ADVERTISEMENT

ದಾವಣಗೆರೆ: 1.96 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

ರಾಮಮೂರ್ತಿ ಪಿ.
Published 29 ಮೇ 2025, 6:59 IST
Last Updated 29 ಮೇ 2025, 6:59 IST
ಮಲೇಬೆನ್ನೂರು ಸಮೀಪದ ರಾಮನಕಟ್ಟೆ ಬಳಿಯ ಜಮೀನೊಂದರಲ್ಲಿ ರೈತರೊಬ್ಬರು ಮೆಕ್ಕೆಜೋಳದ ಬಿತ್ತನೆಗೆ  ಟ್ರ್ಯಾಕ್ಟರ್‌ ಮೂಲಕ ಭೂಮಿಯನ್ನು ಹದ ಮಾಡುತ್ತಿರುವುದು ಬುಧವಾರ ಕಂಡುಬಂತು
ಮಲೇಬೆನ್ನೂರು ಸಮೀಪದ ರಾಮನಕಟ್ಟೆ ಬಳಿಯ ಜಮೀನೊಂದರಲ್ಲಿ ರೈತರೊಬ್ಬರು ಮೆಕ್ಕೆಜೋಳದ ಬಿತ್ತನೆಗೆ  ಟ್ರ್ಯಾಕ್ಟರ್‌ ಮೂಲಕ ಭೂಮಿಯನ್ನು ಹದ ಮಾಡುತ್ತಿರುವುದು ಬುಧವಾರ ಕಂಡುಬಂತು   

ದಾವಣಗೆರೆ: ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ 1.96 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಕೆಲವೆಡೆ ಈಗಾಗಲೇ ಬಿತ್ತನೆ ಕಾರ್ಯ ಶುರುವಾಗಿದೆ. ಮುಂಗಾರುಪೂರ್ವ ಮಳೆಯು ಆರ್ಭಟಿಸಿರುವುದು ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕೃಷಿ ಇಲಾಖೆಯು ರೈತರಿಗೆ ಅಗತ್ಯವಿರುವ ಬಿತ್ತನೆಬೀಜ ಹಾಗೂ ರಸಗೊಬ್ಬರವನ್ನು ರೈತಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದು, ವಿತರಣೆಗೂ ಕ್ರಮ ವಹಿಸಿದೆ. ಜಮೀನುಗಳನ್ನು ಹದಗೊಳಿಸಿಕೊಂಡು ವರುಣನ ಬಿಡುವಿಗಾಗಿ ಅನ್ನದಾತರು ಕಾಯುತ್ತಿದ್ದಾರೆ. 2–3 ದಿನ ಮಳೆ ಬಿಡುವು ನೀಡಿದ ಪ್ರದೇಶಗಳಲ್ಲಿ ಈಗಾಗಲೇ ವಿವಿಧ ಬೆಳೆಗಳಿಗೆ ಬಿತ್ತನೆ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ.

ಮೆಕ್ಕೆಜೋಳವು ಜಿಲ್ಲೆಯ ಪ್ರಧಾನ ಬೆಳೆಯಾಗಿದ್ದು, 1.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. 2ನೇ ಮುಖ್ಯ ಬೆಳೆ ಭತ್ತವಾಗಿದ್ದು, 53,300 ಹೆಕ್ಟೇರ್‌ ‍ಪ್ರದೇಶ ವ್ಯಾಪ್ತಿ ಹೊಂದಿದೆ.

ADVERTISEMENT

ಇನ್ನುಳಿದಂತೆ 9,775 ಹೆಕ್ಟೇರ್‌ನಲ್ಲಿ ರಾಗಿ, 4,270 ಹೆಕ್ಟೇರ್‌ನಲ್ಲಿ ಶೇಂಗಾ, 1,923 ಹೆಕ್ಟೇರ್‌ನಲ್ಲಿ ತೊಗರಿ, 1,883 ಹೆಕ್ಟೇರ್‌ನಲ್ಲಿ ಹತ್ತಿ ಹಾಗೂ 1,528 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬೀಜ ಬಿತ್ತನೆ ಗುರಿ ಹೊಂದಲಾಗಿದೆ. ಮುಸುಕಿನ ಜೋಳ, ಗೋಧಿ, ಕಬ್ಬು, ಅಲಸಂದೆ, ಅವರೆ ಸೇರಿದಂತೆ ಇನ್ನಿತರ ಬೆಳೆಗಳನ್ನೂ ಅಲ್ಪಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಜಿಲ್ಲೆಯಲ್ಲಿ ಈ ಹಿಂದೆ 400ರಿಂದ 500 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ತೊಗರಿ ಬೆಳೆ ಬೆಳೆಯಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚಾಗುತ್ತಿದೆ.

ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಭಾಗದಲ್ಲಿ ತೋಟಗಾರಿಕೆ ಬೆಳೆಯಾದ ಅಡಿಕೆ ತೋಟಗಳು ಹೆಚ್ಚಿನ ಪ್ರದೇಶದಲ್ಲಿವೆ. ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಈ ತಾಲ್ಲೂಕುಗಳಲ್ಲಿ ಮಳೆಯಾಶ್ರಿತ ಕೃಷಿಯ ಪ್ರಮಾಣ ಕೊಂಚ ತಗ್ಗಿದೆ.

ಜಗಳೂರು, ದಾವಣಗೆರೆ, ಮಾಯಕೊಂಡ ಹಾಗೂ ಹರಿಹರ ಭಾಗದಲ್ಲಿ ಮುಂಗಾರು ಹಂಗಾಮಿನ ಕೃಷಿ ದೊಡ್ಡಮಟ್ಟದಲ್ಲಿದೆ. ಅದರಲ್ಲೂ ಜಗಳೂರು ತಾಲ್ಲೂಕು ಸಂಪೂರ್ಣ ಮಳೆಯಾಶ್ರಿತ ಬೆಳೆಯನ್ನು ಅವಲಂಬಿಸಿದೆ. ಇಲ್ಲಿ ಮೆಕ್ಕೆಜೋಳವನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 66,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈ ಪೈಕಿ ಅರ್ಧದಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಬೆಳೆಯಲಾಗುತ್ತಿದೆ. 18,000 ಹೆಕ್ಟೇರ್‌ನಲ್ಲಿ ಭತ್ತ, 2,500 ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯಲಾಗುತ್ತಿದೆ.

‘ಎರಡು ದಿನದಿಂದ ಮಳೆ ಬಿಡುವ ನೀಡಿದ್ದು, ಮೆಕ್ಕೆಜೋಳ ಹಾಗೂ ಹತ್ತಿ ಬೀಜಗಳನ್ನು ಬಿತ್ತುವ ಕೆಲಸದಲ್ಲಿ ತೊಡಗಿದ್ದೇವೆ. ವರುಣ ಅಡ್ಡಿಪಡಿಸದಿದ್ದರೆ, ಬಿತ್ತನೆ ಕಾರ್ಯಕ್ಕೆ ಮತ್ತಷ್ಟು ವೇಗ ದೊರೆಯಲಿದೆ’ ಎಂದು ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದ ಕೆ.ಬಿ.ರವಿ ತಿಳಿಸಿದರು.

‘ಎನ್‌ಪಿಕೆ ಕಾಂಪ್ಲೆಕ್ಸ್‌ ರಸಗೊಬ್ಬರ ಬಳಸಿ’

‘20–30 ವರ್ಷಗಳಿಂದ ಡಿಎಪಿ ಯೂರಿಯಾ ರಸಗೊಬ್ಬರವನ್ನೇ ಬಳಸುತ್ತಿರುವುದು ಸರಿಯಲ್ಲ. ರೈತರು ಡಿಎಪಿ ಬದಲಾಗಿ ಎನ್‌ಪಿಕೆ ಕಾಂಪ್ಲೆಕ್ಸ್‌ ರಸಗೊಬ್ಬರವನ್ನು ಬಳಸುವ ಮೂಲಕ ಬೆಳೆಗಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸಬೇಕು. ಆ ಮೂಲಕ ಉತ್ತಮ ಇಳುವರಿ ಪಡೆಯಬೇಕು’ ಎಂದು ದಾವಣಗೆರೆ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಸಲಹೆ ನೀಡಿದರು. ‘ರೈತರು ಅಧಿಕೃತ ಡೀಲರ್‌ಗಳಿಂದ ಮಾತ್ರ ಬೀಜ ರಸಗೊಬ್ಬರಗಳನ್ನು ಖರೀದಿಸಬೇಕು. ರಸೀದಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅವಸರ ಪಡದೇ ಭೂಮಿಯ ಹಸಿ ನೋಡಿಕೊಂಡು ಸಕಾಲದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.