ADVERTISEMENT

ನೆಹರು ಓಲೇಕರ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 15:14 IST
Last Updated 5 ಫೆಬ್ರುವರಿ 2020, 15:14 IST

ದಾವಣಗೆರೆ: ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಚ.ಓಲೇಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹಿಸಿದೆ.

‘ಬಿಜೆಪಿಯಲ್ಲಿ ಓಲೇಕರ್ ಸೇರಿ ಎಸ್. ಅಂಗಾರ, ಹರ್ಷವರ್ಧನ್, ಎಂ.ಪಿ. ಕುಮಾರಸ್ವಾಮಿ ಅವರು ಇದ್ದು, ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ನೀಡಬೇಕು. ಮುಖ್ಯವಾಗಿ ಮಧ್ಯ ಕರ್ನಾಟಕ ಭಾಗದವರಾದವರನ್ನು ಪರಿಗಣಿಸಬೇಕು’ ಎಂದು ಮಹಾಸಭಾದ ಅಧ್ಯಕ್ಷ ಎಸ್. ಶೇಖರಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಾದರೆ ಪರಿಶಿಷ್ಟ ಜಾತಿಯ ಶಾಸಕರ ಕೊಡುಗೆ ದೊಡ್ಡದು. ಕೆ.ಶಿವರಾಂ, ನಾರಾಯಣಸ್ವಾಮಿ ಹಾಗೂ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಸೇರಿ ಅನೇಕ ಶಾಸಕರು ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದಾರೆ. ಮೂರು ತಿಂಗಳ ಹಿಂದೆ ಯಡಿಯೂರಪ್ಪ ಅವರನ್ನು ಭೇಟಿಯಾದಾಗ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದು, ಆ ಮಾತನ್ನು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಬಿಜೆಪಿಯಲ್ಲಿ ಸೋತವರಿಗೆ ಹಾಗೂ ಒಂದು ಬಾರಿ ಶಾಸಕರಾದವರಿಗೂ ಸಚಿವ ಸ್ಥಾನ ನೀಡುತ್ತಿದ್ದು, ಎಸ್‌.ಅಂಗಾರ ಅವರು 7 ಬಾರಿ ಶಾಸಕರಾಗಿದ್ದಾರೆ. ಜಾತಿ ರಾಜಕಾರಣದಲ್ಲಿ ನಮಗೆ ತುಂಬಾ ಹಿನ್ನಡೆಯಾಗಿದೆ. ನಮ್ಮ ಕೋಟಾದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಮಹಾಸಭಾದ ಕಾರ್ಯಾಧ್ಯಕ್ಷ ಜಯಪ್ಪ ಗುಡಾಳ್, ಉಪಾಧ್ಯಕ್ಷ ರಾಮಯ್ಯ, ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ಉಮಾಶಂಕರ್, ತಾಲ್ಲೂಕು ಸಂಚಾಲಕ ಬಸವರಾಜ್, ಹಾಲೇಶ್, ಮಧು ಛಲವಾದಿ, ಫಕ್ಕೀರಪ್ಪ, ಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.