ADVERTISEMENT

ದಾವಣಗೆರೆ: ಶೋಭಾಯಾತ್ರೆಗೆ ಜಾನಪದ ವಾದ್ಯಗಳ ಮೆರುಗು

‘ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್’ನಿಂದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:52 IST
Last Updated 21 ಸೆಪ್ಟೆಂಬರ್ 2025, 6:52 IST
<div class="paragraphs"><p>ದಾವಣಗೆರೆಯಲ್ಲಿ ‘ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್’ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಯುವಕ, ಯುವತಿಯರು&nbsp;ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು&nbsp;</p></div>

ದಾವಣಗೆರೆಯಲ್ಲಿ ‘ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್’ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಯುವಕ, ಯುವತಿಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು 

   

ಪ್ರಜಾವಾಣಿ ಚಿತ್ರಗಳು: ಸತೀಶ್ ಬಡಿಗೇರ

ದಾವಣಗೆರೆ: ಈ ಬಾರಿ ಡಿ.ಜೆಗಳ (ಡಿಸ್ಕ್‌ ಜಾಕಿ) ಅಬ್ಬರ ಇರಲಿಲ್ಲ. ಆದರೂ, ಯುವಕ– ಯುವತಿಯರು ಕುಣಿದು ಕುಪ್ಪಳಿಸಿದರು. ಯುವಜನತೆಯಂತೂ ಭರ್ಜರಿ ಡ್ಯಾನ್ಸ್‌ ಮಾಡಿದರು. ಚಿಣ್ಣರಿಂದ ಹಿಡಿದು ವೃದ್ಧರವರೆಗೂ ಎಲ್ಲಾ ವಯೋಮಾನದವರೂ ಉತ್ಸಾಹದಿಂದ ಹೆಜ್ಜೆ ಹಾಕಲು ಹುರಿದುಂಬಿಸಿದ್ದು ಜಾನಪದ ವಾದ್ಯಗಳು.. 

ADVERTISEMENT

ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ‘ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್’ ವತಿಯಿಂದ ಪ್ರತಿಷ್ಠಾಪಿಸಿದ್ದ 8ನೇ ವರ್ಷದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆ ಶನಿವಾರ ಅದ್ದೂರಿಯಾಗಿ ನಡೆಯಿತು. 

ಡಿ.ಜೆ ಇರದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಸೇರುತ್ತಾರಾ ಎಂಬ ಅನುಮಾನ ಹಲವರಲ್ಲಿ ಮೂಡಿತ್ತು. ಆರಂಭದಲ್ಲಿ ಯುವಜನತೆ ಕಡಿಮೆ ಎನಿಸಿದರೂ, ಮೆರವಣಿಗೆಯು ಎವಿಕೆ ಕಾಲೇಜು ರಸ್ತೆಯಲ್ಲಿ ಸಾಗುವಾಗ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. 

ಪ್ರತೀ ಬಾರಿ ಡಿ.ಜೆಗಳ ಅಬ್ಬರದಲ್ಲಿ ಬೇರೆಲ್ಲಾ ಕಲಾ ತಂಡಗಳು, ಜಾನಪದ ವಾದ್ಯಗಳು ಅಷ್ಟಾಗಿ ಸದ್ದು ಮಾಡುತ್ತಿರಲಿಲ್ಲ. ಈ ಬಾರಿ ಡಿ.ಜೆ ಇರದ ಕಾರಣ ಜಾನಪದ ವಾದ್ಯಗಳೇ ಯುವಜನತೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡಿದವು. 

ಡೋಲು, ಚಂಡೆ, ವೀರಗಾಸೆ, ನಾಸಿಕ್ ಡೋಲ್, ರೋಡ್ ಆರ್ಕೆಸ್ಟ್ರಾ, ಡೊಳ್ಳುಕುಣಿತ, ಸಮಾಳ, ನಂದಿಕೋಲು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. ಇದರ ಜತೆಗೆ ಗಾರುಡಿ ಗೊಂಬೆಗಳು, ಪೂಜಾ ಕುಣಿತ, ಹಗಲುವೇಷಧಾರಿ ಕಲಾವಿದರೂ ಗಮನ ಸೆಳೆದರು. 

ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ‌ ಯುವಕ– ಯುವತಿಯರು ಕೇಸರಿ ಶಾಲುಗಳನ್ನು ಧರಿಸಿ ಶೋಭಾಯಾತ್ರೆಯಲ್ಲಿ ಕಂಗೊಳಿಸಿದರು. ರೋಡ್‌ ಆರ್ಕೆಸ್ಟ್ರಾಗಳ ಬಳಿ ಯುವತಿಯರೇ ಹೆಚ್ಚಾಗಿ ಸ್ಟೆಪ್ಸ್‌ ಹಾಕಿದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಮನೆ, ಕಟ್ಟಡಗಳನ್ನು ಏರಿ ಸಂಭ್ರಮವನ್ನು ಕಣ್ತುಂಬಿಕೊಂಡರು. 

ನಟರ ಭಾವಚಿತ್ರ ಪ್ರದರ್ಶನ:

ಶೋಭಾಯಾತ್ರೆಯಲ್ಲಿ ನಟರಾದ ದರ್ಶನ್‌, ಪುನೀತ್ ರಾಜ್‌ಕುಮಾರ್‌ ಸೇರಿದಂತೆ ಇನ್ನಿತರ ನಟರ ಭಾವಚಿತ್ರಗಳನ್ನು ಹಿಡಿದು ಯುವಕರು ಕುಣಿಯುತ್ತಿರುವುದು ಕಂಡುಬಂತು. ಯಾವುದೇ ನಟರ ಭಾವಚಿತ್ರಗಳನ್ನು ಶೋಭಾಯಾತ್ರೆಗೆ ತರಬೇಡಿ ಎಂದು ಆಯೋಜಕರು ಮನವಿ ಮಾಡಿದ್ದರು. ಆದರೂ, ಯುವಕರು ತಮ್ಮ ನೆಚ್ಚಿನ ನಟರ ಭಾವಚಿತ್ರಗಳನ್ನು ಹಿಡಿದು ಡ್ಯಾನ್ಸ್‌ ಮಾಡಿ ಸಂಭ್ರಮಿಸಿದರು.  

ಅಲ್ಲಲ್ಲಿ ಕಿರಿಕ್:

ವಿವಿಧ ಬಣ್ಣಗಳ ಧ್ವಜಗಳನ್ನು ಹಿಡಿದಿದ್ದ ಯುವಕರು ಅಲ್ಲಲ್ಲಿ ಸಣ್ಣಪುಟ್ಟ ಜಗಳದಲ್ಲಿ ತೊಡಗುತ್ತಿರುವುದು ಕಂಡುಬಂತು. ದೊಡ್ಡ ಕಟ್ಟಿಗೆಗೆ ಧ್ವಜ ಕಟ್ಟಿಕೊಂಡಿದ್ದ ಯುವಕರು ಅವುಗಳನ್ನು ಜೋರಾಗಿ ತಿರುಗಿಸುವ ವಿಚಾರಕ್ಕೆ ಆಗಾಗ ಕಿರಿಕ್‌ ಮಾಡಿಕೊಳ್ಳುತ್ತಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸುವಲ್ಲಿ ಸುಸ್ತಾದರು. ಇದೇ ವಿಚಾರಕ್ಕೆ ಅಂಬೇಡ್ಕರ್ ವೃತ್ತದ ಬಳಿ ಪೊಲೀಸರು ಧ್ವಜವೊಂದನ್ನು ವಶಕ್ಕೆ ಪಡೆದರು. 

ಹೈಸ್ಕೂಲ್‌ ಮೈದಾನದಲ್ಲಿ ಗಣೇಶ ಮೂರ್ತಿಗೆ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಎಸ್‌ಪಿ ಉಮಾ ಪ್ರಶಾಂತ್‌ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಎವಿಕೆ ರಸ್ತೆ ಮೂಲಕ ಮೆರವಣಿಗೆ ಸಾಗಿತು. ರಸ್ತೆಯುದ್ದಕ್ಕೂ ಯುವಜನತೆಯೇ ತುಂಬಿಕೊಂಡಿತ್ತು. ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ, ಪಿ.ಬಿ.ರಸ್ತೆ ಮಾರ್ಗವಾಗಿ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮೆರವಣಿಗೆ ಕೊನೆಗೊಂಡಿತು. ರಾತ್ರಿ ಬಾತಿ ಕೆರೆ ಬಳಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. 

ಶೋಭಾಯಾತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡಿದರು. ಮುಖಂಡರಾದ ಜೊಳ್ಳಿ ಗುರು ಶ್ರೀನಿವಾಸ್ ದಾಸಕರಿಯಪ್ಪ ಯಶವಂತ್‌ರಾವ್ ಜಾಧವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು 
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಲಾವಿದರು ನೋಡುಗರ ಗಮನ ಸೆಳೆದರು
ಶೋಭಾಯಾತ್ರೆಯಲ್ಲಿ ಹನುಮ ವೇಷಧಾರಿಯ ಜಿಗಿತ
ಶೋಭಾಯಾತ್ರೆಯಲ್ಲಿ ಜಾನಪದ ವಾದ್ಯಗಳೊಂದಿಗೆ ನಂದಿಕೋಲು ಕುಣಿತ 

ಅನ್ನ ಸಂತರ್ಪಣೆ  

ಶೋಭಾಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಹಲವೆಡೆ ಸಾರ್ವಜನಿಕರು ಸಂಘ – ಸಂಸ್ಥೆಗಳು ಉದ್ಯಮಿಗಳು ಅನ್ನ ಸಂತರ್ಪಣೆ ನಡೆಸಿದರು. ಜಯದೇವ ವೃತ್ತ ಅಂಬೇಡ್ಕರ್‌ ವೃತ್ತ ಹಾಗೂ ಪಿ.ಬಿ.ರಸ್ತೆಯಲ್ಲಿ ದಾನಿಗಳು ಸ್ವಯಂಪ್ರೇರಿತವಾಗಿ ಅನ್ನ ಸಂತರ್ಪಣೆ ನಡೆಸಿದರು. ಕುಣಿದು ಸುಸ್ತಾಗಿದ್ದ ಯುವಜನತೆ ಫುಲಾವ್‌ ಟೊಮೆಟೊ ಬಾತ್‌ ಸವಿದರು. 

ಪೊಲೀಸ್ ಬಿಗಿ ಭದ್ರತೆ

  ಶೋಭಾಯಾತ್ರೆ ವೇಳೆ ಪೊಲೀಸರು ಭಾರಿ ಬಂದೋಬಸ್ತ್‌ ಕಲ್ಪಿಸಿದ್ದರು. 1500 ಕ್ಕೂ ಅಧಿಕ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನೆರವನ್ನೂ ಪಡೆಯಲಾಯಿತು. ಪೊಲೀಸರು ಮೆರವಣಿಗೆ ಸಾಗಿದ ಮಾರ್ಗಗಳಲ್ಲಿನ ಕಟ್ಟಡಗಳನ್ನು ಏರಿ ಬೈನಾಕುಲರ್ ಮೂಲಕ ನಿಗಾ ವಹಿಸಿದ್ದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ವಾಹನ ಸವಾರರು ಒಳ ದಾರಿಗಳ ಮೂಲಕ ಸಾಗುತ್ತಿರುವುದು ಕಂಡುಬಂತು. ಅಲ್ಲಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಯಿತು. 

ಎಂ.ಪಿ.ರೇಣುಕಾಚಾರ್ಯ ಭಾಗಿ

ಶೋಭಾಯಾತ್ರೆಯು ಜಯದೇವ ವೃತ್ತದ ಬಳಿ ಸಾಗುವಾಗ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಪಾಲ್ಗೊಂಡರು. ಬೆಂಬಲಿಗರು ಅವರನ್ನು ಮೇಲೆತ್ತಿಕೊಂಡು ಕುಣಿದು ಕುಪ್ಪಳಿಸಿದರು. ನಂತರ ರೋಡ್‌ ಆರ್ಕೆಸ್ಟ್ರಾ ವಾಹನದ ಮೇಲೇರಿದ ರೇಣುಕಾಚಾರ್ಯ ಬೆಂಬಲಿಗರೊಂದಿಗೆ ಡ್ಯಾನ್ಸ್‌ ಮಾಡಿದರು. ಬಳಿಕ ರೇಣುಕಾಚಾರ್ಯ ಅವರು ಯುವಕರೊಂದಿಗೆ ಜೈ ಶ್ರೀರಾಮ್‌ ಘೋಷಣೆ ಕೂಗಿದರು. ಈ ವೇಳೆ ಯುವಕರು ‘ಬೇಕೇ ಬೇಕು.. ಡಿ.ಜೆ ಬೇಕು..’ ಎಂದು ಕೂಗಿದರು. ಲೋಕಿಕೆರೆ ನಾಗರಾಜ ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.