ದಾವಣಗೆರೆ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಮೊದಲ ಹಂತವಾದ ‘ವಿಶಿಷ್ಟ ಮನೆ ಸಂಖ್ಯೆ’ಯ (ಯುಎಚ್‌ಐಡಿ) ಚೀಟಿ ಅಂಟಿಸುವ ಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯ 4.91 ಲಕ್ಷ ಮನೆಗಳ ‘ಜಿಯೊ ಟ್ಯಾಗಿಂಗ್’ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
‘ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಆಧರಿಸಿ ಎಲ್ಲ ಮನೆಗಳನ್ನು ಗುರುತಿಸಲಾಗಿದೆ. ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳನ್ನು ಪರಿಶೀಲಿಸಿ ಯುಎಚ್‌ಐಡಿ ನೀಡಲಾಗಿದೆ. ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 4.52 ಲಕ್ಷ ಕುಟುಂಬಗಳಿವೆ. ಶೇ 20ರಷ್ಟು ಹೆಚ್ಚುವರಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, 5.4 ಲಕ್ಷ ಕುಟುಂಬಗಳ ಸಮೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಸರ್ಕಾರಿ, ಅನುದಾನಿತ ಶಾಲೆಗಳ ಶಿಕ್ಷಕರು ಸೇರಿದಂತೆ 3,876 ಗಣತಿದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗದಂತೆ ಯೋಜಿಸಲಾಗಿದೆ. ಪ್ರತಿ ಗಣತಿದಾರರಿಗೆ 150 ಮನೆಗಳ ಗುರಿ ನಿಗದಿಪಡಿಸಲಾಗಿದೆ. 20 ಗಣತಿದಾರರ ಮೇಲೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ತರಬೇತಿ ಪಡೆದ 6 ಮಾಸ್ಟರ್ ಟ್ರೈನರ್‌ಗಳು ಜಿಲ್ಲೆಯಲ್ಲಿ ತರಬೇತಿ ನೀಡುತ್ತಿದ್ದಾರೆ’ ಎಂದು ವಿವರಿಸಿದರು.
ಆಧಾರ್ ಇ–ಕೆವೈಸಿಗೆ ಆ್ಯಪ್: ‘60 ಪ್ರಶ್ನಾವಳಿಗಳನ್ನು ಜನರ ಮುಂದಿಟ್ಟು ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಪ್ರಶ್ನಾವಳಿಯ ಕುರಿತು ಅರಿವು ಮೂಡಿಸುವ ಕಾರ್ಯ ಸೆ.16ರಿಂದ ಆರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಗಣತಿಗೆ ಆಧಾರ್ ಇ–ಕೆವೈಸಿ ಕಡ್ಡಾಯ. ಇ–ಕೆವೈಸಿ ಆಗದಿರುವ ಆಧಾರ್‌ಗಳನ್ನು ಗುರುತಿಸಲಾಗುತ್ತಿದೆ. ಇದಕ್ಕೆ ವಿಶೇಷ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಆಧಾರ್ ಇ–ಕೆವೈಸಿ ಮಾಡಲಿದ್ದಾರೆ. ಸೆ.22ರಿಂದ ಆರಂಭವಾಗಲಿರುವ ಸಮೀಕ್ಷೆ ಕಾರ್ಯ ಅ.7ಕ್ಕೆ ಮುಕ್ತಾಯಗೊಳ್ಳಲಿದೆ’ ಎಂದರು.
ಸಮೀಕ್ಷೆಗೆ ಸಹಕರಿಸಿ: ‘ಸಮೀಕ್ಷೆಗೆ ನಿಯೋಜಿಸಿದ ಗಣತಿದಾರರು ಮನೆ– ಮನೆಗೆ ಭೇಟಿ ನೀಡಲಿದ್ದಾರೆ. ಮನೆಯ ಆವರಣದಲ್ಲಿರುವ ನಾಯಿ ಸೇರಿದಂತೆ ಸಾಕು ಪ್ರಾಣಿಗಳನ್ನು ಕಟ್ಟಿಹಾಕಿ ಸಹಕಾರ ನೀಡಬೇಕು. ಗಣತಿದಾರರ ಗುರುತು ಖಚಿತಪಡಿಸಿಕೊಂಡು ಮಾಹಿತಿ ಒದಗಿಸಬೇಕು. ಸಮೀಕ್ಷೆ ಪೂರ್ಣಗೊಂಡ ಬಳಿಕ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು’ ಎಂದರು.
‘ನ್ಯಾಮತಿ ಹಾಗೂ ಚನ್ನಗಿರಿ ತಾಲ್ಲೂಕಿನ ಕೆಲವೆಡೆ ಮನೆಗಳು ಅಲ್ಲಲ್ಲಿ ಚದುರಿಕೊಂಡಿವೆ. ಅರಣ್ಯದ ಅಂಚಿನಲ್ಲಿರುವ ಹಾಗೂ ತೋಟದಲ್ಲಿರುವ ಮನೆ ಕೂಡ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಎಚ್ಚರವಹಿಸಲಾಗಿದೆ. ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇಣುಕಾದೇವಿ ಹಾಜರಿದ್ದರು.
- ‘ಹಾವು ಕಡಿತ: ಬೇಡ ನಾಟಿ ಚಿಕಿತ್ಸೆ’
‘ಹಾವು ಕಚ್ಚಿದಾಗ ನಾಟಿ ಔಷಧ ಪಡೆದು ಜೀವಕ್ಕೆ ಅಪಾಯ ತಂದುಕೊಳ್ಳುವ ಬದಲು ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮನವಿ ಮಾಡಿದರು. ‘ಎಲ್ಲ ಹಾವುಗಳು ವಿಷಪೂರಿತ ಅಲ್ಲ. ವಿಷ ರಹಿತ ಹಾವು ಕಚ್ಚಿದಾಗ ನಾಟಿ ಚಿಕಿತ್ಸೆ ಫಲಕಾರಿ ಆದಂತಹ ಭಾವನೆ ಮೂಡುತ್ತದೆ. ಹಾವು ಕಡಿತಕ್ಕೆ ನೀಡುವ ಔಷಧ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯ ಇದೆ. ಹಾವು ಕಚ್ಚಿದಾಗ ಬೇಗ ಆಸ್ಪತ್ರೆಗೆ ಬಂದಷ್ಟು ಅನುಕೂಲ. ನಾಟಿ ಚಿಕಿತ್ಸೆಯ ಪಡೆದು ಕಾಲಾಹರಣ ಮಾಡಬೇಡಿ’ ಎಂದು ಹೇಳಿದರು.
‘ನಾಯಿ: ಇರಲಿ ಧೈರ್ಯ’ ‘
ನಾಯಿ ಹಾಗೂ ಹಂದಿ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ನೀಡಲಾಗುತ್ತಿದೆ. ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ನಾಯಿ ಮತ್ತು ಹಂದಿಗಳ ಕಾಟಕ್ಕೆ ಕಡಿವಾಣ ಬೀಳಲಿದೆ’ ಎಂದು ಜಿಲ್ಲಾಧಿಕಾರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಒಂದು ದಿನ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ ನನ್ನ ಮೇಲೆಯೂ ನಾಯಿಗಳು ದಾಳಿ ನಡೆಸಲು ಯತ್ನಿಸಿದವು. ಮಕ್ಕಳು ಮಹಿಳೆಯರು ಇಂತಹ ಸಂಕಷ್ಟ ಎದುರಿಸಿದ್ದಾರೆ. ರೇಬಿಸ್ ಮಾರಣಾಂತಿಕ ಕಾಯಿಲೆಯಾಗಿದ್ದು ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ’ ಎಂದರು.
‘ಮನೆ ಮುಂದೆ ಡಂಗೂರ’
‘ಎಲ್ಲೆಂದರಲ್ಲಿ ಕಸ ಎಸೆದು ನಗರದ ಸೌಂದರ್ಯ ಹಾಳು ಮಾಡುವವರ ಪತ್ತೆಗೆ ಮೊಬೈಲ್ ಫೋನ್ ಆ್ಯಪ್ ರೂಪಿಸಲಾಗುತ್ತಿದೆ. ಚಿತ್ರ ಸಹಿತ ಮಾಹಿತಿ ನೀಡಿದರೆ ಕಸ ಎಸೆದವರ ಮನೆಯ ಮುಂದೆ ಡಂಗೂರ ಹೊಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ಖಾಲಿ ನಿವೇಶನಗಳು ಕಸ ಎಸೆಯುವ ಸ್ಥಳಗಳಾಗಿವೆ. ಇದನ್ನು ತಡೆಯಲು ನಿವೇಶನಗಳಿಗೆ ಕಾಂಪೌಂಡ್ ಹಾಕಿಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗುತ್ತಿದೆ. ಕಟ್ಟಡ ತ್ಯಾಜ್ಯ ವಿಲೇವಾರಿಗೆ ಆನಗೋಡು ಸಮೀಪ ಸ್ಥಳ ನಿಗದಿಪಡಿಸಲಾಗಿದೆ. ಈ ತ್ಯಾಜ್ಯ ಸಂಗ್ರಹಿಸಲು ನಗರದಲ್ಲಿ ಮೂರು ಜಾಗಗಳನ್ನು ಗುರುತಿಸಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.