ADVERTISEMENT

ದಾವಣಗೆರೆ: ಶಾಲಾ ರಸ್ತೆ ದುರಸ್ತಿಗೆ ವಿದ್ಯಾರ್ಥಿನಿ ಧರಣಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:22 IST
Last Updated 22 ಆಗಸ್ಟ್ 2025, 5:22 IST
   

ದಾವಣಗೆರೆ: ಶಾಲೆಗೆ ಸಂಪರ್ಕ ಕಲ್ಪಿಸಿದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದುರಸ್ತಿ ಮಾಡುವಂತೆ ಒತ್ತಾಯಿಸಿ 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ಎದುರು ಗುರುವಾರ ಏಕಾಂಗಿ ಧರಣಿ ನಡೆಸಿದಳು.

ಗ್ರಾಮದ ಪಿ.ಎಚ್. ಬಾಬು ಹಾಗೂ ಎನ್.ಉಮಾ ದಂಪತಿ ಪುತ್ರಿ ಪಿ.ಬಿ. ಸುಶ್ಮಿತಾ ಏಕಾಂಗಿ ಧರಣಿ ನಡೆಸಿದ ವಿದ್ಯಾರ್ಥಿನಿ. ‘ಮೂಲ ಸೌಕರ್ಯಕ್ಕಾಗಿ ಹೋರಾಟ’ ಎಂಬ ಭಿತ್ತಿಚಿತ್ರವನ್ನು ಕುರ್ಚಿಯೊಂದಕ್ಕೆ ಕಟ್ಟಿ ನೆಲದ ಮೇಲೆ ಧರಣಿ ನಡೆಸಿದಳು.

‘ಶಾಲೆಗೆ ಸಂಪರ್ಕ ಕಲ್ಪಿಸಿದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಸಹಪಾಠಿಗಳು ಹಾಗೂ ಶಿಕ್ಷಕರು ಆಯತಪ್ಪಿ ಬಿದ್ದ ನಿದರ್ಶನಗಳಿವೆ. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ವಿದ್ಯಾರ್ಥಿನಿ ಒತ್ತಾಯಿಸಿದಳು.

ADVERTISEMENT

‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಅಳಲು ತೋಡಿಕೊಂಡಳು.

‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಧರಣಿ ಸ್ಥಳಕ್ಕೆ ಧಾವಿಸಿ ಪುತ್ರಿಯ ಮನವೊಲಿಸಲು ಪ್ರಯತ್ನಿಸಿದರು. ಮಧ್ಯಾಹ್ನದ ಹೊತ್ತಿಗೆ ಚರಂಡಿಯಲ್ಲಿ ಹೂಳು ತೆಗೆಯುವ ಕಾರ್ಯ ಆರಂಭವಾಯಿತು. ಇದನ್ನು ಗಮನಿಸಿದ ಪುತ್ರಿ ಧರಣಿ ಕೈಬಿಟ್ಟಳು’ ಎಂದು ಸುಶ್ಮಿತಾ ತಂದೆ ಪಿ.ಎಚ್‌.ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದನ್ನು ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಪುತ್ರಿ ಸ್ವಯಂ ಪ್ರೇರಿತವಾಗಿ ಧರಣಿ ನಡೆಸಿದಳು
ಪಿ.ಎಚ್. ಬಾಬು, ಸುಶ್ಮಿತಾ ತಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.