ADVERTISEMENT

ದಾವಣಗೆರೆ| ಹಿಂದುಳಿದ ವರ್ಗಕ್ಕೂ ರಾಜಕೀಯ ಶಕ್ತಿ ಸಿಗಲಿ: ಪಿ.ಎನ್. ಶ್ರೀನಿವಾಸಾಚಾರಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:51 IST
Last Updated 8 ಡಿಸೆಂಬರ್ 2025, 5:51 IST
ದಾವಣಗೆರೆಯ ಗುರುಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಗುರುಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಹಿಂದುಳಿದ ವರ್ಗಗಳಿಗೆ ರಾಜಕೀಯ ಶಕ್ತಿ ಬರುವವರೆಗೂ ಬೇರೊಬ್ಬರ ಅಡಿಯಾಳಾಗಿ ಇರಬೇಕಾಗುತ್ತದೆ. ಕೆಲವೇ ಸಮುದಾಯಗಳಿಗೆ ರಾಜಕೀಯ ಅಧಿಕಾರ ಸೀಮಿತವಾಗಿದ್ದು, ಎಲ್ಲರಿಗೂ ರಾಜಕೀಯ ಸಮಾನತೆ ದೊರೆಯಬೇಕು’ ಎಂದು ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅಭಿಪ್ರಾಯಪಟ್ಟರು. 

ಇಲ್ಲಿನ ಗುರುಭವನದಲ್ಲಿ ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್ ವತಿಯಿಂದ ಜಿಲ್ಲಾ ವಿಶ್ವಕರ್ಮ ಸಮಾಜ ಹಾಗೂ ಜಿಲ್ಲಾ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

‘ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುತ್ತಿವೆ. ಜಾತಿ ಮತ್ತು ಹಣ ಬಲ ಎರಡೂ ರಾಜಕೀಯದ ಭಾಗವಾಗಿವೆ. ಇದುವರೆಗೂ ವಿಧಾನಸಭೆ ಪ್ರವೇಶಿಸದ ಸಣ್ಣ, ಶೋಷಿತ ಸಮುದಾಯಗಳಿಗೆ ಅವಕಾಶ ನೀಡಬೇಕು. ಸೋತರೂ ಚಿಂತೆಯಿಲ್ಲ, ಅವರಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಸಮಾನತೆಯನ್ನು ಸಾರಬೇಕು’ ಎಂದರು. 

ADVERTISEMENT

‘ದೇಶದಲ್ಲಿ ಸಂವಿಧಾನ ಜಾರಿಯಾಗಿ ಹಲವು ದಶಕಗಳು ಗತಿಸಿದರೂ, ಇದುವರೆಗೆ ಹಿಂದುಳಿದ 90ಕ್ಕೂ ಹೆಚ್ಚು ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಸಂಸತ್ತು ಮತ್ತು ವಿಧಾನಸಭೆ ಕೆಲವೇ ಸಮುದಾಯಗಳ ಆಸ್ತಿಯಾಗಿ ಉಳಿದುಕೊಂಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಹಿಂದೆ ಜನಬಲದಿಂದ ನಡೆಯುತ್ತಿದ್ದ ಚುನಾವಣೆಗಳು ಈಗ ಜಾತಿ, ಹಣ ಬಲದಿಂದ ನಡೆಯುತ್ತಿವೆ. ಪ್ರತಿಯೊಬ್ಬರಿಗೂ ಸಂವಿಧಾನದ ಆಶಯದಂತೆ ರಾಜಕೀಯ, ಆರ್ಥಿಕ, ಸಾಮಾಜಿಕ ಸಮಾನತೆ ಬೇಕು. ಆದರೆ, ಹಿಂದುಳಿದ ಸಮಾಜದಲ್ಲಿ ಇದುವರೆಗೂ ಎಷ್ಟು ಜನರಿಗೆ ರಾಜಕೀಯ ಪ್ರಾತಿನಿಧ್ಯ ದೊರೆತಿದೆ’ ಎಂದು ಪ್ರಶ್ನಿಸಿದರು. 

‘ಅರಸು ಅವಧಿಯಿಂದ ಇದುವರೆಗೂ ವಿಶ್ವಕರ್ಮ ಸಮುದಾಯದಲ್ಲಿ ಕೇವಲ ಒಬ್ಬರು ಶಾಸಕರಾಗಿದ್ದಾರೆ. ನಂತರ ಯಾರೊಬ್ಬರಿಗೂ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡುತ್ತಿಲ್ಲ. ಎಲ್ಲರಿಗೂ ರಾಜಕೀಯ ಸಮಾನತೆ ದೊರೆಯಬೇಕು. ಆದರೆ, ಪರಿಹಾರ ಸೂಚಿಸುವ ಇಚ್ಛಾಶಕ್ತಿ ಯಾವ ಪಕ್ಷಗಳ ನಾಯಕರಲ್ಲೂ ಕಾಣುತ್ತಿಲ್ಲ. ಇವರಿಗೆಲ್ಲಾ ಸ್ವಲ್ವವಾದರೂ ಅಂತರಾತ್ಮ, ಆತ್ಮಸಾಕ್ಷಿ ಇದೆಯಾ’ ಎಂದು ಬೇಸರಿಸಿದರು. 

ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್‌ನ ಅಧ್ಯಕ್ಷ ಎ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವಿನಾಯಕ ಆಚಾರ್ಯ ಎಂ.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ, ಹರಪನಹಳ್ಳಿ ತಹಶೀಲ್ದಾರ್ ಗಿರೀಶ್ ಬಾಬು, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರಾಚಾರ್, ಪ್ರಮುಖರಾದ ಶ್ರೀಧರ್ ಸುಗಟೂರು, ರಾಜಗುರು, ಮರಿಯಾಚಾರ್, ಪರಮೇಶ್ವರಾಚಾರ್, ಲೋಕಾಚಾರ್ ಮಂಡಲೂರು, ಉಷಾ ಭಾಸ್ಕರ್, ತಿಲಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಚ್ಯುತಾನಂದ ಸ್ವಾಗತಿಸಿದರು. 

ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿ.ವಿ ಗೀಳಿಗೆ ಬಲಿಯಾಗದೇ ವಿದ್ಯಾಭ್ಯಾಸದತ್ತ ಹೆಚ್ಚಿನ ಒಲವು ತೋರಬೇಕು. ಶೈಕ್ಷಣಿಕವಾಗಿ ಸಾಧನೆ ತೋರಿದರೆ ಬೇರೆಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರಲಿವೆ
ಪಿ.ಎನ್. ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.