ADVERTISEMENT

ದಾವಣಗೆರೆ: ಇಂದು ಕ್ಯಾನ್ಸರ್ ಜಾಗೃತಿ ಜಾಥಾ

‘ಪ್ರಜಾವಾಣಿ’ ಅಮೃತ ಮಹೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 4:57 IST
Last Updated 4 ಫೆಬ್ರುವರಿ 2023, 4:57 IST
.
.   

ದಾವಣಗೆರೆ: ‘ಪ್ರಜಾವಾಣಿ’ ಅಮೃತ ಮಹೋತ್ಸವ ಹಾಗೂ ವಿಶ್ವ ಕ್ಯಾನ್ಸರ್‌ ಜಾಗೃತಿ ದಿನಾಚರಣೆ ಅಂಗವಾಗಿ ಫೆ.4 ರಂದು ಶನಿವಾರ ನಗರದಲ್ಲಿ ‘ಕ್ಯಾನ್ಸರ್‌ ಜಾಗೃತಿ ಜಾಥಾ’ ಆಯೋಜಿಸಲಾಗಿದ್ದು, ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ ಅವರು ಬೆಳಿಗ್ಗೆ 7ಕ್ಕೆ ನಗರದ ಹೈಸ್ಕೂಲ್‌ ಮೈದಾನದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದು, ನಗರದ ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು, ದಾವಣಗೆರೆ ಮೂಲದ ನಟರಾದ ‘ಪದವಿಪೂರ್ವ’ ಚಿತ್ರದ ನಾಯಕ ಪೃಥ್ವಿ ಶಾಮನೂರು, ‘ಡೈಮಂಡ್‌ ಕ್ರಾಸ್‌’ಚಿತ್ರದ ನಾಯಕ ರಜತ್‌ ಅಪ್ಪಣ್ಣ, ‘ಹೊಂದಿಸಿ ಬರೆಯಿರಿ’ ಚಿತ್ರ ತಂಡ ಹಾಗೂ ಸ್ನೇಹಿತರು, ಜಿಲ್ಲಾ ಅಂಗವಿಕಲರ ಸಂಘದ ಸದಸ್ಯರು, ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸನ್ನು ಕಂಡವರು, ನಗರದ ಸಂಘ– ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕದ ಎನ್‌ಸಿಡಿ ವಿಭಾಗ, ದಾವಣಗೆರೆ ಕ್ಯಾನ್ಸರ್‌ ಫೌಂಡೇಶನ್, ಸಿದ್ಧಗಂಗಾ ವಿದ್ಯಾಸಂಸ್ಥೆ, ಸರ್‌ ಎಂ.ವಿ. ಪಿಯು ಕಾಲೇಜು, ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ನಂಜಪ್ಪ ಆಸ್ಪತ್ರೆ, ಸುಕ್ಷೇಮ ಆಸ್ಪತ್ರೆ, ಲೈಫ್‌ಲೈನ್‌ ವಿಬಿಡಿಒ, ಆರ್‌.ಜಿ. ಇನ್‌ಸ್ಟಿಟ್ಯೂಟ್‌ ಆಫ್‌ ಕಾಮರ್ಸ್‌ ಅಂಡ್‌ ಮ್ಯಾನೇಜ್‌ಮೆಂಟ್, ಭಾರತೀಯ ರೆಡ್‌ಕ್ರಾಸ್‌, ರಾಯ್ಕರ್‌ ಜ್ಯೂವೆಲರ್ಸ್‌ ಹಾಗೂ ವಿವಿಧ
ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಈ ಜಾಥಾ ನಡೆಯಲಿದೆ.

ADVERTISEMENT

**

ಜಾಥಾ ಸಾಗುವ ಮಾರ್ಗ

ಹೈಸ್ಕೂಲ್‌ ಮೈದಾನದಿಂದ ಪ್ರವಾಸಿ ಮಂದಿರ ರಸ್ತೆ ಮಾರ್ಗವಾಗಿ ಜಯದೇವ ಸರ್ಕಲ್‌ಗೆ ಜಾಥಾ ಬರಲಿದೆ. ಅಲ್ಲಿಂದ ಶಿವಪ್ಪಯ್ಯ ಸರ್ಕಲ್‌, ಡಾಂಗೆ ಪಾರ್ಕ್‌, ಹಳೇ ಕೆಇಬಿ ರಸ್ತೆ, ಹದಡಿ ರಸ್ತೆ, ಜಿಲ್ಲಾ ಕ್ರೀಡಾಂಗಣ, ಬಾಪೂಜಿ ರಸ್ತೆ, ಡೆಂಟಲ್‌ ಕಾಲೇಜು ರಸ್ತೆ ಮಾರ್ಗವಾಗಿ ಗುಂಡಿ ಸರ್ಕಲ್‌ಗೆ ಬರಲಿದೆ. ಅಲ್ಲಿಂದ ಮೋದಿ ರಸ್ತೆ, ಚರ್ಚ್‌ ರಸ್ತೆ, ರಾಂ ಆ್ಯಂಡ್ ಕೊ ವೃತ್ತ ದಾಟಿ ಎವಿಕೆ ಕಾಲೇಜು ರಸ್ತೆಯ ಮೂಲಕ ಬಂದು ಗುರುಭವನದ ಬಳಿ ಸಮಾಪನಗೊಳ್ಳಲಿದೆ.

**

ಕ್ಯಾನ್ಸರ್ ಜಾಗೃತಿಗೆ ಜುಂಬಾ

‘ಕ್ಯಾನ್ಸರ್‌ ಜಾಗೃತಿ ಜಾಥಾ’ದಲ್ಲಿ ಭಾಗವಹಿಸುವವರಿಗೆ ನಗರದ ರಿದಂ ಫಿಟ್‌ನೆಸ್‌ ಸಂಸ್ಥೆಯು ಜುಂಬಾ ನೃತ್ಯದ ಮೂಲಕ ವಾರ್ಮ್ ಅಪ್ ಮಾಡಲಿದೆ.

ನುರಿತ ತರಬೇತುದಾರ ಅನಿಲ್‌ ಹಾಗೂ ಫಿಟ್‌ನೆಸ್ ಟ್ರೈನರ್ ಫೇರಿ ಅವರು ಜುಂಬಾ ನೃತ್ಯ ಮಾಡಿ ಜಾಗೃತಿ ಮೂಡಿಸಲಿದ್ದಾರೆ. ಕ್ಯಾನ್ಸರ್, ಹಿಮೊಫಿಲಿಯಾ, ರಸ್ತೆ ಸುರಕ್ಷತೆ ಓಟ ಸೇರಿ ಹಲವು ಕಾರ್ಯಕ್ರಮಗಳಲ್ಲಿ 9 ವರ್ಷಗಳಿಂದ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಕ್ಯಾನ್ಸರ್‌ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳುವವರು ಜುಂಬಾ ನೃತ್ಯ ಮಾಡಿ ಮನಸ್ಸನ್ನು ಮುದಗೊಳಿಸಿಕೊಳ್ಳಬಹುದು.

‘ತೂಕ ಕಡಿಮೆ ಮಾಡಲು, ಫಿಟ್ನೆಸ್, ಥೈರಾಯ್ಡ್ ಸಮಸ್ಯೆಗಳಿಗೆ ಈ ನೃತ್ಯ ರಾಮಬಾಣವಿದ್ದಂತೆ’ ಎಂದು ತರಬೇತುದಾರ ಅನಿಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.