ADVERTISEMENT

ಜಿ.ಪಂ ಸಿಇಒ ಬಸವರಾಜೇಂದ್ರ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 18:00 IST
Last Updated 22 ಫೆಬ್ರುವರಿ 2019, 18:00 IST
ದಾವಣಗೆರೆ ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ಐಎಎಸ್‌ ಅಧಿಕಾರಿ ಎಚ್‌. ಬಸವರಾಜೇಂದ್ರ ಶುಕ್ರವಾರ ಅಧಿಕಾರ ಸ್ವೀಕರಿಸಿದರು
ದಾವಣಗೆರೆ ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ಐಎಎಸ್‌ ಅಧಿಕಾರಿ ಎಚ್‌. ಬಸವರಾಜೇಂದ್ರ ಶುಕ್ರವಾರ ಅಧಿಕಾರ ಸ್ವೀಕರಿಸಿದರು   

ದಾವಣಗೆರೆ: ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ಐಎಎಸ್‌ ಅಧಿಕಾರಿ ಎಚ್‌. ಬಸವರಾಜೇಂದ್ರ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಐಎಎಸ್‌ ಅಧಿಕಾರಿ ಬಸವರಾಜೇಂದ್ರ ಬೆಂಗಳೂರಿನವರು. ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್‌ ಓದಿದ್ದಾರೆ.

ಜಮಖಂಡಿ, ತಿಪಟೂರು ಉಪ ವಿಭಾಗಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ‌ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಸಾಮಾಜಿಕ ಮತ್ತು ಆರ್ಥಿಕ ಸಂಸ್ಥೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಕ್ಯೂನಿಕ್ಸ್‌ನ ನಿರ್ದೇಶಕರಾಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಶೇಷ ತನಿಖಾಧಿಕಾರಿಯಾಗಿಯೂ ಕೆಲಸ ಮಾಡಿದ ಅನುಭವ ಬಸವರಾಜೇಂದ್ರ ಅವರಿಗೆ ಇದೆ.

ಗುಳೆ ತಡೆ, ಕುಡಿಯುವ ನೀರು ಪೂರೈಕೆಗೆ ಒತ್ತು:ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಿ ಗುಳೆ ತಡೆಯಲು ಗಮನ ನೀಡಲಾಗುವುದು. ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ₹ 3.24 ಕೋಟಿ ಕೂಲಿ ಹಣ ನೀಡುವುದು ಬಾಕಿಯಿದೆ. ಸರ್ಕಾರದಿಂದ ಅನುದಾನ ಬಂದ ಕೂಡಲೇ ತ್ವರಿತವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಬಸವರಾಜೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ಅದು ಮುಗಿಯುವವರೆಗೆ ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ತಿಳಿದುಕೊಳ್ಳುತ್ತೇನೆ. ನಂತರ ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚು ಗಮನ ನೀಡುತ್ತೇನೆ’ ಎಂದರು.

‘ದಾವಣಗೆರೆಗೆ ಮೊದಲ ಬಾರಿ ಬಂದಿದ್ದೇನೆ. ಇಲ್ಲಿನ ಭೌಗೋಳಿಕ ಲಕ್ಷಣ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಬೇಕಿದೆ. ಕಂದಾಯ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿಗೆ ನೇಮಕವಾಗಿದ್ದೇನೆ. ಇಲ್ಲಿನ ಆಡಳಿತ ವ್ಯವಸ್ಥೆ ಅರಿತು, ಪಾರದರ್ಶಕ ಮತ್ತು ದಕ್ಷ ಆಡಳಿತ ನೀಡುತ್ತೇನೆ’ ಎಂದು ತಿಳಿಸಿದರು.

ತಪ್ಪು ಮಾಡಿದರೆ ಕಾನೂನಿಂತೆ ಕ್ರಮ:ಜಿಲ್ಲಾ ಪಂಚಾಯಿತಿಯ ಹಿಂದಿನ ಸಿಇಒ ಎಸ್‌. ಅಶ್ವತಿ ವಿರುದ್ಧ ಎಸಿಬಿಗೆ ದೂರು ನೀಡಿರುವ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜೇಂದ್ರ, ‘ಪ್ರಕರಣದ ತನಿಖೆಯನ್ನು ಎಸಿಬಿ ನಡೆಸುತ್ತಿದೆ. ಎಸಿಬಿಯೇ ಆ ಪ್ರಕರಣದ ಬಗೆಗೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ. ನನ್ನ ಅಧಿಕಾರಾವಧಿಯಲ್ಲಿ ಅಧಿಕಾರಿಗಳು ತಪ್ಪು ಮಾಡಿರುವುದು ಕಂಡು ಬಂದರೆ ಕಾನೂನು ಪ್ರಕಾರ ದಿಟ್ಟ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.