ADVERTISEMENT

ಕೊರೊನಾ ಸೋಂಕಿತರ ಪತ್ತೆ ಈ ತಿಂಗಳಿಗೇ ಕೊನೆ?

ಸೋಂಕಿನ ಲಕ್ಷಣವಿದ್ದವರಿಗಷ್ಟೇ ಪರೀಕ್ಷೆ ನಡೆಸಲು ಚಿಂತನೆ

ಬಾಲಕೃಷ್ಣ ಪಿ.ಎಚ್‌
Published 26 ಜನವರಿ 2021, 5:09 IST
Last Updated 26 ಜನವರಿ 2021, 5:09 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ಕೊರೊನಾ ಸೋಂಕಿತರನ್ನು ಹುಡುಕಿ, ಅವರ ಸಂಪರ್ಕಿತರನ್ನು ಪತ್ತೆಹಚ್ಚಿ ಪರೀಕ್ಷೆ ನಡೆಸುತ್ತಿರುವುದು ಈ ತಿಂಗಳಿಗೇ ಕೊನೆಗೊಳ್ಳಲಿದೆ. ಇನ್ನು ಮುಂದೆ ಸೋಂಕಿನ ಲಕ್ಷಣಗಳಿದ್ದು, ಆಸ್ಪತ್ರೆಗೆ ಬರುವವರಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಲಾಗುವುದು ಎಂದು ಜಿಲ್ಲಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಆರೋಗ್ಯಾಧಿಕಾರಿಗಳೊಂದಿಗೆನಾಲ್ಕು ದಿನಗಳ ಹಿಂದೆ ನಡೆಸಿದ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

‘2,000 ಮಂದಿಯನ್ನು ಪರೀಕ್ಷೆ ಮಾಡಿ 20 ಮಂದಿಗೂ ಸೋಂಕು ಇಲ್ಲದಿರುವಾಗ ಅದಕ್ಕೆ ಅಷ್ಟೊಂದು ವೆಚ್ಚ ಮಾಡುವುದು ಏಕೆ? ಸೋಂಕು ಕಡಿಮೆ ಆಗಿರುವುದರಿಂದ ನೀವಾಗಿಯೇ ಹುಡುಕಿಕೊಂಡು ಹೋಗಿ ಪರೀಕ್ಷೆ ಮಾಡುವುದನ್ನು ನಿಲ್ಲಿಸಬೇಕು. ಯಾರಿಗೆ ಸೋಂಕಿನ ಲಕ್ಷಣಗಳಿವೆಯೋ ಅವರಿಗಷ್ಟೇ ಪರೀಕ್ಷೆ ನಡೆಸಿದರೆ ಸಾಕು’ ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಗಣರಾಜ್ಯೋತ್ಸವದ ಬಳಿಕ ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಅಧಿಕೃತವಾಗಿ ಆದೇಶ ಬರಲಿದೆ. ಈಗ ಕೊರೊನಾ ಸರ್ವೆ, ಪರೀಕ್ಷೆಗಾಗಿ ಹೆಚ್ಚುವರಿಯಾಗಿ ಬಳಸಿಕೊಳ್ಳುತ್ತಿದ್ದ ಸಿಬ್ಬಂದಿ, ವಾಹನಗಳನ್ನು ಆಯಾ ಇಲಾಖೆಗೆ ನೀಡಲು, ಖಾಸಗಿ ವಾಹನಗಳನ್ನು ಬಳಸಿಕೊಂಡಿದ್ದರೆ ಅದನ್ನು ವಾಪಸ್‌ ಮಾಡಲು ಮೌಖಿಕ ಸೂಚನೆಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಈ ಬಗ್ಗೆ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ಆದೇಶ ಬಂದಿಲ್ಲ. ಅಧಿಕೃತವಾಗಿ ಆದೇಶ ಬಂದ ಕೂಡಲೇ ತಿಳಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿದ್ದಾರೆ.

ಕಾಲೇಜು, ಕೋರ್ಟಿಗೂ ಕಡ್ಡಾಯವಿಲ್ಲ

ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಕಾಲೇಜಿನ ಬೋಧಕರು, ಬೋಧಕೇತರರಿಗೆ ಇನ್ನು ಮುಂದೆ ಕೊರೊನಾ ಪರೀಕ್ಷೆ ಕಡ್ಡಾಯವಲ್ಲ. ಸೋಂಕಿನ ಲಕ್ಷಣ ಇರುವವರು ಮಾತ್ರ ವೈದ್ಯರ ಸಲಹೆ ಮೇರೆಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕಾಲೇಜುಗಳಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಬೇಕು. ಅಲ್ಲಿ ಯಾರಿಗಾದರೂ ದೇಹದ ಉಷ್ಣತೆ ಅಗತ್ಯಕ್ಕಿಂತ ಅಧಿಕ ಇರುವುದು ಕಂಡುಬಂದರೆ ಅವರನ್ನು ವಾಪಸ್‌ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ಸಕ್ರಿಯ ಪ್ರಕರಣಗಳು 200ಕ್ಕಿಂತ ಅಧಿಕ ಇರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೂ ಕೊರೊನಾ ರಿಪೋರ್ಟ್‌ ಇನ್ನು ಮುಂದೆ ಕಡ್ಡಾಯವಲ್ಲ. ಸದ್ಯಕ್ಕೆ ಬೆಂಗಳೂರು ನಗರ ಸೇರಿ ಐದು ಜಿಲ್ಲೆಗಳಲ್ಲಿ ಅಷ್ಟೇ ಸಕ್ರಿಯ ಪ್ರಕರಣಗಳು 200 ದಾಟಿದೆ. ಉಳಿದ ಕಡೆಗಳಲ್ಲಿ ಕಕ್ಷಿದಾರರಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾತ್ರ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.