ADVERTISEMENT

ಚುನಾವಣೆ: ಮಾದರಿ ನೀತಿ ಸಂಹಿತೆ ಜಾರಿ

ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳ ತಂಡ ರಚನೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:51 IST
Last Updated 30 ಮಾರ್ಚ್ 2023, 4:51 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಬರುವ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್, ಸಿಇಒ ಎ. ಚನ್ನಪ್ಪ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಇದ್ದಾರೆ
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಬರುವ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್, ಸಿಇಒ ಎ. ಚನ್ನಪ್ಪ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಇದ್ದಾರೆ   

ದಾವಣಗೆರೆ: ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಬುಧವಾರ ಬೆಳಿಗ್ಗೆ ಜಾರಿಯಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಜಿಲ್ಲೆಯಾದ್ಯಂತ ಕಾರ್ಯಾಚರಿಸಲಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಏಪ್ರಿಲ್‌ 13ಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏ. 20 ಕೊನೇ ದಿನ. ಏ.21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಏ.24 ಕೊನೇ ದಿನ. ಮೇ 10ರಂದು ಮತದಾನ, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ ಇರುತ್ತಾರೆ. ಜಿಲ್ಲೆಯಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಪೋಸ್ಟರ್‌ಗಳನ್ನು 48 ಗಂಟೆಗಳ ಒಳಗೆ ತೆರವುಗೊಳಿಸಲು ತಂಡ ರಚಿಸಲಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರಿ, ಅರೆಸರ್ಕಾರಿ, ಸಹಕಾರಿ ಪ್ರವಾಸಿ ಮಂದಿರಗಳನ್ನು ವಶಪಡಿಸಿಕೊಳ್ಳಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ ಎಂದರು.

ADVERTISEMENT

ಜನಪ್ರತಿನಿಧಿಗಳು ಯಾವುದೇ ಯೋಜನೆಯ ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಯಾರಿಗೂ ಯಾವುದೇ ಸಹಾಯಧನ ನೀಡಲು, ಸಹಾಯಧನದ ಭರವಸೆ ನೀಡಲು ಅವಕಾಶವಿಲ್ಲ. ಯಾವುದೇ ನಗದು ವೆಚ್ಚ ಭರಿಸುವ ಭರವಸೆ ನೀಡುವಂತಿಲ್ಲ. ಮತದಾರ ಅಥವಾ ಅಭ್ಯರ್ಥಿ ಅಲ್ಲದ ಜನಪ್ರತಿನಿಧಿಗಳು ಮತಗಟ್ಟೆಯ ಒಳಗೆ ಪ್ರವೇಶಿಸುವಂತಿಲ್ಲ. ಧರ್ಮ, ಭಾಷೆ, ಹಾತಿ, ಆಧರಿಸಿ ಮತ ಕೇಳಬಾರದು. ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡಬಾರದು. ಖಾಸಗಿ ಜೀವನವನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡಬಾರದು. ಬಾವುಟ, ಬ್ಯಾನರ್‌, ಬಂಟಿಂಗ್‌, ಗೋಡೆ ಬರಹಗಳನ್ನು ಅಂಟಿಸಲು ಕಾನೂನು ತೊಡಕು ಇಲ್ಲದೇ ಇರುವಲ್ಲಿ ಅದರ ಮಾಲೀಕರಿಂದ ಅನುಮತಿ ಪಡೆದಿರಬೇಕು. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಪರವಾನಗಿ ಪಡೆಯಬೇಕು ಎಂದು ವಿವರಿಸಿದರು.

ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಸಮಾರಂಭ ನಡೆಸಲು, ಹೆಲಿಪ್ಯಾಡ್‌ಗಳನ್ನು ಬಳಸಲು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಸುವ ಅಧಿಕಾರಿಗಳು, ಚುನಾವಣಾ ಅಧಿಕಾರಿ, ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ರಜೆ ಮೇಲೆ ತೆರಳುವಂತಿಲ್ಲ. ಕೇಂದ್ರ ಸ್ಥಾನ ಬಿಡಬೇಕಾದ್ದಲ್ಲಿ ಕಡ್ಡಾಯವಾಗಿ ಜಿಲ್ಲಾಧಿಕಾರಿಯ ಅನುಮತಿ ಪಡೆಯಬೇಕು ಎಂದರು.

ಅಭ್ಯರ್ಥಿಗಳ ಚುನಾವಣಾ ವೆಚ್ಚ ₹ 40 ಲಕ್ಷ ನಿಗದಿ ಪಡಿಸಲಾಗಿದೆ. ಚುನಾವಣಾ ವೆಚ್ಚವನ್ನು ಪರಿಶೀಲಿಸಲು ಜಿಲ್ಲಾ ವೆಚ್ಚ ನಿಯಂತ್ರಣ ಕೋಶ ಮಾಡಲಾಗಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸೌಮ್ಯಾಶ್ರಿ ನೋಡಲ್‌ ಅಧಿಕಾರಿಯಾಗಿರುವರು ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿ, ದೂರುಗಳಿಗೆ 1950ಕ್ಕೆ ಕರೆ ಮಾಡಬೇಕು. ಸಾರ್ವಜನಿಕ ದೂರುಗಳಿಗೆ 08192 272953ಗೂ ಕರೆ ಮಾಡಬಹುದು. ಅಲ್ಲದೇ ಆಯಾ ವಿಧಾನಸಭಾ ಕ್ಷೇತ್ರವಾರು ಇರುವ ಕಂಟ್ರೋಲ್‌ ರೂಂಗಳನ್ನೂ ಸಂಪರ್ಕಿಸಬಹುದು ಎಂದರು.

ಮಾಧ್ಯಮಗಳಲ್ಲಿ ಜಾಹೀರಾತು, ಪಾವತಿ ಸುದ್ದಿ ಪ್ರಕಟಿಸುವ ಮೊದಲು ಅನುಮತಿ ಪಡೆಯಬೇಕು ಎಂದರು. 7 ವಿಧಾನಸಭಾ ಕ್ಷೇತ್ರಗಳಲ್ಲಿ 1683 ಮತಗಟ್ಟೆಗಳು ಇವೆ. 2 ಹೆಚ್ಚುವರಿ ಮತಗಟ್ಟೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ 50ರಷ್ಟು ಮತಗಟ್ಟೆಗಳು ಆನ್‌ಲೈನ್‌ ಪರಿಶೀಲನೆಯಲ್ಲಿರಲಿವೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ಚುನಾವಣೆಯಲ್ಲಿ 3,241 ಬ್ಯಾಲೆಟ್‌ ಯುನಿಟ್‌, 2274 ಕಂಟ್ರೋಲ್‌ ಯುನಿಟ್‌, 2,463 ವಿವಿಪ್ಯಾಟ್‌ ಬಳಕೆಯಾಗಲಿವೆ ಎಂದು ವಿವರಿಸಿದರು.

ಸ್ವೀಪ್‌ ಕಾರ್ಯಕ್ರಮ: ಮತದಾರರ ನೋಂದಣಿ, ಮತದಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ. 18–19 ವರ್ಷದ ಯುವಜನರ ನೋಂದಣಿ ಪ್ರಕ್ರಿಯೆ ಹೆಚ್ಚಿಸಲು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕ್ಯಾಂಪಸ್‌ ಅಂಬಾಸಡರ್‌, ಎಲೆಕ್ಟೋರಲ್‌ ಲಿಟರಸಿ ಕ್ಲಬ್‌ ಮಾಡಲಾಗಿದೆ. 30,0091 ಯುವಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 19,427 ವಿಶೇಷ ಚೇತನ ಮತದಾರರನ್ನು ಗುರುತಿಸಲಾಗಿದೆ ಎಂದು ಅಂಕಿ ಅಂಶ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್ ಇದ್ದರು.

ಸಿ–ವಿಜಿಲ್‌ ಆ್ಯಪ್‌

ಮುಕ್ತ, ನ್ಯಾಯಸಮ್ಮತ, ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿ-ವಿಜಿಲ್‌ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಆಮೀಷ, ಲಂಚ, ಉಡುಗೊರೆ ನೀಡುವುದು ಕಂಡು ಬಂದರೆ ಅದರ ಫೋಟೊ, ವಿಡಿಯೊ ತೆಗೆದು ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ದೂರುಗಳು ಇದ್ದರೆ ಕರೆ ಮಾಡಿ

ಮತದಾರರಿಗೆ ಆಮೀಷವೊಡ್ಡು ವುದನ್ನು, ಅನಧಿಕೃತ ಮದ್ಯಮಾರಾಟ, ಹಣ ಹಂಚಿಕೆ ಮಾಡುವುದನ್ನು ತಡೆಯಲು ಪ್ರತಿ ಪೊಲೀಸ್‌ ಸರ್ಕಲ್‌ಗೆ ಒಂದರಂತೆ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ 21 ಫ್ಲೈಯಿಂಗ್‌ ಸ್ಕ್ಯಾಡ್‌ಗಳನ್ನು ರಚಿಸಲಾಗಿದೆ. ಆಮೀಷವೊಡ್ಡುವುದು ಕಂಡು ಬಂದರೆ ಟೋಲ್‌ಫ್ರಿ ನಂಬರ್‌ 18004251342 ಇದಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. 37 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.