ದಾವಣಗೆರೆ: ಇಲ್ಲಿನ ಕಾರ್ಲ್ ಮಾರ್ಕ್ಸ್ ನಗರದಲ್ಲಿ ನಡೆದಿರುವ ಗಲಭೆಗೆ ಸಂಬಂಧಿಸಿದಂತೆ ಆಜಾದ್ ನಗರ ಠಾಣೆಯ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಒಂದು ಗುಂಪಿನ ಐವರು ಹಾಗೂ ಮತ್ತೊಂದು ಗುಂಪಿನ 29 ಜನರ ವಿರುದ್ಧ ಆಜಾದ್ ನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
‘ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ 8 ಜನರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ. ಕಾರ್ಲ್ ಮಾರ್ಕ್ಸ್ ನಗರದಲ್ಲಿ ಶಾಂತಿ ನೆಲೆಸಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
‘ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆ ಅಥವಾ ಸಂದೇಶ ರವಾನಿಸಬಾರದು. ಒಂದು ವೇಳೆ ಹೀಗೆ ಮಾಡಿದ್ದು ಕಂಡುಬಂದರೆ ಕಾನೂನು ಕ್ರಮ ನಿಶ್ಚಿತ. ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಎರಡು ಕೋಮುಗಳ ಮುಖಂಡರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಫ್ಲೆಕ್ಸ್ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಸೆ.24ರಂದು ರಾತ್ರಿ ಗಲಾಟೆ ನಡೆದಿತ್ತು. ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ, ಕಲ್ಲು ತೂರಾಟ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.