
ದಾವಣಗೆರೆ: ಜಿಲ್ಲೆಯ 37 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಶನಿವಾರ ಸುಗಮವಾಗಿ ನಡೆಯಿತು. ವಿದ್ಯಾರ್ಥಿಗಳು ಮೊದಲ ದಿನ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದರು.
ಪರೀಕ್ಷೆಗೆ 16,942 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 506 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಳನಿವೇಲು ದೊರೆಸ್ವಾಮಿ ತಿಳಿಸಿದರು.
ಬೆಳಿಗ್ಗೆ 9 ಗಂಟೆ ಹೊತ್ತಿಗೆ ಪರೀಕ್ಷಾ ಕೇಂದ್ರಗಳತ್ತ ಧಾವಿಸಿದ ವಿದ್ಯಾರ್ಥಿಗಳು ತಾವು ಪರೀಕ್ಷೆ ಬರೆಯಬೇಕಿರುವ ಕೊಠಡಿಗಳನ್ನು ಖಚಿತಪಡಿಸಿಕೊಂಡರು. ಕಾಲೇಜು ಆವರಣದಲ್ಲಿ ಅಳವಡಿಸಿದ್ದ ಫಲಕದಲ್ಲಿ ತಮ್ಮ ನೋಂದಣಿ ಸಂಖ್ಯೆ ಹಾಗೂ ನಿಗದಿಪಡಿಸಿದ ಕೊಠಡಿ ಸಂಖ್ಯೆಯನ್ನು ಪರಿಶೀಲಿಸುತ್ತಿದ್ದ ದೃಶ್ಯ ಕಂಡುಬಂದಿತು.
ಬಹುತೇಕ ವಿದ್ಯಾರ್ಥಿಗಳು ಕೊಠಡಿ ಪ್ರವೇಶಿಸುವ ಮುನ್ನ ಕೊನೆಯ ಹಂತದ ತಯಾರಿ ನಡೆಸಿದರು. ಪುಸ್ತಕಗಳು ಹಾಗೂ ಟಿಪ್ಪಣಿಗಳತ್ತ ಕಣ್ಣು ಹಾಯಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ತಮ್ಮ ವಿದ್ಯಾರ್ಥಿಗಳನ್ನು ಕರೆತದಂದಿದ್ದ ಗೋಪನಾಳು ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ಸಿಬ್ಬಂದಿ, ಅವರಿಗೆ ಸಿಹಿ ವಿತರಿಸಿ ಶುಭ ಕೋರಿದರು.
‘ಪರೀಕ್ಷೆಗೂ ಒಂದು ತಿಂಗಳ ಮೊದಲೇ ಮೊಬೈಲ್ ಮನೆಯಲ್ಲಿಟ್ಟು ಹಾಸ್ಟೆಲ್‌ಗೆ ಬಂದಿದ್ದೆ. ಪರೀಕ್ಷಾ ತಯಾರಿ ನಡೆಸಲು ಯಾವುದೇ ಅಡೆತಡೆ ಉಂಟಾಗಲಿಲ್ಲ. ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಸಾಧ್ಯವಾಯಿತು’ ಎಂದು ವಿದ್ಯಾರ್ಥಿ ಕೆ.ಪಿ. ನವೀನ್ ಕುಮಾರ್ ತಿಳಿಸಿದ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಕೊನೆ ಕ್ಷಣದಲ್ಲಿ ಸಿಕ್ಕ ಪ್ರವೇಶಪತ್ರ
ನಗರದ ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವ ಕೊನೆಯ ಕ್ಷಣದಲ್ಲಿ ಪ್ರವೇಶಪತ್ರ ಪಡೆದುಕೊಂಡು ಪರೀಕ್ಷಾ ಕೇಂದ್ರಗಳತ್ತ ಓಡಿದರು. ‘ಬೆಳಿಗ್ಗೆ 7 ಗಂಟೆಗೇ ಕಾಲೇಜಿನ ಬಳಿಗೆ ಬಂದಿದ್ದೆ. ಕಡಿಮೆ ಹಾಜರಾತಿಯ ಕಾರಣಕ್ಕೆ ಪ್ರವೇಶ ಪತ್ರ ನೀಡುತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬ ಅಳಲು ತೋಡಿಕೊಂಡ. ಪ್ರವೇಶಪತ್ರ ನೀಡುವಂತೆ ಪೋಷಕರೂ ಒತ್ತಾಯಿಸಿದರು. ‘ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿರುವುದೇ ಪರೀಕ್ಷೆಯ ದಿನ. ಒಂದು ದಿನವೂ ತರಗತಿಗೆ ಹಾಜರಾಗದವರು ಇದ್ದಾರೆ. ಶೇ 75ಕ್ಕಿಂತ ಕಡಿಮೆ ಹಾಜರಾತಿ ಇದ್ದರೆ ಪ್ರವೇಶಪತ್ರ ನೀಡಲು ಅವಕಾಶವಿಲ್ಲ’ ಎಂದು ಕಾಲೇಜು ಸಿಬ್ಬಂದಿ ಸ್ಪಷ್ಟನೆ ನೀಡಿದರು. ಪೋಷಕರ ಒತ್ತಾಯಕ್ಕೆ ಮಣಿದ ಪ್ರಾಂಶುಪಾಲರು ಮಾನವೀಯತೆ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.