ADVERTISEMENT

ಸಂಖ್ಯಾಫಲಕ ಇಲ್ಲದ ವಾಹನ ವಶ

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 3:15 IST
Last Updated 9 ಜುಲೈ 2025, 3:15 IST
ದಾವಣಗೆರೆಯ ದಕ್ಷಿಣ ಸಂಚಾರ ಠಾಣೆಯಲ್ಲಿ ಸಂಖ್ಯಾ ಫಲಕ ಇಲ್ಲದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವುದು –ಪ್ರಜಾವಾಣಿ ಚಿತ್ರ
ದಾವಣಗೆರೆಯ ದಕ್ಷಿಣ ಸಂಚಾರ ಠಾಣೆಯಲ್ಲಿ ಸಂಖ್ಯಾ ಫಲಕ ಇಲ್ಲದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವುದು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಸಂಖ್ಯಾ ಫಲಕ ಹೊಂದಿಲ್ಲದ ವಾಹನಗಳ ವಿರುದ್ಧ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದ ಪೊಲೀಸರು, 50ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸಂಖ್ಯಾ ಫಲಕ ಇಲ್ಲದೇ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಸಾರ್ವಜನಿಕರಿಗೆ ಈ ಕಾರ್ಯಾಚರಣೆ ಮೂಲಕ ಬಿಸಿ ಮುಟ್ಟಿಸಿದರು. ಸ್ವತಃ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಬೆಳಿಗ್ಗೆ 7ಕ್ಕೆ ರಸ್ತೆಗೆ ಇಳಿದು ಆರಂಭಿಸಿದ ವಾಹನ ತಪಾಸಣೆ ಕಾರ್ಯ ಸಂಜೆಯವರೆಗೆ ನಡೆಯಿತು.

ವಶಕ್ಕೆ ಪಡೆದ ವಾಹನಗಳನ್ನು ಸಂಚಾರ ಠಾಣೆಯ ಪೊಲೀಸರಿಗೆ ಒಪ್ಪಿಸಲಾಯಿತು. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. ಸಂಖ್ಯಾ ಫಲಕ ಹೊಂದದೇ ವಾಹನ ಚಾಲನೆ ಮಾಡುತ್ತಿದ್ದ ಸವಾರರು ಇನ್ನು ಮುಂದೆ ಮತ್ತೊಮ್ಮೆ ಆಲೋಚಿಸಬೇಕಿದೆ.

ADVERTISEMENT

ಕುಂದುವಾಡ ಕೆರೆ ಸಮೀಪದ ಎಸ್‌.ಎಸ್‌.ಬಡಾವಣೆಯ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಸಂಖ್ಯಾ ಫಲಕ ಇಲ್ಲದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಸಂಚಾರ ಠಾಣೆಯ ಪೊಲೀಸರೊಂದಿಗೆ ತಪಾಸಣೆಗೆ ಇಳಿದರು. ರಿಂಗ್‌ ರಸ್ತೆಯ ಜಿಮ್‌ವೊಂದರ ಬಳಿ ಇಂತಹ ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದರು. ಡೆಂಟಲ್‌ ಕಾಲೇಜು ರಸ್ತೆ, ಎಂಸಿಸಿ ‘ಬಿ’ ಬ್ಲಾಕ್‌, ಬಾಲಕರ ಹಾಸ್ಟೆಲ್‌ ರಸ್ತೆ ಸೇರಿ ಹಲವೆಡೆ ಪೊಲೀಸರು ವಾಹನ ತಪಾಸಣೆ ನಡೆಸಿದರು.

‘ಸಂಖ್ಯಾ ಫಲಕ ಇಲ್ಲದ ವಾಹನ ಚಲಾಯಿಸುವುದು ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 177 ರ ಉಲ್ಲಂಘನೆ. ಅಪರಾಧ ಕೃತ್ಯಗಳಲ್ಲಿ ಬಳಸುವ ವಾಹನ ಗುರುತಿಗೆ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ಪತ್ತೆಗೆ ಸಂಖ್ಯಾ ಫಲಕ ಅತ್ಯಗತ್ಯ. ಸಂಚಾರ ನಿಯಮ ಪಾಲನೆ ಮಾಡದ ವಾಹನ ಮಾಲೀಕರಿಗೆ ನ್ಯಾಯಾಲಯದ ಮೂಲಕ ನೋಟಿಸ್‌ ನೀಡಿ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.

ಎಫ್‌ಐಆರ್‌ ದಾಖಲು: ಎಚ್ಚರಿಕೆ

‘ಸಂಖ್ಯಾ ಫಲಕ ಹೊಂದಿಲ್ಲದ ವಾಹನಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಎಚ್ಚರಿಕೆ ನೀಡಿದರು. ‘ನಂಬರ್‌ ಪ್ಲೇಟ್‌ ಇಲ್ಲದ 500ಕ್ಕೂ ಹೆಚ್ಚು ವಾಹನಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ. ವಾಹನದ ಮಾಲೀಕರಿಗೆ ಕೋರ್ಟ್‌ ಮೂಲಕ ದಂಡ ವಿಧಿಸಲಾಗಿದೆ. ಇನ್ನು ಮುಂದೆ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.