ದಾವಣಗೆರೆಯ ಹೊರವಲಯದಲ್ಲಿರುವ ಬಾತಿ ಕೆರೆ
–ಪ್ರಜಾವಾಣಿ ಚಿತ್ರ
ದಾವಣಗೆರೆ: ನಗರದ ಹೊರವಲಯದ ಬಾತಿ, ಹೊನ್ನೂರು ಹಾಗೂ ನಾಗನೂರು ಕೆರೆಗಳ ಅಭಿವೃದ್ಧಿಗೆ ದಾವಣಗೆರೆ– ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ಮುಂದಾಗಿದೆ. ಕೆರೆಗಳನ್ನು ಪ್ರವಾಸಿ ತಾಣಗಳನ್ನಾಗಿ ರೂಪಿಸಿ ಜನಾಕರ್ಷಕಗೊಳಿಸುವ ಕಾರ್ಯ ಆರಂಭವಾಗಿದೆ.
ಹರಿಹರ– ದಾವಣಗೆರೆ ಮಧ್ಯದಲ್ಲಿರುವ ಬಾತಿ ಕೆರೆಯನ್ನು ₹ 9.33 ಕೋಟಿ, ಹೊನ್ನೂರು ಹಾಗೂ ನಾಗನೂರು ಕೆರೆಗಳನ್ನು ತಲಾ ₹ 2.30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಬಾತಿ ಕೆರೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಹೊನ್ನೂರು ಹಾಗೂ ನಾಗನೂರು ಕೆರೆಗಳ ಅಭಿವೃದ್ಧಿಗೆ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ.
ನಗರ ವಿಸ್ತರಣೆ ಆದಂತೆ ಕೆರೆಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಕುಂದವಾಡ ಹಾಗೂ ಟಿ.ವಿ. ಸ್ಟೇಷನ್ ಕೆರೆಗಳು ಮಾತ್ರ ಹೊಸ ರೂಪ ಪಡೆದುಕೊಂಡು ಅಸ್ತಿತ್ವ ಉಳಿಸಿಕೊಂಡಿವೆ. ಕುಂದವಾಡ ಕೆರೆಯ ಮಾದರಿಯಲ್ಲಿ ಉಳಿದ ಕೆರೆಗಳನ್ನು ಅಭಿವೃದ್ಧಿಪಡಿಸಲು ‘ಧೂಡಾ’ ಉತ್ಸುಕತೆ ತೋರಿದೆ. ಪ್ರತಿ ವರ್ಷ ಸಂಗ್ರಹವಾಗುವ ಕೆರೆ ಅಭಿವೃದ್ಧಿ ಶುಲ್ಕವನ್ನು ಬಳಸಿಕೊಂಡು ಕೆರೆಗಳಿಗೆ ಕಾಯಕಲ್ಪ ನೀಡುವ ಪ್ರಯತ್ನಕ್ಕೆ ಕೈಹಾಕಿದೆ.
ಬಾತಿ ಕೆರೆಯನ್ನು ಪ್ರವಾಸಿ ತಾಣವಾಗಿ ರೂಪಿಸುವ ಪ್ರಸ್ತಾವ ಹಳೆಯದು. 2020ರಲ್ಲೇ ಇದಕ್ಕೆ ಪ್ರಯತ್ನಗಳು ನಡೆದಿದ್ದವು. ಕಾರಣಾಂತರಗಳಿಂದ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. 73 ಎಕರೆ 11 ಗುಂಟೆ ವಿಸ್ತೀರ್ಣ ಹೊಂದಿರುವ ಈ ಕೆರೆ ಒತ್ತುವರಿಯಿಂದ ಮುಕ್ತವಾಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಕೂಡ ಕೆರೆಯ ಪುನರುಜ್ಜೀವನಕ್ಕೆ ಅನುಮತಿ ಕೊಟ್ಟಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಏಕಗವಾಕ್ಷಿ ಸಮಿತಿಯೂ ಯೋಜನೆಗೆ ಅನುಮೋದನೆ ನೀಡಿದೆ.
‘ಕೆರೆ ಏರಿಯನ್ನು ಭದ್ರಪಡಿಸಿ ಸುತ್ತ ತಂತಿ ಬೇಲಿ ಅಳವಡಿಸಲಾಗುತ್ತದೆ. ಸಾರ್ವಜನಿಕರ ವಿಹಾರಕ್ಕೆ ಪಥ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಿ ಪ್ರವಾಸಿ ಸ್ನೇಹಿಯಾಗಿ ರೂಪಿಸಲು ₹ 9.33 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ದೋಣಿ ವಿಹಾರ, ಕಾರಂಜಿ ಸೇರಿದಂತೆ ಇತರ ಅಭಿವೃದ್ಧಿಗೆ ₹ 5 ಕೋಟಿ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಹಂತಹಂತವಾಗಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎನ್ನುತ್ತಾರೆ ‘ಧೂಡಾ’ ಆಯುಕ್ತ ಹುಲ್ಮನಿ ತಿಮ್ಮಣ್ಣ.
ಹೊಸ ಬಡಾವಣೆ ನಿರ್ಮಾಣವಾದಂತೆ ಸುತ್ತಲಿನ ಕೆರೆಗಳು ಅಂದ ಕಳೆದುಕೊಂಡು ಕಳೆಗುಂದುತ್ತವೆ. ಚರಂಡಿ ನೀರು ತುಂಬಿಕೊಂಡು ದುರ್ವಾಸನೆ ಬೀರುವ ತಾಣಗಳಾಗುತ್ತವೆ. ಇದಕ್ಕೆ ಕಡಿವಾಣ ಹಾಕಿರುವ ನಗರಾಭಿವೃದ್ಧಿ ಪ್ರಾಧಿಕಾರ ಚರಂಡಿ ನೀರು ಕೆರೆ ಒಡಲು ಸೇರದೇ ಇರುವಂತೆ ನೋಡಿಕೊಳ್ಳುತ್ತಿದೆ. ಖಾಸಗಿ ಬಡಾವಣೆಗೆ ಅನುಮೋದನೆ ನೀಡುವಾಗಲೇ ಈ ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸತೊಡಗಿದೆ.
‘ಬಾತಿ ಕೆರೆ ಅಭಿವೃದ್ಧಿಪಡಿಸಿದರೆ ಹರಿಹರ ಹಾಗೂ ದಾವಣಗೆರೆ ನಗರದ ಜನರಿಗೆ ಅನುಕೂಲವಾಗಲಿದೆ. ಪಿಕ್‌ನಿಕ್ ತಾಣವಾಗಿ ರೂಪುಗೊಂಡರೆ ಕುಟುಂಬಸಮೇತ ಕೆರೆ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಫುಡ್ ಕೋರ್ಟ್ ಸೇರಿ ಇತರ ಸೌಲಭ್ಯ ಕಲ್ಪಸುವ ಆಲೋಚನೆಯೂ ಇದೆ. ನಾಗನೂರು ಹಾಗೂ ಹೊನ್ನೂರು ಕೆರೆ ಪುನಶ್ಚೇತನಗೊಳಿಸಿ ಬಾತಿ ಕೆರೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಹುಲ್ಮನಿ ತಿಮ್ಮಣ್ಣ ತಿಳಿಸಿದರು.
ಕೆರೆ ಅಭಿವೃದ್ಧಿಯು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪರಿಕಲ್ಪನೆ. ಅವರ ಸೂಚನೆಯ ಮೇರೆಗೆ ಮೂರು ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆದಿನೇಶ್ ಶೆಟ್ಟಿ ಅಧ್ಯಕ್ಷರು ‘ಧೂಡಾ’
ಕೆರೆ ಅಭಿವೃದ್ಧಿ ಶುಲ್ಕವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಹೀಗಾಗಿ ಕೆರೆಗಳನ್ನು ಪ್ರವಾಸಿ ತಾಣವಾಗಿ ರೂಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆಹುಲ್ಮನಿ ತಿಮ್ಮಣ್ಣ ಆಯುಕ್ತರು ಧೂಡಾ
ಅಲಂಕಾರಿಕ ವಿದ್ಯುತ್ ದೀಪ
ದಾವಣಗೆರೆ ಹಾಗೂ ಹರಿಹರ ನಗರದ ಹೊರವಲಯದಲ್ಲಿ ‘ಧೂಡಾ’ ವತಿಯಿಂದ ₹ 3.69 ಕೋಟಿ ವೆಚ್ಚದಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ. ‘ಶಕ್ತಿನಗರದಿಂದ ಗಣಪತಿ ದೇವಸ್ಥಾನ ಬಾತಿ ಕೆರೆ ಹಾಗೂ ಅಮರಾವತಿ ಬಡಾವಣೆ ಸಮೀಪವೂ ಸೇರಿದಂತೆ ಮೂರು ಸ್ಥಳಗಳಲ್ಲಿ 205 ಅಲಂಕಾರಿಕ ದೀಪಗಳನ್ನು ಅಳವಡಿಸಲಾಗುತ್ತಿದೆ. ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಇನ್ನಷ್ಟೇ ಆರಂಭವಾಗಲಿದೆ’ ಎಂದು ಹುಲ್ಮನಿ ತಿಮ್ಮಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.