
ದಾವಣಗೆರೆ: ಬೆಂಗಳೂರಿನಲ್ಲಿ ಭಾನುವಾರ ಸಂಜೆ ನಿಧನರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಸೋಮವಾರ ನಸುಕಿನಲ್ಲಿ ದಾವಣಗೆರೆಗೆ ತರಲಾಯಿತು.
ಬೆಂಗಳೂರಿನ ಸದಾಶಿವನಗರದಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಚೇರಿಯ ಆವರಣದಿಂದ ಭಾನುವಾರ ಮಧ್ಯರಾತ್ರಿ ರಸ್ತೆ ಮಾರ್ಗವಾಗಿ ಪಾರ್ಥಿವ ಶರೀರವನ್ನು ದಾವಣಗೆರೆ ತರಲಾಯಿತು. ಸೋಮವಾರ ನಸುಕಿನ 3.30ಕ್ಕೆ ಎಂಸಿಸಿ ಬಡಾವಣೆಯ ‘ಬಿ’ ಬ್ಲಾಕ್‌ನಲ್ಲಿರುವ ನಿವಾಸ ತಲುಪಿತು.
ಹಿರಿಯ ಪುತ್ರ ಎಸ್.ಎಸ್. ಬಕ್ಕೇಶ್ ಅವರ ನಿವಾಸದಲ್ಲಿ ಮೊದಲು ಪಾರ್ಥಿವ ಶರೀರವನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದ್ವಿತೀಯ ಪುತ್ರ ಎಸ್.ಎಸ್. ಗಣೇಶ್ ಹಾಗೂ ತೃತೀಯ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕ್ಕಪಕ್ಕದಲ್ಲಿನ ನಿವಾಸಗಳಿಗೆ ತೆಗೆದುಕೊಂಡು ಹೋಗಲಾಯಿತು.
ಇಡೀ ರಾತ್ರಿ ಭಜನೆ:
ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಶಂಕರಪ್ಪ ಅವರ ಮನೆಯಲ್ಲಿ ದುಃಖ, ಮೌನ ಆವರಿಸಿತ್ತು. ಇಡೀ ಕುಟುಂಬ ಬೆಂಗಳೂರಿಗೆ ತೆರಳಿದ್ದರಿಂದ ಭಾನುವಾರ ಸಂಜೆ ಯಾರೊಬ್ಬರೂ ಹೊರಗೆ ಕಾಣಿಸಿಕೊಳ್ಳಲಿಲ್ಲ. ಮಧ್ಯರಾತ್ರಿ ಮನೆಗೆ ಮರಳುತ್ತಿದ್ದಂತೆ ಸಂಬಂಧಿಕರು, ಹಿತೈಷಿಗಳು ದೌಡಾಯಿಸಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಮಧ್ಯರಾತ್ರಿಯಿಂದ ಭಜನಾ ತಂಡಗಳು ಭಜನೆ ಪ್ರಸ್ತುತಪಡಿಸತೊಡಗಿದವು. ಭಕ್ತಿ ಗೀತೆಗಳನ್ನು ಹಾಡುತ್ತ, ಶಾಮನೂರು ಶಿವಶಂಕರಪ್ಪ ಅವರ ಗುಣಗಾನ ಮಾಡಲಾಯಿತು. ಬಸಾಪುರದ ಬಸವ ಕಲಾ ಲೋಕ ತಂಡದ ಕಲಾವಿದರು ಇಡೀ ರಾತ್ರಿ ಭಜನೆ ಮಾಡಿದರು.
ಬೆಳಗಿನವರೆಗೆ ಕಾದಿದ್ದ ಅಭಿಮಾನಿಗಳು:
ಶಿವಶಂಕರಪ್ಪ ಅವರ ನಿಧನದ ಮಾಹಿತಿ ತಿಳಿದು ಅವರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಜನರು ಅಪಾರ ಸಂಖ್ಯೆಯಲ್ಲಿ ಮನೆಯ ಎದುರು ಜಮಾಯಿಸಿದ್ದರು. ಬೆಂಗಳೂರಿನಿಂದ ತಂದಿದ್ದ ಪಾರ್ಥಿವ ಶರೀರದ ದರ್ಶನ ಪಡೆಯಲು ಬೆಳಗಿನವರೆಗೂ ಕಾದರು. ಮೊದಲ ಹಂತದ ಪೂಜಾ ಕೈಂಕರ್ಯಗಳು ಪೂರ್ಣಗೊಳ್ಳುತ್ತಿದ್ದಂತೆ ಮನೆಯ ಆವರಣದಲ್ಲಿ ದರ್ಶನಕ್ಕೆ ಇರಿಸಲಾಯಿತು.
ಗಣ್ಯರು, ಹಿತೈಷಿಗಳು ಸಾಲಾಗಿ ಬಂದು ದರ್ಶನ ಪಡೆದರು. ಶಿವಶಂಕರಪ್ಪ ಅವರ ಮುಖವನ್ನು ಕಣ್ತುಂಬಿಕೊಂಡು ಭಾವುಕರಾದರು. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಪೂಜೆ ನಡೆಸಲಾಯಿತು. ಇದು ಕುಟುಂಬದ ಸದಸ್ಯರು, ಗಣ್ಯರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ಇತರರಿಗೆ ಮನೆಯ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.