ADVERTISEMENT

ಬೆಣ್ಣೆದೋಸೆ ನಗರಿಯಲ್ಲೊಂದು ದುಬೈ ಮಾದರಿ ಉದ್ಯಾನ

ಗಾಜಿನಮನೆಗೆ ವಿದೇಶಿ ಮರಗಳ ಹಸಿರ ಹೊದಿಕೆ

ವಿನಾಯಕ ಭಟ್ಟ‌
Published 30 ಡಿಸೆಂಬರ್ 2018, 9:03 IST
Last Updated 30 ಡಿಸೆಂಬರ್ 2018, 9:03 IST
ದಾವಣಗೆರೆಯ ಗಾಜಿನಮನೆಯ ಆವರಣ ವಿದೇಶಿ ಗಿಡ–ಮರಗಳಿಂದ ಕಂಗೊಳಿಸುತ್ತಿರುವುದು. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ
ದಾವಣಗೆರೆಯ ಗಾಜಿನಮನೆಯ ಆವರಣ ವಿದೇಶಿ ಗಿಡ–ಮರಗಳಿಂದ ಕಂಗೊಳಿಸುತ್ತಿರುವುದು. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ನಗರದ ಕುಂದವಾಡ ಕೆರೆ ಪಕ್ಕದ ಗಾಜಿನಮನೆ ಆವರಣದಲ್ಲಿ ವಿದೇಶಿ ಅಲಂಕಾರಿಕ ಗಿಡ–ಮರಗಳನ್ನು ನೆಟ್ಟು ಹಸಿರಿನ ಹೊದಿಕೆ ಹಾಸಲಾಗಿದೆ. ಒಳಗೆ ಹೆಜ್ಜೆ ಹಾಕುತ್ತಿದ್ದರೆ ದುಬೈ, ಸಿಂಗಪುರದಂತಹ ವಿದೇಶಗಳ ಉದ್ಯಾನಕ್ಕೆ ಬಂದಂತೆ ಭಾಸವಾಗುತ್ತಿದೆ.

ಇಲ್ಲಿನ ವೈವಿಧ್ಯಮಯ ಅಲಂಕಾರಿಕ ಗಿಡ–ಮರಗಳು ಭವ್ಯ ಗಾಜಿನಮನೆ ನೋಡಲು ಬಂದ ಜನರ ಮನ ಸೆಳೆಯುತ್ತಿವೆ. ಕುಬ್ಜ ಜಾತಿಯ ಮರಗಳು, ವೈವಿಧ್ಯಮಯ ಆಕೃತಿಗಳಲ್ಲಿ ಬೆಳೆದಿರುವ ಗಿಡ–ಮರಗಳು ಬೆರಗು ಮೂಡಿಸುತ್ತಿವೆ.

ವಿದೇಶಿ ಮರಗಳ ಮೆರುಗು: ಆಸ್ಟ್ರೇಲಿಯಾ, ಗ್ರೀಸ್‌ ದೇಶಗಳಲ್ಲಿ ಬೆಳೆಯುವ ಕುಬ್ಜ ಜಾತಿಯ ಆಲೀವ್‌ ಮರ; 25 ವರ್ಷಗಳಾಗಿರುವ ಈಚಲು ಜಾತಿಯ ವಾಷಿಂಗ್‌ಟನ್‌ನ ರೊಬೆಸ್ಟಾ; ಎಂಟರಿಂದ 15 ವರ್ಷಗಳಾಗಿರುವ ಇಟಾಲಿಯನ್‌ ಸೈಪರಸ್‌; ಫಿಲಿಪ್ಪೀನ್ಸ್‌, ಥಾಯ್ಲೆಂಡ್‌ನಲ್ಲಿ ಬೆಳೆಯುವ ಫೈಕಸ್‌ ಬ್ರೈಡೆಡ್‌; ಅಮೆರಿಕದ ಡ್ರೆಸಿನಾ ಡ್ರ್ಯಾಕೊ; ಕೆನಡಾ ದ್ವೀಪಗಳಲ್ಲಿ ಬೆಳೆಯುವ ಫಿನಿಕ್ಸ್‌ ಕೆನರಿಯನ್ಸಿಸ್‌ ಪಾಮ್‌ ಅಂತಹ ಹಲವು ವಿದೇಶಿ ಮರಗಳನ್ನು ಬೇರು ಸಮೇತ ತಂದು ಇಲ್ಲಿ ನೆಡಲಾಗಿದೆ. ಆರು ಸಾವಿರ ವರ್ಷಗಳ ಕಾಲ ಬದುಕುವ ಆಫ್ರಿಕಾ ಕಾಡಿನಲ್ಲಿ ಬೆಳೆಯುವ ‘ಬಿಯೊಬಾಬ್‌’ ಗಿಡಗಳನ್ನೂ ಇಲ್ಲಿ ಹಾಕಲಾಗಿದೆ.

ADVERTISEMENT

ಹಾವು ಮರವನ್ನು ಸುತ್ತಿಕೊಂಡಂತೆ ಕಾಣುವ ‘ಫೈಕಸ್‌ ಸ್ಪೈರಲ್‌’, ಹತ್ತು ತಲೆಯ ರಾವಣನಂತೆ ಕಂಡು ಬರುವ ‘ಫೈಕಸ್‌ ಬ್ರೈಡೆಡ್‌ ಮಲ್ಟಿ ಗ್ರಾಫ್ಟಿಂಗ್‌ ಟ್ರೀ’, ಪಿಂಕ್‌ ಹಾಗೂ ನೀಲಿ ಬಣ್ಣದ ಹೂವುಗಳನ್ನು ಬಿಡುವ ಯುರೋಪಿನ ‘ಬ್ರಾಕಿ ಕಿಟಾನ್‌’ ಮರ; 100 ಅಡಿ ಎತ್ತರದವರೆಗೂ ಬೆಳೆಯುವ ಟವರ್‌ ಟ್ರೀ, ಗಿಡಗಳ ಕಾಂಡವು ಬಲೆಯಂತೆ ಹೆಣೆದುಕೊಂಡಿರುವ ‘ನೆಟೆಡ್‌ ಫೈಕಸ್‌’; ಮಧ್ಯ ಪ್ರದೇಶದಿಂದ ತಂದಿರುವ ಬಾಟಲಿ, ಹೂಜಿ, ನವಿಲು, ಬಾತುಕೋಳಿ, ಚೆಂಡು ಸೇರಿ ಹಲವು ಬಗೆಯ ಆಕೃತಿಯ ‘ಟೊಪಿಯರಿಸ್‌’ ಗಿಡಗಳೂ ಗಮನ ಸೆಳೆಯುತ್ತಿವೆ. ಹಲವು ಜಾತಿಯ ಹೂವಿನ ಗಿಡಗಳು ಉದ್ಯಾನದ ಮೆರುಗು ಹೆಚ್ಚಿಸಿವೆ. ವಿನೂತನವಾಗಿರುವ ಈ ಗಿಡ–ಮರಗಳ ಎದುರಿಗೆ ನಿಂತು ‘ಸೆಲ್ಫಿ’ ತೆಗೆದುಕೊಂಡು ಜನ ಸಂಭ್ರಮಿಸುತ್ತಿದ್ದಾರೆ.

ಉದ್ಯಾನಕ್ಕೆ ₹ 4 ಕೋಟಿ ವೆಚ್ಚ: ‘ಗಾಜಿನಮನೆಯ ಆವರಣದಲ್ಲಿ ₹ 4 ಕೋಟಿ ವೆಚ್ಚದಲ್ಲಿ ವಿಶೇಷವಾದ ಉದ್ಯಾನ ನಿರ್ಮಿಸಲಾಗಿದೆ. ಹೈದರಾಬಾದ್‌ನ ‘ಯುನೀಕ್‌ ಟ್ರೀಸ್‌’ ಕಂಪನಿಯು ವಿದೇಶಿ ಗಿಡ–ಮರಗಳನ್ನು ಪೂರೈಸುವ ಗುತ್ತಿಗೆಯನ್ನು ಪಡೆದುಕೊಂಡಿತ್ತು. 5ರಿಂದ 25 ವರ್ಷಗಿಂತಲೂ ಹೆಚ್ಚು ವರ್ಷವಾಗಿರುವ ವಿದೇಶಿ ಮರಗಳನ್ನು ಬೇರು ಸಮೇತ ತಂದು ಇಲ್ಲಿ ನೆಡಲಾಗಿದ್ದು, ಎಲ್ಲವೂ ಬದುಕುಳಿದಿವೆ. ವಿದೇಶದಿಂದ ಹಳೆಯ ಮರಗಳನ್ನು ತಂದು ನೆಟ್ಟಿರುವುದು ರಾಜ್ಯದ ತೋಟಗಾರಿಕೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಡಲಾಗಿದೆ. ಬೆಂಗಳೂರಿನ ಲಾಲ್‌ಬಾಗ್‌ಗಿಂತಲೂ ಇದು ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳಲಿದೆ. ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ದುಬೈ, ಸಿಂಗಾಪುರದ ಉದ್ಯಾನ ನೋಡಿದಂತಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಟಿ.ಆರ್‌. ವೇದಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ಎಕರೆಯಲ್ಲಿ ಗಾಜಿನಮನೆ ನಿರ್ಮಿಸಲಾಗಿದ್ದು, ಉಳಿದ ಎಂಟು ಎಕರೆಯಲ್ಲಿ ಗಿಡ–ಮರಗಳನ್ನು ಬೆಳೆಸಲಾಗುತ್ತಿದೆ. ‘ಫಿನಿಕ್ಸ್‌ ಕೆನರಿಯನ್ಸಿಸ್‌’ ಒಂದು ಮರ ₹ 8 ಲಕ್ಷ ಬೆಲೆ ಬಾಳುತ್ತದೆ. ಫೈಕಸ್‌ ಬ್ರೈಡೆಡ್‌ ಮರಕ್ಕೆ ₹ 3 ಲಕ್ಷದಿಂದ ₹ 5 ಲಕ್ಷದವರೆಗೆ ಖರ್ಚಾಗಿದೆ. ಮರಗಳನ್ನು ಹಡಗಿನಲ್ಲಿ ತರಿಸಿರುವುದರಿಂದ ಹಾಗೂ ಆಮದು ತೆರಿಗೆ ಪಾವತಿಸಿರುವುದರಿಂದ ಇವುಗಳ ಬೆಲೆ ಸ್ವಲ್ಪ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಇದೀಗ ದಾವಣಗೆರೆಯ ಗಾಜಿನ ಮನೆ ಮಧ್ಯ ಕರ್ನಾಟಕ ಭಾಗದ ಪ್ರಮುಖ ಪ್ರವಾಸಿ ತಾಣವಾಗಿದೆ. ನಿತ್ಯ ಇಲ್ಲಿಗೆ ಸುಮಾರು 800 ಜನ ಭೇಟಿ ನೀಡುತ್ತಿದ್ದರೆ, ರಜಾ ದಿನಗಳಲ್ಲಿ ಈ ಸಂಖ್ಯೆ 2,500 ತಲುಪುತ್ತದೆ. ಇದರ ಯಶಸ್ಸಿನ ಹಿಂದೆ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಇಲಾಖೆಯ ಸಿಬ್ಬಂದಿ ಹಾಗೂ ಉದ್ಯಾನ ನಿರ್ವಹಣೆ ಮಾಡುವ ಮಾಲಿಗಳ ಪರಿಶ್ರಮವೂ ಬಹಳಷ್ಟಿದೆ’ ಎಂದ ವೇದಮೂರ್ತಿ, ವಿದೇಶಗಳಿಂದ ಗಿಡ ತರಿಸಿ ಬೆಳೆಸಲು ಪಟ್ಟ ಪಡಿಪಾಟಲುಗಳನ್ನು ಹೇಳಿಕೊಂಡರು.

ಜಿಮ್‌–ಮಕ್ಕಳ ಆಟಿಕೆ: ಮಹಾನಗರ ಪಾಲಿಕೆ ನೀಡಿದ ‘ಅಮೃತ ಸಿಟಿ’ ಯೋಜನೆಯ ₹ 1 ಕೋಟಿ ಅನುದಾನದಲ್ಲಿ ಗಾಜಿನಮನೆಯ ಆವರಣದಲ್ಲಿ ತೆರೆದ ಜಾಗದಲ್ಲಿ ವ್ಯಾಯಾಮ ಸಲಕರಣೆ ಹಾಗೂ ಮಕ್ಕಳಿಗೆ ಆಟಿಕೆಗಳನ್ನು ಹಾಕಲಾಗಿದೆ.

ವಾರದ ಏಳೂ ದಿನಗಳು ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಗಾಜಿನಮನೆ ಆವರಣ ತೆರೆದಿರುತ್ತದೆ.

ಉದ್ಯಾನ ನಿರ್ವಹಣೆಗೆ ಶುಲ್ಕ ವಸೂಲಿ
ಗಾಜಿನಮನೆ ಆವರಣಕ್ಕೆ ಬರುವ ಹಿರಿಯರಿಂದ ₹ 20 ಹಾಗೂ ಮಕ್ಕಳಿಂದ ₹ 10 ಪ್ರವೇಶ ಶುಲ್ಕ ವಸೂಲಿ ಮಾಡಲು ತೀರ್ಮಾನಿಸಲಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ₹ 25 ಸಾವಿರ, ಕಿರು ಧಾರಾವಾಹಿಗೆ ₹ 10 ಸಾವಿರ ಪ್ರಿವೆಡ್ಡಿಂಗ್‌ ಫೋಟೊ ಶೂಟಿಂಗ್‌ಗೆ ₹ 10 ಸಾವಿರ ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ಗಾಜಿನಮನೆಯಲ್ಲಿ ತರಬೇತಿ ಕಾರ್ಯಕ್ರಮ ನಡೆಸಲು ಸರ್ಕಾರಿ ಸಂಸ್ಥೆಗೆ ₹ 5 ಸಾವಿರ ಹಾಗೂ ಖಾಸಗಿ ಸಂಸ್ಥೆಗಳಿಗೆ ₹ 10 ಸಾವಿರ ಬಾಡಿಗೆ ವಸೂಲಿ ಮಾಡಲು ನಿಶ್ಚಯಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಜನವರಿ 26ರಿಂದ ಶುಲ್ಕ ವಸೂಲಾತಿ ಪ್ರಾರಂಭವಾಗಲಿದೆ. ಹಣವನ್ನು ಗಾಜಿನಮನೆ ಹಾಗೂ ಉದ್ಯಾನ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು ಎಂದು ವೇದಮೂರ್ತಿ ತಿಳಿಸಿದರು.

ಅಂಕಿ–ಅಂಶಗಳು
₹ 16 ಕೋಟಿ ಗಾಜಿನಮನೆ ನಿರ್ಮಾಣ ವೆಚ್ಚ
₹ 4 ಕೋಟಿ ಗಾಜಿನಮನೆ ಆವರಣದ ಉದ್ಯಾನಕ್ಕೆ ಮಾಡಿದ ಖರ್ಚು
2,500 ಗಾಜಿನಮನೆಗೆ ರಜಾ ದಿನಗಳಲ್ಲಿ ಭೇಟಿ ನೀಡುವ ಜನ

**

ಯಾವ ಮರ ಎಷ್ಟಿದೆ?
ಆಲೀವ್‌ ಮರ –80

ವಾಷಿಂಗ್‌ಟನ್‌ ರೊಬೆಸ್ಟಾ – 25

ಇಟಾಲಿಯನ್‌ ಸೈಪರಸ್‌ –60

ಬ್ರಾಕಿ ಕಿಟಾನ್‌ –50

ಫೈಕಸ್‌ ಬ್ರೆಡೆಡ್‌ –9

ಡ್ರೆಸಿನಾ ಡ್ರಾಕೊ –15

ಫಿನಿಕ್ಸ್‌ ಕೆನರಿಯನ್ಸಿಸ್‌ –4

ಡ್ರೆಸಿನಾ ಗಿಡ –25

ಕರ್ಪೂರ ಮರ –3

ಬಾಟಲ್‌ ಮರ –2

ನೆಟ್ಟೆಡ್‌ ಫೈಕಸ್‌ –50

ಫೈಕಸ್‌ ಬಾಲ್‌ –50

ಫೈಕಸ್‌ ಸ್ಪೈರಲ್‌ –15

ಫೈಕಸ್‌ ಬ್ರೈಡೆಡ್‌ ಮಲ್ಟಿ ಗ್ರಾಫ್ಟಿಂಗ್‌ –25

ಅರೆಕಾ ಪಾಮ್‌ –5

ಪಚಿರಾ ಗ್ರೀನ್‌ ಬುಷ್‌ –20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.