್ತುತ 18,29,756 ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿತ್ತು. ಈ ಅಂಕಿ–ಅಂಶಗಳನ್ನು ಆಧರಿಸಿ ಸಮೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದರ ಪ್ರಕಾರ ಸಮೀಕ್ಷೆಯ ಪ್ರಗತಿಯನ್ನು ಲೆಕ್ಕಹಾಕಲಾಗಿದೆ.

ಜನಸಂಖ್ಯೆ ಖಚಿತತೆಗೆ ಬಹುವಿಧ

ಜನಸಂಖ್ಯೆ ಹಾಗೂ ಮನೆಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತ 6 ವಿಧಾನಗಳನ್ನು ಅನುಸರಿಸಿದೆ. ಇವುಗಳ ಆಧಾರದ ಮೇರೆಗೆ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಿದೆ.

‘ಗ್ರಾಮೀಣ ಪ್ರದೇಶದಲ್ಲಿ 2.39 ಲಕ್ಷ ಕಟ್ಟಡಗಳು ನೀರಿನ ಸಂಪರ್ಕ ಪಡೆದಿವೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1.22 ಲಕ್ಷ ಕಟ್ಟಡಗಳಿವೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ (ಐಸಿಡಿಎಸ್‌) ಅಂಗನವಾಡಿ ಕಾರ್ಯಕರ್ತೆಯರು ಸಂಗ್ರಹಿಸಿದ ದತ್ತಾಂಶದ ಪ್ರಕಾರ ಜಿಲ್ಲೆಯ ಜನಸಂಖ್ಯೆ 16 ಲಕ್ಷಕ್ಕೂ ಅಧಿಕ. ಪಡಿತರ ಚೀಟಿ ವ್ಯಾಪ್ತಿಯಲ್ಲಿ 15 ಲಕ್ಷ ಜನಸಂಖ್ಯೆ ಇದೆ. ಇವುಗಳ ಪ್ರಕಾರ ಜಿಲ್ಲೆಯ ಶೇ 98ರಷ್ಟು ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಸಮೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲೇ 7ನೇ ಸ್ಥಾನದಲ್ಲಿದೆ. ಆಧಾರ್‌ ಇಕೆವೈಸಿ ಸಮಸ್ಯೆ, ಸರ್ಕಾರಿ ಸೌಲಭ್ಯ ಕೈತಪ್ಪುವ ಭಯದಿಂದ ಕೆಲವರು ಸಮೀಕ್ಷೆಯಿಂದ ದೂರ ಉಳಿದ ಸಾಧ್ಯತೆ ಇದೆ
ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

70,000 ಜನ ಸಮೀಕ್ಷೆಗೆ ನಕಾರ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಳಪಡಲು ಜಿಲ್ಲೆಯಲ್ಲಿ ಅಂದಾಜು 70,000 ಜನರು ನಿರಾಕರಿಸಿದ್ದಾರೆ. ತಕರಾರು ಹೊಂದಿದವರು ಸಮೀಕ್ಷೆಯಿಂದ ಹೊರಗೆ ಉಳಿಯುವ ಅವಕಾಶವನ್ನು ಸರ್ಕಾರ ನೀಡಿತ್ತು. ಸಮೀಕ್ಷೆಯಿಂದ ಹೊರಗೆ ಉಳಿದವರಿಂದ ಪ್ರಮಾಣ ಪತ್ರ (ದೃಢೀಕರಣ) ಪಡೆಯಲಾಗಿದೆ. ‘ಮನೆ–ಮನೆಗೆ ಭೇಟಿ ನೀಡಿ ಸಂಗ್ರಹಿಸಿದ ಮಾಹಿತಿ ಆಯೋಗ ರೂಪಿಸಿದ ತಂತ್ರಾಂಶದಲ್ಲಿ ಭದ್ರವಾಗಿದೆ. 600ಕ್ಕೂ ಹೆಚ್ಚು ಜನರು ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಸಮೀಕ್ಷೆಯ ಬಳಿಕ ಜಿಲ್ಲೆಯ ಸರಾಸರಿ ಕುಟುಂಬದ ಗಾತ್ರ 3.77 ಎಂದು ಅಂದಾಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ವಿವರಿಸಿದರು.

50 ಸಾವಿರ ವಾಣಿಜ್ಯ ಕಟ್ಟಡ

ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳಿರುವ ಬಗ್ಗೆ ಸಮೀಕ್ಷೆಯಲ್ಲಿ ಗೊತ್ತಾಗಿದೆ. ವಿಶೇಷ ಮನೆ ಸಂಖ್ಯೆ (ಯುಎಚ್‌ಐಡಿ) ಚೀಟಿ ಅಂಟಿಸಿದ ಕಟ್ಟಡಗಳನ್ನು ಪರಿಶೀಲಿಸಿ ವಾಸದ ಮನೆಯೇ ಅಥವಾ ವಾಣಿಜ್ಯ ಕಟ್ಟಡವೇ ಎಂಬುದನ್ನು ಸಮೀಕ್ಷಕರು ಖಚಿತಪಡಿಸಿದ್ದಾರೆ. ಸಮೀಕ್ಷೆಯ ಮೊದಲ ಹಂತದಲ್ಲಿ ಇಂಧನ ಇಲಾಖೆಯ ಸಿಬ್ಬಂದಿ ಪ್ರತಿ ಕಟ್ಟಡಕ್ಕೆ ಯುಎಚ್‌ಐಡಿ ಚೀಟಿ ಅಂಟಿಸಿದ್ದರು. ವಿದ್ಯುತ್‌ ಮೀಟರ್‌ ಆಧರಿಸಿದ್ದರಿಂದ ವಾಣಿಜ್ಯ ಕಟ್ಟಡಗಳು ಕೂಡ ಯುಎಚ್ಐಡಿ ವ್ಯಾಪ್ತಿಗೆ ಬಂದಿದ್ದವು. ಸಮೀಕ್ಷರು ಭೇಟಿ ನೀಡಿದಾಗ ಕೊಳವೆಬಾವಿ ಕಟ್ಟಡ ಅಂಗನವಾಡಿ ವಾಣಿಜ್ಯ ಮಳಿಗೆ ಶಾಲೆ ವಾಣಿಜ್ಯ ಸಂಕೀರ್ಣಗಳು ಪತ್ತೆಯಾಗಿದ್ದವು. ದಾವಣಗೆರೆ ಹಾಗೂ ಹರಿಹರ ನಗರದಲ್ಲಿ ವಾಣಿಜ್ಯ ಕಟ್ಟಡ ಹೆಚ್ಚಾಗಿರುವುದರಿಂದ ತೊಡಕುಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.