ದಾವಣಗೆರೆ: ಕಾರ್ಲ್ ಮಾರ್ಕ್ಸ್ ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಹಿಂದೂಗಳ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಗೂಂಡಾ ವರ್ತನೆ ತೋರಿದವರನ್ನು ಬಂಧಿಸಬೇಕು ಎಂದು ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗಸ್ವಾಮಿ ಒತ್ತಾಯಿಸಿದರು.
‘ಉದ್ಯಾನದ ಬದಿಗೆ ಇದ್ದ ಫ್ಲೆಕ್ಸ್‌ನ್ನು ಕಿತ್ತು ಹಿಂದೂಗಳ ಮನೆ ಎದುರು ಅಳವಡಿಸಿದ್ದು ಉದ್ದೇಶಪೂರ್ವಕ. ಇದನ್ನು ಪ್ರಶ್ನಿಸಿದ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ. ಮಹಿಳೆಯರ ಮೇಲೂ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಈ ಕೃತ್ಯ ನಡೆದಿರೂ ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಕಾರ್ಲ್ ಮಾರ್ಕ್ಸ್ ನಗರದಲ್ಲಿ ಸಂಭವಿಸಿದ ಗಲಭೆಯಿಂದ ಜನರು ಭೀತಿಗೆ ಒಳಗಾಗಿದ್ದಾರೆ. ಮನೆಗಳನ್ನು ತೊರೆದು ಹೋಗುವ ಆಲೋಚನೆ ಮಾಡುತ್ತಿದ್ದಾರೆ. ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಈ ಗಲಭೆ ನಡೆಸಲಾಗಿದೆ. ಇದೊಂದು ರೀತಿಯ ಲ್ಯಾಂಡ್ ಜಿಹಾದ್’ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಆರೋಪಿಸಿದರು.
‘ನೂರಾರು ಜನರು ಗುಂಪುಗೂಡಿ ದಲಿತ ಸಮುದಾಯದ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಗಲಭೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಶನಿವಾರದವರೆಗೆ ಕಾಲಾವಕಾಶವಿದೆ. ಪೊಲೀಸರ ಕ್ರಮ ನೋಡಿಕೊಂಡು ಭಾನುವಾರ ಹೋರಾಟ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇವೆ’ ಎಂದರು.
ಬಿಜೆಪಿ ಮುಖಂಡರಾದ ಬಿ.ಜೆ. ಅಜಯ್‌ಕುಮಾರ್, ಕೋಳೆನಹಳ್ಳಿ ಬಿ.ಎಂ. ಸತೀಶ್, ಧನಂಜಯ ಕಡ್ಲೇಬಾಳು, ವಿನಾಯಕ ರಾನಡೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.