ADVERTISEMENT

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 12:30 IST
Last Updated 13 ಜೂನ್ 2020, 12:30 IST

ದಾವಣಗೆರೆ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ರಾಷ್ಟ್ರೀಯ ಬಸವ ಸೇನೆ ರಾಜ್ಯ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

‘ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಈ ಹಿಂದೆಯೇ ಹಲವು ನಿಗಮಗಳನ್ನು ಸ್ಥಾಪಿಸಿ, ಆ ಸಮುದಾಯಗಳನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಬೇಡಿಕೆ ಹಲವು ವರ್ಷಗಳ ಬೇಡಿಯಾಗಿದ್ದು, ಇದೇ ಸಮಾಜದ ಅನೇಕರು ಶಾಸಕ, ಸಚಿವರಾಗಿದ್ದರೂ ಬಹುದಿನಗಳ ಬೇಡಿಕೆ ಈಡೇರದೇ ಇರುವುದು ಬೇಸರದ ಸಂಗತಿ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವೀರಶೈವ ಲಿಂಗಾಯತರಲ್ಲಿ ಅನೇಕರಿಗೆ ಇಂದಿಗೂ ವಸತಿ, ಭೂಮಿ ಇಲ್ಲ. ಲಕ್ಷಾಂತರ ಕುಟುಂಬಗಳು ಕೂಲಿ ಮಾಡಿ ಬದುಕುತ್ತಿವೆ. ರಾಜ್ಯದ ಬಹುದೊಡ್ಡ ಸಮುದಾಯವಾಗಿದ್ದರೂ ಆಳಿರುವ ಸರ್ಕಾರಗಳಿಂದ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ. ಆದ್ದರಿಂದ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬಸವಜಯಂತಿಯನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಬೇಕು. ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಟಿಂಕರ್ ಮಂಜಣ್ಣ, ನಿತೀಶ್, ಶ್ರೀಕಾಂತ್ ನೀಲಗುಂದ, ಅಭಿಷೇಕ್ ಟಿ. ಹಳೇಹೊಳೆ, ಮಂಜುಳಾ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.