ADVERTISEMENT

ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಆನುಗೋಡು, ಹೆಬ್ಬಾಳ ಸುತ್ತಲಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 16:32 IST
Last Updated 20 ಜನವರಿ 2026, 16:32 IST
<div class="paragraphs"><p>ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ</p></div>

ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

   

ದಾವಣಗೆರೆ: ತಾಲ್ಲೂಕಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಸಾಂಕ್ರಾಮಿಕ ರೋಗಕ್ಕೆ ನಾಲ್ಕು ಜಿಂಕೆಗಳು ಬಲಿಯಾಗಿರುವುದರಿಂದ ಎಚ್ಚೆತ್ತುಕೊಂಡ ಪಶುಸಂಗೋ‍ಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಆನುಗೋಡು ಹಾಗೂ ಹೆಬ್ಬಾಳ ಸುತ್ತಲಿನ ಜಾನುವಾರುಗಳಿಗೆ ‘ಗಂಟಲು ಬೇನೆ’ ಲಸಿಕೆ ನೀಡುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದೆ.

ಕಿರು ಮೃಗಾಲಯದ ಸುತ್ತಲಿನ ಗ್ರಾಮಗಳ ಎತ್ತು, ಎಮ್ಮೆ, ಮೇಕೆ, ಕುರಿ ಸೇರಿದಂತೆ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲು ಪಶು ವೈದ್ಯಾಧಿಕಾರಿಗಳು ಸಕ್ರಿಯರಾಗಿದ್ದಾರೆ. ರೋಗ ಹರಡದಂತೆ ತಡೆಯಲು ‘ವೃತ್ತಾಕಾರದ ಲಸಿಕಾಕರಣ’ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಈ ವಾರಾಂತ್ಯಕ್ಕೆ ಲಸಿಕೆ ಕಾರ್ಯವನ್ನು ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ.

ADVERTISEMENT

ಕಿರು ಮೃಗಾಲಯದಲ್ಲಿ ಜ.16ರಿಂದ ಜ.18ರವರೆಗೆ ನಾಲ್ಕು ಜಿಂಕೆಗಳು ಮೃತಪಟ್ಟಿವೆ. ಇವು ‘ಹೆಮರಾಜಿಕ್ ಸೆಪ್ಟಿಸೆಮಿಯಾ’ (ಗಂಟಲು ಬೇನೆ) ಎಂಬ ಸಾಂಕ್ರಾಮಿಕ ಕಾಯಿಲೆಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಜಿಂಕೆಗಳ ದೇಹದ ಮಾದರಿಗಳನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿ ಬರುವುದಕ್ಕೂ ಮುನ್ನವೇ ಈ ಕಾಯಿಲೆ ಹರಡಂತೆ ತಡೆಯಲು ಲಸಿಕೆಯನ್ನು ಹಾಕುವ ಕಾರ್ಯಕ್ಕೆ ಪಶುವೈದ್ಯಕೀಯ ಇಲಾಖೆ ಚಾಲನೆ ನೀಡಿದೆ.

‘ಸೋಂಕಿಗೆ ಒಳಗಾಗುವ ಸಾಧ್ಯತೆ ಇರುವ ಪ್ರಾಣಿಗಳನ್ನು ರಕ್ಷಿಸಲು ಹಾಗೂ ರೋಗ ಹರಡದಂತೆ ತಡೆಯಲು ವೃತ್ತಾಕಾರದ ಲಸಿಕಾಕರಣ (ರಿಂಗ್‌ ವ್ಯಾಕ್ಸಿನೇಷನ್‌) ಪ್ರಮುಖ ತಂತ್ರವಾಗಿದೆ. ಪಶುವೈದ್ಯಕೀಯ ಇಲಾಖೆಯಲ್ಲಿ ಈ ತಂತ್ರವನ್ನು ಆಗಾಗ ಬಳಸಲಾಗುತ್ತದೆ. ಮೃಗಾಲಯದ ಸುತ್ತಲಿನ ಗ್ರಾಮಗಳನ್ನು ಕೇಂದ್ರೀಕರಿಸಿ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತದೆ’ ಎಂದು ಪಶುವೈದ್ಯಕೀಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಮೃಗಾಲಯದ ಸುತ್ತಲಿನ ಹೆಬ್ಬಾಳ, ಆನುಗೋಡು, ಉಳುಪಿನಕಟ್ಟೆ, ಹಾಲುವರ್ತಿ, ಚಿನ್ನಸಮುದ್ರ, ನರಗನಹಳ್ಳಿ ಹಾಗೂ ಗಂಗನಕಟ್ಟೆ ಗ್ರಾಮಗಳನ್ನು ಲಸಿಕೆಗೆ ಗುರುತಿಸಲಾಗಿದೆ. ಪಶುವೈದ್ಯಕೀಯ ಇಲಖೆಯ ವೈದ್ಯರು ಹಾಗೂ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡಲಿದ್ದಾರೆ. ಆನುಗೋಡು ಸೇರಿದಂತೆ ಇತರ ಗ್ರಾಮಗಳಲ್ಲಿ ಲಸಿಕೆಯ ಪ್ರಕ್ರಿಯೆ ಆರಂಭವಾಗಿದೆ. ನಿತ್ಯ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಲಸಿಕೆ ನೀಡಲಾಗುತ್ತದೆ.

ಜಿಂಕೆಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ

ಕಿರು ಮೃಗಾಲಯದಲ್ಲಿ 166 ಚುಕ್ಕೆ ಜಿಂಕೆ ಹಾಗೂ ಕೃಷ್ಣ ಮೃಗಗಳಿವೆ. ರೋಗ ಹರಡುವುದನ್ನು ತಡೆಯಲು ಎಲ್ಲ ಜಿಂಕೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಲಕ್ಷಣ ಇರುವ ಜಿಂಕೆಗಳ ಆರೋಗ್ಯದಲ್ಲಿ ಮಂಗಳವಾರ ಚೇತರಿಕೆ ಕಂಡುಬಂದಿದೆ ಎಂದು ಮೃಗಾಲಯದ ಮೂಲಗಳು ಮಾಹಿತಿ ನೀಡಿವೆ.

‘ಪಶುವೈದ್ಯಕೀಯ ತಜ್ಞರ ತಂಡವು ಜಿಂಕೆಗಳಿಗೆ ಚಿಕಿತ್ಸೆ ಮುಂದುವರಿಸಿದೆ. ಜಿಂಕೆಗಳು ಚಟುವಟಿಕೆಯಿಂದ ಇದ್ದು, ಆಹಾರ ಸೇವಿಸುತ್ತಿವೆ. ಜಿಂಕೆಗಳಿಗೆ ಎಷ್ಟು ದಿನಗಳವರೆಗೆ ಔಷಧ ನೀಡಬೇಕು ಎಂಬುದರ ಕುರಿತು ತಜ್ಞರು ನಿರ್ಧಾರ ಕೈಗೊಳ್ಳುತ್ತಾರೆ. ಮೃಗಾಲಯದಲ್ಲಿ ಯಾವುದೇ ಹೊಸ ಸಾವುನೋವು ಸಂಭವಿಸಿಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್‌. ಹರ್ಷವರ್ಧನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.