ದಾವಣಗೆರೆ: ನಗರದ ಹೃದಯ ಭಾಗದಲ್ಲಿರುವ, ಒಟ್ಟು 29 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಚಿಗಟೇರಿ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ತಮ್ಮ ಬವಣೆಗೆ ಕೊನೆ ಯಾವಾಗ ಎಂಬ ಪ್ರಶ್ನೆ ರೋಗಿಗಳನ್ನು ಕಾಡುತ್ತಿದೆ.
ಮುಖ‌್ಯವಾಗಿ ಈ ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಬೀದಿದೀಪಗಳೇ ಇಲ್ಲದ್ದರಿಂದ ಕತ್ತಲಾಯಿತೆಂದರೆ ರೋಗಿಗಳಿಗೂ, ಅವರನ್ನು ಕರೆತರುವ ಸಂಬಂಧಿಗಳಿಗೂ ತೀವ್ರ ತೊಂದರೆ ಎದುರಾಗುತ್ತದೆ. ಇಲ್ಲೊಂದು ಆಸ್ಪತ್ರೆ ಇದೆ ಎಂಬುದೇ ಗೊತ್ತಾಗದ ರೀತಿಯಲ್ಲಿ ಕತ್ತಲೆ ಕವಿದಿರುತ್ತದೆ.
ಆಶ್ಚರ್ಯವೆಂದರೆ, ರಾತ್ರಿಯಾದ ಕೂಡಲೇ ಮುಖ್ಯದ್ವಾರ ಬಂದ್ ಮಾಡುವುದರಿಂದ ತುರ್ತು ಚಿಕಿತ್ಸೆಗೆ ರೋಗಿಗಳು, ಅವರ ಸಂಬಂಧಿಗಳು ಮತ್ತೊಂದು ದ್ವಾರದಿಂದಲೇ ಒಳ ಪ್ರವೇಶಿಸಬೇಕು. ಆದರೆ, ಆ ದ್ವಾರ ಇರುವುದು ಬಹುತೇಕರಿಗೆ ಗೊತ್ತಿಲ್ಲ. ಅಲ್ಲದೇ ಆ ದ್ವಾರಕ್ಕೂ ವಿದ್ಯುತ್ ದೀಪದ ಬೆಳಕಿನ ಸೌಲಭ್ಯ ಇಲ್ಲ.
ವಿಶೇಷವಾಗಿ ಬಡವರು ಮತ್ತು ನಗರ ಹಾಗೂ ಗ್ರಾಮೀಣ ಭಾಗದ ರೋಗಿಗಳು ಈ ಆಸ್ಪತ್ರೆಯನ್ನು ಅವಲಂಬಿಸಿದ್ದು ದಾವಣಗೆರೆ ಮಾತ್ರವಲ್ಲದೆ, ಸುತ್ತಮುತ್ತಲಿನ ಐದಾರು ಜಿಲ್ಲೆಗಳವರು ಗುಣಮಟ್ಟದ ಚಿಕಿತ್ಸೆ ನಿರೀಕ್ಷಿಸಿ ಇಲ್ಲಿಗೆ ಧಾವಿಸುತ್ತಾರೆ.
ಹೊರ ರೋಗಿಗಳ ವಿಭಾಗ, ಒಳರೋಗಿಗಳ ಚಿಕಿತ್ಸಾ ಕೇಂದ್ರ, ತುರ್ತು ಚಿಕಿತ್ಸಾ ಘಟಕ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸ್ಕ್ಯಾನಿಂಗ್ ಘಟಕ ಒಳಗೊಂಡಂತೆ ವಿವಿಧ ವಿಭಾಗಗಳು ಇಲ್ಲಿ ಕಾರ್ಯ ನಿರ್ವಹಿಸುತ್ತವೆ. 960 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಬಹುತೇಕ ಹಾಸಿಗೆಗಳು ರೋಗಿಗಳಿಂದ ಭರ್ತಿಯಾಗಿರುತ್ತವೆ. ಆದರೆ, ಒಳರೋಗಿಗಳ ಜೊತೆ ಬಂದವರು ಊಟ– ತಿಂಡಿಗೆ ಹೊರಗೆ ಹೋಗಿ ಬರಬೇಕೆಂದರೂ ಸಂಜೆಯಾದ ನಂತರ ಆವರಣದಲ್ಲಿ ದೀಪಗಳು ಹತ್ತುವುದಿಲ್ಲ. ಶಾಮನೂರು ರಸ್ತೆಯಲ್ಲಿರುವ ಆಸ್ಪತ್ರೆಯ ಮುಂಭಾಗದಲ್ಲಿ ಮುಖ್ಯದ್ವಾರದ ಬಳಿಯೂ ಬೀದಿ ದೀಪ ಇಲ್ಲ. ಇದರಿಂದಾಗಿ ರಾತ್ರಿ ವೇಳೆ ಈ ರಸ್ತೆಗುಂಟ ತೆರಳುವವರಿಗೆ ಕಂಪೌಂಡ್ ಒಳಗೊಂದು ದೊಡ್ಡ ಆಸ್ಪತ್ರೆ ಇದೆ ಎಂಬುದೇ ಗೋಚರಿಸುವುದಿಲ್ಲ.
ಸಿಬ್ಬಂದಿ ಕೊರತೆ: ವೈದ್ಯರಿಂದ ಹಿಡಿದು ‘ಡಿ’ ಗ್ರೂಪ್‌ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿನ 300ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ನಿತ್ಯವೂ ಬೆಳಿಗ್ಗೆಯಿಂದಲೇ ಈ ಆಸ್ಪತ್ರೆಯತ್ತ ದೌಡಾಯಿಸುವ ಸಾವಿರಾರು ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನಿಗದಿತ ಅವಧಿಯೊಳಗೆ ದೊರೆಯುವುದೇ ಇಲ್ಲ. ಚಿಕಿತ್ಸೆಗೂ ಮೊದಲು ಅಗತ್ಯವಿರುವ ಚೀಟಿ ಮಾಡಿಸುವುದಕ್ಕೂ ಗಂಟೆಗಟ್ಟಲೇ ಕಾಯುವ, ನಂತರ ವೈದ್ಯರ ಕೊಠಡಿಯೆದುರು ಸರದಿಯಲ್ಲಿ ಕಾದುನಿಲ್ಲುವ ಅನಿವಾರ್ಯತೆ ಇದೆ.
ಔಷಧಿ ಅಲಭ್ಯ: ‘ನಾಯಿ ಕಡಿತಕ್ಕೆ ನೀಡಲಾಗುವ ಆ್ಯಂಟಿ ರೇಬಿಸ್ ಇಂಜಕ್ಷನ್ ಸೇರಿದಂತೆ ಅತ್ಯಂತ ತುರ್ತು ಹಾಗೂ ದುಬಾರಿ ಔಷಧಿಗಳನ್ನು ಹೊರಗಡೆ ಬರೆದುಕೊಡುವ ಚಾಳಿಯನ್ನು ಜಿಲ್ಲಾ ಆಸ್ಪತ್ರೆ ವೈದ್ಯರು ಮುಂದುವರಿಸಿದ್ದಾರೆ’ ಎಂದು ನೆರಳು ಬೀಡಿ ಕಾರ್ಮಿಕರ ಸಂಘದ ಜಬೀನಾ ಖಾನಂ ದೂರುತ್ತಾರೆ.
‘ಔಷಧ ಮಳಿಗೆಯಲ್ಲಿ ರೋಗಿಗಳಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಚೀಟಿ ಮಾಡಿಸಲು, ವೈದ್ಯರನ್ನು ಕಾಣಲು ಗಂಟೆಗಟ್ಟಲೇ ಕಾದ ರೋಗಿಗಳು ಔಷಧಿ ಪಡೆಯಲೂ ಗಂಟೆಗಟ್ಟಲೇ ಸರದಿ ಸಾಲಲ್ಲಿ ನಿಂತು ಸುಸ್ತಾಗಬೇಕಿದೆ. ಒಂದೇ ಕೌಂಟರ್ ಇರುವುದರಿಂದ ಈ ಸಮಸ್ಯೆ ಇದೆ. ಇನ್ನಷ್ಟು ಕೌಂಟರ್ ತೆರೆದರೆ ಅನುಕೂಲವಾಗುತ್ತದೆ’ ಎಂಬುದು ಅವರ ಆಗ್ರಹ.
‘ಕೆಲವು ನಿರ್ದಿಷ್ಟ ಕಾಯಿಲೆ ಪೀಡಿತರಿಗೆ ನಿರಂತರ ಔಷಧಿ ಸೇವನೆ ಅನಿವಾರ್ಯ. ಅಂಥವರಿಗೆ ವೈದ್ಯರು ಒಂದು ಅಥವಾ ಎರಡು ತಿಂಗಳವರೆಗೆ ಸಾಕಾಗುವಷ್ಟು ಔಷಧಿ ಬರೆದುಕೊಟ್ಟರೂ ಔಷಧ ಮಳಿಗೆಯಲ್ಲಿ ಬರೀ 15 ದಿನಗಳಿಗೆ ಆಗುವಷ್ಟು ಔಷಧಿ ನೀಡಲಾಗುತ್ತದೆ. ಔಷಧಿ ಖಾಲಿ ಆದ ನಂತರ ಮತ್ತೆ ಬಂದು, ಚೀಟಿ ಮಾಡಿಸಿ, ಮತ್ತೆ ವೈದ್ಯರನ್ನು ಕಂಡು ಮತ್ತೆ ಔಷಧಿ ಪಡೆಯಲು ಸರದಿಯಲ್ಲಿ ನಿಲ್ಲಬೇಕಿದೆ. ಇದು ರೋಗಿಗಳ ಜೀವನೋತ್ಸಾಹವನ್ನೇ ಹಾಳುಮಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂಬುದು ಅವರ ಆರೋಪ.
‘ಜಿಲ್ಲಾ ಆಸ್ಪತ್ರೆಯು ಸಾರ್ವಜನಕ ಹಾಗೂ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಗೆ ಒಳಪಡಲಿದೆ ಎಂಬ ಮಾತಿದೆ. ಸರ್ಕಾರದ ಸುಪರ್ದಿಯಲ್ಲಿದ್ದಾಗಲೇ ಇಷ್ಟೊಂದು ಅವ್ಯವಸ್ಥೆ ಇದೆ. ಇನ್ನು ಪಿಪಿಪಿ ಮಾದರಿ ಅಳವಡಿಸಿದಲ್ಲಿ ರೋಗಿಗಳ ಸ್ಥಿತಿಯನ್ನು ಆ ದೇವರೇ ಬಲ್ಲ’ ಎಂದು ಅವರು ವ್ಯಂಗ್ಯವಾಡಿದರು.
‘ಆಯುಷ್ಮಾನ್ ಭಾರತ್ ಕಾರ್ಡ್‌ದಾರರು ಚಿಕಿತ್ಸೆಗೆ ಬಂದರೆ ಎದುರಿಸುವ ಕಷ್ಟ ಅಷ್ಟಿಷ್ಟಲ್ಲ’ ಎಂಬುದು ಇಲ್ಲಿನ ಕೆಟಿಜೆ ನಗರ ನಿವಾಸಿ ಹದಡಿ ಮರಿಯಮ್ಮ ಅವರ ಅಳಲು.
‘ಅಲ್ಟ್ರಾ ಸೌಂಡ್ ಸೇರಿದಂತೆ ಇತರೆ ಸ್ಕ್ಯಾನಿಂಗ್ ಜಿಲ್ಲಾ ಆಸ್ಪತ್ರೆಯಲ್ಲಿ ಮಾಡದೆ ಖಾಸಗಿಯವರ ಬಳಿ ಕಳುಹಿಸುವುದರಿಂದ ನಮ್ಮಂಥ ಬಡವರಿಗೆ ತೀವ್ರ ಆರ್ಥಿಕ ತೊಂದರೆ ಎದುರಾಗುತ್ತದೆ’ ಎಂದು ಅವರು ಕಣ್ಣೀರು ಸುರಿಸಿದರು.
ರಾಜ್ಯದಲ್ಲೇ ನಮ್ಮ ಆಸ್ಪತ್ರೆ ಗುಣಮಟ್ಟದ ಚಿಕಿತ್ಸೆ ಮತ್ತು ಸೌಲಭ್ಯಕ್ಕೆ ಹೆಸರಾಗಿದೆ. ಹೊರಗಡೆ ಔಷಧಿ ಬರೆದುಕೊಟ್ಟ ವೈದ್ಯರ ಬಗ್ಗೆ ಮಾಹಿತಿ ನೀಡಿದರೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.-ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.