ADVERTISEMENT

ದಾವಣಗೆರೆ | ಐಸಿಸಿ ಸಭೆ ನಿರ್ಣಯ ರದ್ದುಗೊಳಿಸಲು ಆಗ್ರಹ

ರೈತ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 8:03 IST
Last Updated 11 ಜನವರಿ 2024, 8:03 IST
ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ನಿರ್ಣಯ ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಎದುರು ಪ್ರತಿಭಟನೆ ನಡೆಯಿತು –ಪ್ರಜಾವಾಣಿ ಚಿತ್ರ
ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ನಿರ್ಣಯ ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಎದುರು ಪ್ರತಿಭಟನೆ ನಡೆಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ನಿರ್ಣಯ ರೈತವಿರೋಧಿಯಾಗಿದ್ದು, ಇದನ್ನು ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಬೀರಲಿಂಗೇಶ್ವರ ಮೈದಾನದಲ್ಲಿ ಒಗ್ಗೂಡಿದ ರೈತರು ‘ಭದ್ರಾ ನೀರು ನಮ್ಮದು,’ ‘ಬೇಕೇ ಬೇಕು, ನೀರು ಬೇಕು’ ಮುಂತಾದ ಘೋಷಣೆಗಳನ್ನು ಕೂಗುತ್ತಾ ಪಿ.ಬಿ.ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಬಂದು ಉಪವಿಭಾಗಾಧಿಕಾರಿ ಎದುರಿನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ,‘ಐಸಿಸಿ ಸಭೆ ದಾವಣಗೆರೆ ಇಲ್ಲವೇ ಮಲೇಬೆನ್ನೂರಿನಲ್ಲಿ ಸಭೆ ನಡೆಸಬೇಕು. ಅದು ಆಗದಿದ್ದರೆ ಬೆಂಗಳೂರಿನಲ್ಲಿ ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ನಡೆಯಬಾರದು. ಸಚಿವ ಮಧು ಬಂಗಾರಪ್ಪ ಅಕ್ರಮ ಪಂಪ್‌ಸೆಟ್‌ದಾರರ ಪರವಾಗಿದ್ದಾರೆ. ಭದ್ರಾ ಅಚ್ಚುಕಟ್ಟು ರೈತರ ಕಷ್ಟ ಅವರಿಗೆ ಅರ್ಥವಾಗುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮತ ಸೆಳೆಯಲು ಆ ಭಾಗದ ರೈತರ ಪರವಾಗಿ ನಿಂತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘12 ದಿವಸ ನೀರು ಹರಿಸಿದರೆ ಕೊನೆಯ ಭಾಗದ ರೈತರಿಗೆ ನೀರು ತಲುಪುವುದಿಲ್ಲ. ರೈತರು ಸುಮ್ಮನಿದ್ದರೆ ಮುಂದಿನ ದಿನಗಳಲ್ಲಿ ಶೇ 80ರಷ್ಟು ಜನರಿಗೆ ಕುಡಿಯುವ ನೀರು ಸಿಗುವುದಿಲ್ಲ. ಕೊನೆಯ ಭಾಗದ ಶಾಸಕರನ್ನು ಐಸಿಸಿ ಸಭೆಯ ಅಧ್ಯಕ್ಷರನ್ನಾಗಿ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್  ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅವರು ರೈತರ ಪರವಾಗಿ ನಿಂತರೆ ರಾಜಕೀಯವನ್ನು ಮರೆತು ಅವರ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.

‘ಹೊಸ ವೇಳಾಪಟ್ಟಿಯಂತೆ ಬಲದಂಡೆಗೆ ಜನವರಿ 15ರಿಂದ 12 ದಿನ ನೀರು ಹರಿಸುವುದು ಮತ್ತು 20 ದಿನ ನಿಲ್ಲಿಸಿದರೆ ದಾವಣಗೆರೆ ಜಿಲ್ಲೆಯ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ಏಕೆಂದರೆ 12 ದಿನ ನೀರು ಹರಿಸಿದರೆ ದಾವಣಗೆರೆ-ಮಲೇಬೆನ್ನೂರು ಭಾಗದ ಜಮೀನುಗಳಿಗೆ ನೀರು ತಲುಪುವುದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್.ಲಿಂಗರಾಜ್ ಹೇಳಿದರು.

‘ಪ್ರತಿ ದಿನ ಎಡ ಮತ್ತು ಬಲದಂಡೆಗಳಿಗೆ ನೀರು ಬಿಡಲು 0.29 ಟಿ.ಎಂ.ಸಿ ಅಡಿ ನೀರು ಬೇಕಾಗುತ್ತದೆ. ಈಗ ಡ್ಯಾಂನಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ 13.83 ಟಿಎಂಸಿ ಅಡಿ ನೀರು ತೆಗೆದು ಬಳಕೆಗೆ ಬರುವ ನೀರು 21.54 ಟಿ.ಎಂ.ಸಿ ಅಡಿ ಸಿಗುತ್ತದೆ. ಕೈಗಾರಿಕೆ ಎಂದು ಹೇಳುವ ಅಧಿಕಾರಿಗಳು ಭದ್ರಾವತಿ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳೂ ಇಲ್ಲ. ಕೈಗಾರಿಕೆ ಹಾಗೂ ನದಿಗೆ ಹರಿಸುವ ನೀರು ಉಳಿಸಿದರೆ ನಮಗೆ 74 ದಿನ ನೀರು ಕೊಡಬಹುದು’ ಎಂದು ಹೇಳಿದರು.

‘ಹೊಸ ವೇಳಾಪಟ್ಟಿ ಪ್ರಕಾರ ಭದ್ರಾ ಎಡದಂಡೆಗಳಿಗೆ ಜ. 10ರಿಂದ 16ದಿನ ನೀರು ಹರಿಸಿ 15 ದಿನ ನಿಲ್ಲಿಸಿ ಒಟ್ಟು 70 ದಿನಗಳ ಕಾಲ ನೀರು ಹರಿಸುವುದು. ಬಲದಂಡೆ ನಾಲೆಗಳಿಗೆ ಅಂದ್ರೆ ಜನವರಿ 15ರಿಂದಲೇ 12 ದಿನ ನೀರು ಹರಿಸಿ, 20 ದಿನ ನಿಲ್ಲಿಸಿ ಒಟ್ಟು 53 ದಿನಗಳ ಕಾಲ ನೀರು ಹರಿಸುವುದು. ಇದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ರೀತಿಯಲ್ಲಿ ಆಗುತ್ತದೆ’ ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಆರೋಪಿಸಿದರು.

ರೈತಮುಖಂಡರಾದ ಬೆಳವನೂರು ನಾಗೇಶ್ವರರಾವ್, ಕೆ.ಬಿ. ಕೊಟ್ರೇಶ್, ಧನಂಜಯ ಕಡ್ಲೆಬಾಳ್, ಎಲ್. ಎನ್. ಕಲ್ಲೇಶ್, ಶ್ರೀನಿವಾಸ ದಾಸಕರಿಯಪ್ಪ, ಬಲ್ಲೂರು ಬಸವರಾಜ, ಶಾಗಲೆ ದೇವೇಂದ್ರಪ್ಪ, ಲೋಕಿಕೆರೆ ನಾಗರಾಜ್, ಬೇತೂರು ಸಂಗಪ್ಪ, ಆರನೇ ಕಲ್ಲು ವಿಜಯಕುಮಾರ, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಅವರಗೊಳ್ಳ ಷಣ್ಮುಖಯ್ಯ, ಕೃಷ್ಣಮೂರ್ತಿ ಪವಾರ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಪ್ರದೀಪ್
ಶಾಗಲೆ ಜಗದೀಶಗೌಡ್ರು, ಗೋಪನಾಳ್ ಮಲ್ಲಿಕಾರ್ಜುನಯ್ಯ, ಕಲ್ಪನಹಳ್ಳಿ ಸತೀಶ್, ಬಾತಿ ವೀರೇಶ್ ದೊಗ್ಗಳ್ಳಿ, ಅಣಬೇರು ಶಿವಪ್ರಕಾಶ್, ಮಳಲ್ಕೆರೆ ಕಲ್ಲಪ್ಪಗುಡ್ಡದ್ರ, ಸದಾನಂದ, ನಾಗರಸನಹಳ್ಳಿ ರುದ್ರೇಶ, ಕೈದಾಳೆ ಗುರುಪ್ರಸಾದ್, ಗೋಣಿವಾಡ ನಾಗರಾಜಪ್ಪ, ಹೊಸಹಳ್ಳಿ ಶಿವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.