
ಬಸವಾಪಟ್ಟಣ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಕಾರ್ಯಕ್ರಮದ ಭಾಗವಾಗಿ ಸಮೀಪದ ಕೆಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 32 ವಿದ್ಯಾರ್ಥಿಗಳ ಹೆಸರಿನಲ್ಲಿ ದಾನಿಗಳ ನೆರವಿನಿಂದ ತಲಾ ₹ 1,000 ವನ್ನು ಕಣಿವೆಬಿಳಚಿಯ ಉಪ ಅಂಚೆ ಕಚೇರಿಯಲ್ಲಿ ಠೇವಣಿ ಇರಿಸಿದ ಪ್ರಮಾಣ ಪತ್ರವನ್ನು ಮಂಗಳವಾರ ವಿತರಿಸಲಾಯಿತು.
ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣದ ಜತೆಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದರೂ ಪಾಲಕರು ಸಾಕಷ್ಟು ಶುಲ್ಕ ನೀಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಲು ಸಾಲುಗಟ್ಟಿ ನಿಲ್ಲುತ್ತಿರುವುದು ವಿಷಾದದ ಸಂಗತಿ. ಹೀಗೆ ಸರ್ಕಾರಿ ಶಾಲೆಗಳನ್ನು ತಾತ್ಸಾರ ಮಾಡುತ್ತಾ ಹೋದಲ್ಲಿ, ಅವುಗಳು ಮುಚ್ಚಿ ಬಡ ವಿದ್ಯಾರ್ಥಿಗಳು ಖಾಸಗಿ ಶಾಲೆಗೆ ಅತಿ ಹೆಚ್ಚು ಶುಲ್ಕ ನೀಡಿ ಸೇರಲಾಗದೇ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ನಿರುದ್ಯೋಗ ಸಮಸ್ಯೆಯೂ ಉಂಟಾಗುವ ಸಾಧ್ಯತೆ ಇದೆ. ಕೆಂಗಾಪುರ ಶಾಲೆಯ ಶಿಕ್ಷಕರು ಮಕ್ಕಳನ್ನು ಸೆಳೆಯಲು ಮಾಡಿರುವ ವಿನೂತನ ಪ್ರಯೋಗ ಸ್ವಾಗತಾರ್ಹ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎನ್.ಗಣೇಶನಾಯ್ಕ ತಿಳಿಸಿದರು.
ನಮ್ಮ ಗ್ರಾಮದವರೇ ಆದ ಸಾಸ್ವೆಹಳ್ಳಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಚ್.ಗಣೇಶನಾಯ್ಕ ಅವರು ವಿನೂತನ ಕಾರ್ಯಕ್ರಮಕ್ಕೆ ₹ 32,000 ದೇಣಿಗೆ ನೀಡಿದ್ದು ಶಿಕ್ಷಣ ಇಲಾಖೆಯ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
‘ನೂತನ ಪ್ರಯೋಗದ ರೂವಾರಿ, ಶಿಕ್ಷಕ ಲಕ್ಷ್ಮೀನಾರಾಯಣ ಅವರು ಪ್ರಸಕ್ತ ವರ್ಷ ಒಂದನೇ ತರಗತಿಗೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾವಿರ ರೂಪಾಯಿಯನ್ನು ಠೇವಣಿ ಇಡುವ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ವಿವರಿಸಿದಾಗ ಪ್ರಾಂಶುಪಾಲ ಎಚ್. ಗಣೇಶನಾಯ್ಕ ಅವರು ಮೊದಲು ಸ್ಪಂದಿಸಿದರು. ಮುಂದಿನ ಶೈಕ್ಷಣಿಕ ವರ್ಷಗಳಲ್ಲೂ ಯೋಜನೆ ಮುಂದುವರಿಯುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದೆ ಬರಬೇಕು’ ಎಂದು ಮುಖ್ಯಶಿಕ್ಷಕ ಜಿ.ಬಿ.ಚಂದ್ರಾಚಾರಿ ಮನವಿ ಮಾಡಿದರು.
‘ಶಾಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ನಗದು ಠೇವಣಿ ಇಡುವ ಈ ಯೋಜನೆ ಜಿಲ್ಲೆಯಲ್ಲಿಯೇ ಪ್ರಥಮ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಪರಮೇಶ್ವರಪ್ಪ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ದಾನಮ್ಮ ಹಾಗೂ ಪಾಲಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.