ADVERTISEMENT

ದಾವಣಗೆರೆ; ವಿದ್ಯಾರ್ಥಿನಿಗೆ ಕ್ಯಾನ್ಸರ್‌–ಮನೆಮಗಳಂತೆ ಕಾಪಾಡಿದ ಶಿಕ್ಷಕರು,ವೈದ್ಯರು

ಕ್ಯಾನ್ಸರ್‌ ಪೀಡಿತ ಬಡ ಬಾಲಕಿಗೆ ದೇಣಿಗೆ ಸಂಗ್ರಹಿಸಿ ನೆರವು

ಅನಿತಾ ಎಚ್.
Published 17 ಏಪ್ರಿಲ್ 2024, 3:09 IST
Last Updated 17 ಏಪ್ರಿಲ್ 2024, 3:09 IST
ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಿದ ಮಂಗಳೂರಿನ ಜುಲೇಖಾ ಯೇನೆಪೋಯ ಆಸ್ಪತ್ರೆ ಸಿಬ್ಬಂದಿ
ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಿದ ಮಂಗಳೂರಿನ ಜುಲೇಖಾ ಯೇನೆಪೋಯ ಆಸ್ಪತ್ರೆ ಸಿಬ್ಬಂದಿ   

ದಾವಣಗೆರೆ: ನಗರದ ನಿಟುವಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳು ಕ್ಯಾನ್ಸರ್‌ ಪೀಡಿತಳಾಗಿ, ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದಾಗ ಶಾಲೆಯ ಶಿಕ್ಷಕವೃಂದ ಹಾಗೂ ಮಂಗಳೂರಿನ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸಮಾಜದಿಂದ ದೇಣಿಗೆ ಸಂಗ್ರಹಿಸಿ ನೆರವಾಗಿದ್ದಾರೆ.

ವಿದ್ಯಾರ್ಥಿನಿ 9ನೇ ತರಗತಿಯಲ್ಲಿ ಓದುತ್ತಿರುವಾಗ ಪದೇಪದೇ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳುತ್ತಿತ್ತು. ಕತ್ತು, ಗದ್ದ, ಮುಖ ಊದಿಕೊಳ್ಳುತ್ತಿತ್ತು. ಮಂಗಳೂರಿನ ಜುಲೇಖಾ ಯೇನೆಪೋಯ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ರಕ್ತದ ಕ್ಯಾನ್ಸರ್‌ (ಅಕ್ಯೂಟ್‌ ಮೈಲಾಯ್ಡ್‌ ಲ್ಯುಕೇಮಿಯಾ) ದೃಢಪಟ್ಟಿತ್ತು. ಚಿಕಿತ್ಸೆಗಾಗಿ ₹12 ಲಕ್ಷ ಖರ್ಚಾಗುವುದಾಗಿ ವೈದ್ಯರು ತಿಳಿಸಿದ್ದರು. ಗಾರೆ ಕೆಲಸ, ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿರುವ ವಿದ್ಯಾರ್ಥಿನಿಯ ಪಾಲಕರು ಅಷ್ಟೊಂದು ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿ ಹಾಗೂ ಶಾಲೆಯ ಶಿಕ್ಷಕರ ನೆರವಿನಿಂದಾಗಿ ವಿದ್ಯಾರ್ಥಿನಿ ಇದೀಗ ಕ್ಯಾನ್ಸರ್‌ನಿಂದ ಗುಣಮುಖಳಾಗಿದ್ದಾಳೆ.

‘ಮೊದಲ ಬಾರಿ ಪರೀಕ್ಷೆ ಮಾಡಿಸಿದಾಗ ₹1 ಲಕ್ಷ ಖರ್ಚಾಗಿತ್ತು. 6 ತಿಂಗಳು ಇಂಜೆಕ್ಷನ್‌ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು. ಆದರೆ, ನಮ್ಮ ಬಳಿ ಹಣವಿರಲಿಲ್ಲ. ಆಯುಷ್ಮಾನ್‌ ಕಾರ್ಡ್‌ ಮಾಡಿಸಿಕೊಟ್ಟಿದ್ದರು. ಮಗಳು ಸಂಪೂರ್ಣ ಗುಣಮುಖವಾಗಲು ₹12 ಲಕ್ಷ ಖರ್ಚು ಮಾಡಿ ಚಿಕಿತ್ಸೆ ಕೊಡಿಸಬೇಕಿತ್ತು. ನಮ್ಮ ಬಡತನ ಅರಿತ ಆಸ್ಪತ್ರೆ ಸಿಬ್ಬಂದಿಯು ಸಹಾಯ ಕೋರುವ ವಿಡಿಯೊ ಅನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರಿಂದ ಸ್ವಲ್ಪ ಪ್ರಮಾಣದ ಆರ್ಥಿಕ ನೆರವು ದೊರೆತಿತ್ತು’ ಎಂದು ಪಾಲಕರು ತಿಳಿಸಿದರು.

ADVERTISEMENT

‘ಶಾಲೆಯ ಶಿಕ್ಷಕರಾದ ಕೆ.ಟಿ. ಜಯಪ್ಪ, ಮಗಳು ಶಾಲೆಗೆ ಗೈರಾಗಿರುವ ಬಗ್ಗೆ ವಿಚಾರಿಸಿದಾಗ ವಿಷಯ ತಿಳಿಸಿದ್ದೆ. ಅವರೂ ವಿಡಿಯೊ ಲಿಂಕ್‌ ತರಿಸಿಕೊಂಡು ಸ್ಥಳೀಯವಾಗಿ ಎಲ್ಲರ ಜೊತೆ ಹಂಚಿಕೊಂಡರು. ಶಾಲೆಯ ಎಲ್ಲ ಶಿಕ್ಷಕರು ಸೇರಿ ಒಟ್ಟು ₹1 ಲಕ್ಷ ಸಂಗ್ರಹಿಸಿಕೊಟ್ಟರು. ಮುಂದೆ ಅನೇಕರ ಸಹಾಯದಿಂದ ಚಿಕಿತ್ಸೆಗೆ ಅಗತ್ಯವಿದ್ದ ಹಣವೆಲ್ಲ ಸಂಗ್ರಹವಾಯಿತು. ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿಯೇ ಇದ್ದೆವು. ಕಳೆದ ಆಗಸ್ಟ್‌ನಲ್ಲಿ ಮಗಳಿಗೆ ಚಿಕಿತ್ಸೆ ನೀಡಲಾಯಿತು’ ಎಂದು ಹೇಳಿದರು.

‘ಚಿಕಿತ್ಸೆ ನಂತರದ ಖರ್ಚುಗಳಿಗೆ ಜಯಪ್ಪ ಮೇಷ್ಟ್ರು ಅನೇಕ ದಾನಿಗಳಿಂದ ನೆರವು ಕೊಡಿಸಿದರು. ನಮ್ಮ ಮನೆಯ ಅಕ್ಕಪಕ್ಕದವರು, ಸಮುದಾಯದವರೂ ಸಹಾಯ ಮಾಡಿದ್ದರಿಂದ ಮಗಳು ಕ್ಯಾನ್ಸರ್‌ ಗೆದ್ದಿದ್ದಾಳೆ. ಎಲ್ಲ ಸರಿ ಇದ್ದಿದ್ದರೆ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುತ್ತಿದ್ದಳು. ಇಷ್ಟೆಲ್ಲಾ ಆದರೂ ಓದುವ ಛಲ ಮಗಳಲ್ಲಿದೆ. ವೈದ್ಯರ ಸಲಹೆ ಪಡೆದು ಬರುವ ವರ್ಷ ಶಾಲೆಗೆ ಕಳುಹಿಸುತ್ತೇವೆ’ ಎಂದರು.

ಶಾಲೆಯ ಎಲ್ಲ ಶಿಕ್ಷಕರು ಸಹಪಾಠಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದ್ದರಿಂದ ಬದುಕಿದ್ದೇನೆ. ಕೆಎಎಸ್‌ ಮಾಡುವ ಕನಸು ಇದ್ದು ಜಯಪ್ಪ ಮೇಷ್ಟ್ರಂತೆ ಸಮಾಜಮುಖಿಯಾಗಿ ಬದುಕುತ್ತೇನೆ
ವಿದ್ಯಾರ್ಥಿನಿ ಸರ್ಕಾರಿ ಪ್ರೌಢಶಾಲೆ ನಿಟುವಳ್ಳಿ
ನಮ್ಮ ಶಾಲೆಯ ವಿದ್ಯಾರ್ಥಿಗಳ ಪೈಕಿ ಈ ವಿದ್ಯಾರ್ಥಿನಿ ಮಾತ್ರ ಎನ್‌ಎಮ್‌ಎಮ್‌ಎಸ್‌ ಪರೀಕ್ಷೆ ಪಾಸ್‌ ಮಾಡಿ ವಿದ್ಯಾರ್ಥಿವೇತನ ಪಡೆಯುತ್ತಿದ್ದಳು. ಶಾಲೆಯ ಎಲ್ಲ ಶಿಕ್ಷಕರು ಮುಖ್ಯವಾಗಿ ಜಯಪ್ಪ ಅವರ ಕಾಳಜಿ ಶ್ಲಾಘನೀಯ
ಎಂ. ಸುರೇಶ್‌ ಮುಖ್ಯಶಿಕ್ಷಕ ಸರ್ಕಾರಿ ಪ್ರೌಢಶಾಲೆ (ಆರ್‌ಎಮ್‌ಎಸ್‌ಎ) ನಿಟುವಳ್ಳಿ
ವಿದ್ಯಾರ್ಥಿನಿಗೆ ಅಕ್ಯೂಟ್‌ ಮೈಲಾಯ್ಡ್‌ ಲ್ಯುಕೇಮಿಯಾ ದೃಢಪಟ್ಟಿತ್ತು. ಆಕೆಯ ತಂಗಿಯ ಅಸ್ಥಿಮಜ್ಜೆಯನ್ನು ತೆಗೆದು ಶಾಂತಾಗೆ ಕಸಿ (ಬೋನ್‌ಮ್ಯಾರೊ ಟ್ರಾನ್ಸ್‌ಪ್ಲಾಂಟೇಶನ್‌) ಮಾಡಿದ್ದು ಸಂಪೂರ್ಣ ಗುಣಮುಖಳಾಗಿದ್ದಾಳೆ
ಡಾ.ರಾಜೇಶ್‌ ಕೃಷ್ಣ ಜುಲೇಖಾ ಯೇನೆಪೋಯ ಆಸ್ಪತ್ರೆ ಮಂಗಳೂರು

ದಾನಿಗಳಿಂದ ಬದುಕಿದ ವಿದ್ಯಾರ್ಥಿನಿ

ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿ ಚಿಕಿತ್ಸೆಗೆ ನೆರವು ಕೋರಿದಾಗ ಜಾತಿ ಮತ ಯಾವುದನ್ನೂ ಲೆಕ್ಕಿಸದೆ ಹಲವರು ಧನಸಹಾಯ ಮಾಡಿದ್ದಾರೆ. ಮಂಡಿಪೇಟೆ ಕಾರ್ಪೊರೇಟರ್‌ ಆರ್‌.ಎಲ್‌. ಶಿವಪ್ರಕಾಶ್‌ ತಮ್ಮ ಮಗಳ ಜನ್ಮದಿನದ ಸಂಭ್ರಮಾಚರಣೆ ಕಾರ್ಯಕ್ರಮ ರದ್ದುಪಡಿಸಿ ವಿದ್ಯಾರ್ಥಿನಿ ಮನೆಗೆ ಬಂದು ಮಗಳ ಕೈಯಿಂದಲೇ ಕಾರ್ಯಕ್ರಮದ ಖರ್ಚಿಗೆಂದು ಮೀಸಲಿರಿಸಿದ್ದ ₹1 ಲಕ್ಷ ಕೊಡಿಸಿದರು. ಸ್ವದೇಶಿ ಸೋಲಾರ್‌ ಮಾಲೀಕರಾದ ಕೆ.ಪ್ರವೀಣ್‌ಕುಮಾರ್‌ ಅವರು ₹25000 ನೀಡಿದರು. ಇನ್ನೂ ಹಲವರ ನೆರವಿನಿಂದ ನಮ್ಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಗುಣಮುಖಳಾಗಿರುವುದು ಸಂತಸ ತಂದಿದೆ. ಕೆ.ಟಿ. ಜಯಪ್ಪ ಶಿಕ್ಷಕ ಸರ್ಕಾರಿ ಪ್ರೌಢಶಾಲೆ (ಆರ್‌ಎಮ್‌ಎಸ್‌ಎ) ನಿಟುವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.