
ದಾವಣಗೆರೆ: ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನವರಿ 30ರಿಂದ ಫೆಬ್ರುವರಿ 13ರ ವರೆಗೆ ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ –2026 ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ತಾರತಮ್ಯವನ್ನು ಕೊನೆಗೊಳಿಸುವುದು ಘನತೆಯನ್ನು ಕಾಪಾಡುವುದು’ ಈ ವರ್ಷದ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.
‘ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವುದು ಆಂದೋಲನದ ಉದ್ದೇಶವಾಗಿದೆ. ರೋಗವನ್ನು ಆದಷ್ಟು ಬೇಗ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.
‘ಸಮುದಾಯದಲ್ಲಿ ಅರಿವು ಮೂಡಿಸಬೇಕು. ಉಂಟಾಗಬಹುದಾದ ಅಂಗವಿಕಲತೆಯನ್ನು ತಪ್ಪಿಸಬೇಕು. ರೋಗಿಗಳು ಚಿಕಿತ್ಸೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ನೆಲೆಸಿರುವವರು, ಕುಷ್ಠರೋಗಿಗಳೊಂದಿಗೆ ಸಂಪರ್ಕ ಹೊಂದಿದವರು, ಶಾಲೆ– ಕಾಲೇಜಿನ ವಿದ್ಯಾರ್ಥಿಗಳು, ನಗರದ ಸ್ಲಂ ಪ್ರದೇಶಗಳಲ್ಲಿ ವಾಸಿಸುವವರಿಗೆ ಕುಷ್ಠರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಬೇಕು’ ಎಂದು ತಿಳಿಸಿದರು.
‘ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಬೇಕು. ರೋಗಿಗಳನ್ನು ಗುರುತಿಸುವುದು ಹಾಗೂ ಚಿಕಿತ್ಸೆ ನೀಡುವುದಕ್ಕೆ ಕಾರ್ಮಿಕರ ವಲಸೆಯು ಸವಾಲಾಗಿದೆ’ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.
‘ಕುಷ್ಠರೋಗಿಗಳ ಸಂಖ್ಯೆ ಇಳಿಮುಖ’
‘ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಷ್ಠರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಸದ್ಯ 46 ಜಿಲ್ಲೆಯಲ್ಲಿ ಪ್ರಕರಣಗಳು ಇವೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಮುರಳೀಧರ್ ಪಿ.ಡಿ. ತಿಳಿಸಿದರು. 3 ವರ್ಷದ ಹಿಂದೆ ಜಗಳೂರಿನಲ್ಲಿ ಕುಷ್ಠರೋಗ ಪ್ರಕರಣಗಳು ಹೆಚ್ಚಾಗಿದ್ದವು. ಇದೀಗ ಕಡಿಮೆಯಾಗಿವೆ. ಜಿಲ್ಲೆಯಲ್ಲಿ 2021–22ರಲ್ಲಿ 66 2022–23ರಲ್ಲಿ 67 2023–24ರಲ್ಲಿ 79 2024–25ರಲ್ಲಿ 63 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. 2025ರ ಏಪ್ರಿಲ್‌ನಿಂದ ಡಿಸೆಂಬರ್ ವರೆಗೆ 38 ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.
ರೋಗಿಗಳಿಗೆ ಉಚಿತ ಔಷಧಿ ಕಿಟ್
‘ಕುಷ್ಠರೋಗವು ಬ್ಯಾಕ್ಟೀರಿಯಾದಿಂದ ಬರುವಂತಹ ಕಾಯಿಲೆ. ಕಾಯಿಲೆ ಹರಡುವುದನ್ನು ತಪ್ಪಿಸಲು ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. 400 ರಿಂದ 500 ವರ್ಷಗಳ ಇತಿಹಾಸವಿರುವ ಕಾಯಿಲೆ ಇದಾಗಿದೆ. ಆರಂಭಿಕ ಹಂತದಲ್ಲಿಯೇ ಸರಿಯಾದ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು’ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಮುರಳೀಧರ್ ಪಿ.ಡಿ. ತಿಳಿಸಿದರು. 5 ರಿಂದ 10 ವರ್ಷಗಳ ಚಿಕಿತ್ಸೆಯ ಅಗತ್ಯತೆ ಇರುತ್ತದೆ. ರೋಗಿಗಳಿಗೆ ಉಚಿತ ಔಷಧಿ ಮತ್ತು ಕಿಟ್ ನೀಡಲಾಗುವುದು. ಕುಷ್ಠರೋಗದ ಬಗ್ಗೆ ಗ್ರಾಮಗಳಲ್ಲಿ ಅರಿವು ಮೂಡಿಸಲು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಒಬ್ಬ ಕುಷ್ಠರೋಗಿಯನ್ನು ಪತ್ತೆ ಹಚ್ಚಿದರೆ ಆಶಾ ಕಾರ್ಯಕರ್ತೆಯರಿಗೆ ₹ 600 ಪ್ರೋತ್ಸಾಹಧನ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.