ADVERTISEMENT

ದಾವಣಗೆರೆ: 25 ವರ್ಷಗಳ ಬಳಿಕ ಚನ್ನಮುಂಬಾಪುರ ಮಾರಿಕಾಂಬಾ ಜಾತ್ರೆ

ಚನ್ನಮುಂಬಾಪುರ: ಕಟ್ಟುನಿಟ್ಟಿನ ಧಾರ್ಮಿಕ ಚೌಕಟ್ಟಿನಲ್ಲಿ ಹಬ್ಬದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:52 IST
Last Updated 13 ಜನವರಿ 2026, 6:52 IST
<div class="paragraphs"><p>ಚನ್ನಮುಂಬಾರ ಗ್ರಾಮದ ಮಾರಿಕಾಂಬ ದೇವಿ</p></div>

ಚನ್ನಮುಂಬಾರ ಗ್ರಾಮದ ಮಾರಿಕಾಂಬ ದೇವಿ

   

ಸಾಸ್ವೆಹಳ್ಳಿ: ಇಲ್ಲಿಗೆ ಸಮೀಪದ ಚನ್ನಮುಂಬಾಪುರ ಗ್ರಾಮದಲ್ಲಿ 25 ವರ್ಷಗಳ ನಂತರ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರದಿಂದ ವಿಜೃಂಭಣೆಯಿಂದ ಆರಂಭಗೊಳ್ಳುತ್ತಿದೆ. ಗ್ರಾಮದ ಹಿರಿಯರು ಹಾಕಿಕೊಟ್ಟ ಕಟ್ಟುನಿಟ್ಟಿನ ಧಾರ್ಮಿಕ ಚೌಕಟ್ಟಿನಲ್ಲೇ ಈ ಬಾರಿಯೂ ಹಬ್ಬದ ಸಿದ್ಧತೆಗಳು ನಡೆದಿವೆ.  

ಚನ್ನಾಪುರದ ಈ ಜಾತ್ರೆಗೆ ತನ್ನದೇ ಆದ ವಿಶಿಷ್ಠ ಇತಿಹಾಸವಿದೆ. ಇಲ್ಲಿನ ಮಾರಿಕಾಂಬಾ ದೇವಿಯು ಗ್ರಾಮದ ರಕ್ಷಕ ದೇವತೆಯಾಗಿದ್ದು, ಗ್ರಾಮಕ್ಕೆ ಬರುವ ಕಾಯಿಲೆ ಮತ್ತು ಸಂಕಷ್ಟಗಳನ್ನು ತಡೆಯುತ್ತಾಳೆ ಎಂಬ ದೃಢ ನಂಬಿಕೆ ಜನರಲ್ಲಿದೆ. ಈ ಹಬ್ಬವನ್ನು ಆಚರಿಸಲು ಅತ್ಯಂತ ಶುದ್ಧತೆ ಮತ್ತು ಶಿಸ್ತು ಅವಶ್ಯ ಎಂಬ ಕಾರಣಕ್ಕೆ ದಶಕಗಳ ಕಾಲ ಸಕಲ ಸಿದ್ಧತೆಗಳೊಂದಿಗೆ ಭಕ್ತರು ಕಾಯುತ್ತಿದ್ದರು. 

ADVERTISEMENT

ಸಾರು ಕಟ್ಟುವ ಪರಂಪರೆ: 

ಗ್ರಾಮದ ಗಡಿ ದಾಟದಂತೆ ತಡೆಯುವ ‘ಸಾರು ಕಟ್ಟುವ’ ಪದ್ಧತಿಯು ಗ್ರಾಮದ ಪ್ರಾಚೀನ ಕಾಲದ ರಕ್ಷಣಾತ್ಮಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಭಾನುವಾರದಿಂದ ಗ್ರಾಮದ ಸುತ್ತಲೂ ಮುಳ್ಳಿನ ಬೇಲಿ ಹಾಕಿ, ಮಂತ್ರೋಕ್ತವಾಗಿ ಸಾರು ಕಟ್ಟಿರುವುದರಿಂದ ಊರೊಳಗಿನ ಭಕ್ತಿ ಹೊರಹೋಗದಂತೆ ಮತ್ತು ಹೊರಗಿನ ಅನಿಷ್ಠಗಳು ಒಳಬರದಂತೆ ಕಾಯಲಾಗುತ್ತಿದೆ. ಈ ಅವಧಿಯಲ್ಲಿ ಗ್ರಾಮದ ಗಡಿ ಒಳಗೆ ಬಂದವರು ಹಬ್ಬ ಮುಗಿಯುವವರೆಗೆ ಹೊರಗೆ ಹೋಗುವಂತಿಲ್ಲ ಎನ್ನುವ ನಿಯಮವನ್ನು ಪಾಲಿಸಲಾಗುತ್ತಿದೆ. 

ವೈವಿಧ್ಯಮಯ ಧಾರ್ಮಿಕ ವಿಧಿಗಳು: 

ಮಂಗಳವಾರ ಸಂಜೆ ದೇವಿಗೆ ಮಡಿಲಕ್ಕಿ ಸಮರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಮಂಗಳವಾರ ಸಂಜೆ ಭಕ್ತರು ವಿವಿಧ ಬಗೆಯಲ್ಲಿ ಹರಕೆ ತೀರಿಸುತ್ತಾರೆ. ಬುಧವಾರ ಹಬ್ಬದ ಸಂಭ್ರಮ ಜೋರಾಗಿರಲಿದೆ. ಗುರುವಾರ ಮುತ್ತೈದೆಯರಿಂದ ದೇವಿಗೆ ವಿಶೇಷ ಅಲಂಕಾರ ಮತ್ತು ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಗ್ರಾಮದಲ್ಲಿ ದೀಪಾಲಂಕಾರ ಕಂಗೊಳಿಸುತ್ತಿದೆ. 

ಶುಕ್ರವಾರ ಆರ್ಕೆಸ್ಟ್ರಾ ಕಾರ್ಯಕ್ರಮದ ರಂಗು ಇರಲಿದೆ. ಶನಿವಾರದ ಹೊತ್ತಿಗೆ ವಿಧಿವಿಧಾನಗಳು ಮುಕ್ತಾಯಗೊಳ್ಳಲಿವೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.