ದಾವಣಗೆರೆಯ ರೇಣುಕಾ ಮಂದಿರದಲ್ಲಿ ಆಯೋಜಿಸಿದ್ದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗವನ್ನು ಉದ್ದೇಶಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿದರು.
–ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆ: ವೀರಶೈವ ಪಂಚಪೀಠಗಳ ಪೀಠಾಧ್ಯಕ್ಷರು ಒಗ್ಗೂಡಿ ದರ್ಶನ ಭಾಗ್ಯ ಕರುಣಿಸಿರುವುದಕ್ಕೆ ಐದು ಮಠಗಳ ಭಕ್ತರು ಪುಳಕಗೊಂಡರು. ವರ್ಷಕ್ಕೆ ಒಮ್ಮೆಯಾದರೂ ರಾಜ್ಯದ ಒಂದೆಡೆ ಮಠಾಧೀಶರು ಹೀಗೆ ಸಮಾಗಮಗೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವತಿಯಿಂದ ಏರ್ಪಡಿಸಿರುವ ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೋಮವಾರ ಚಾಲನೆ ನೀಡಿದರು. ಎರಡು ದಿನಗಳ ಈ ಸಮ್ಮೇಳನಕ್ಕೆ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ.
ಪಂಚ ಪೀಠಾಧ್ಯಕ್ಷರು 2009ರಲ್ಲಿ ಪುಣೆ ಹಾಗೂ 1995ರಲ್ಲಿ ಹರಿಹರದಲ್ಲಿ ಹೀಗೆ ಒಂದೇ ವೇದಿಕೆಯಲ್ಲಿ ದರ್ಶನ ನೀಡಿದ್ದರು. ಅಪರೂಪದ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡು ದೊಡ್ಡ ಸಂಖ್ಯೆಯಲ್ಲಿ ಹರಿದು ಬಂದಿತ್ತು. ರೇಣುಕ ಮಂದಿರದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಮಂದಿರದ ಆವರಣದ ಹೊರಗೆ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಿ ವ್ಯವಸ್ಥೆ ಕಲ್ಪಿಸಲಾಗಿತ್ತು.
‘ಮಹಾರಾಷ್ಟ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ರಾಜ್ಯಗಳಿಂದ ಮಠಾಧೀಶರು ಶೃಂಗಕ್ಕೆ ಆಗಮಿಸಿದ್ದಾರೆ. ಪಂಚಪೀಠಾಧೀಶ್ವರರನ್ನು ಒಗ್ಗೂಡಿಸುವುದು ಶಾಮನೂರು ಶಿವಶಂಕರಪ್ಪ ಅವರ ಹಲವು ವರ್ಷಗಳ ಬಯಕೆಯಾಗಿತ್ತು. ಈಗ ಇದಕ್ಕೆ ಫಲ ಸಿಕ್ಕಿದೆ. ಪಂಚಪೀಠದ ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಕುತಂತ್ರ ನಡೆಸಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಹುನ್ನಾರಕ್ಕೆ ಕೈಹಾಕಿದೆ. ಅಕ್ಷರಶಃ ಧರ್ಮದ ರಕ್ಷಣೆಗಾಗಿ ಹೋರಾಟ ಮಾಡಬೇಕಾದ ಹಾಗೂ ಧರ್ಮದ ಅಸ್ತಿತ್ವ ಉಳಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಧಾರ್ಮಿಕ, ಸಾಮಾಜಿಕ ಏಕತೆಯೇ ಸಮುದಾಯದ ಶಕ್ತಿ. ಶಿವಶರಣರ ಮಾರ್ಗದರ್ಶನದಲ್ಲಿ ಎಲ್ಲರೂ ಒಗ್ಗೂಡಿ ಮುನ್ನಡೆಯೋಣ’ ಎಂದು ಹೇಳಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ, ‘ಜಾತಿ ಗಣತಿಯ ಸಂದರ್ಭದಲ್ಲಿ ಒಗ್ಗೂಡಿದರೆ ಸಮುದಾಯ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ. ಇದಕ್ಕೆ ಎಲ್ಲ ಪಕ್ಷದ ರಾಜಕೀಯ ಪಕ್ಷಗಳ ನಾಯಕರ ಸಹಕಾರ ಬೇಕು. ಆಗ ಸಮುದಾಯದ ಗತವೈಭವ ಮರಳಲಿದೆ. ಯುವಸಮೂಹ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ದುಶ್ಚಟಗಳ ದಾಸಾರಾಗುತ್ತಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರುವ ಶಕ್ತಿ ಮಠಾಧೀಶರಿಗೆ ಮಾತ್ರ ಇದೆ’ ಎಂದರು.
‘ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಜಾತಿ ಮತ್ತು ಜನಗಣತಿ ಮಾಡುತ್ತಿದೆ. ಈ ಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಯಾವ ಹೆಸರಿನಿಂದ ಗುರುತಿಸಿಕೊಳ್ಳಬೇಕು ಎಂಬ ಬಗ್ಗೆ ಮಹಾಸಭಾದಲ್ಲಿ ತೀರ್ಮಾನ ಆಗಬೇಕು. ಮೀಸಲಾತಿ ಸೌಲಭ್ಯಕ್ಕೆ ತೊಂದರೆ ಆಗದ ರೀತಿಯಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಇದಕ್ಕೆ ನಿವೃತ್ತ ನ್ಯಾಯಮೂರ್ತಿ, ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಸಲಹೆ ನೀಡಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ರಾಜಕೀಯದಲ್ಲಿ ಧರ್ಮ ಇರಬೇಕೆ ಹೊರತು ಧರ್ಮದಲ್ಲಿ ರಾಜಕಾರಣವಲ್ಲ. ಜಾತಿ ಜನಗಣತಿ ರಾಜಕೀಯ ಅಸ್ತ್ರ, ಪಗಡೆಯಾಟ ಆಗಬಾರದು. ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಸಮುದಾಯವನ್ನು ಬುಗುರಿಯಂತೆ ಆಡಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಉಜ್ಜಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ವಾಮದೇವ ಮಹಂತ ಶಿವಾಚಾರ್ಯ ಸ್ವಾಮೀಜಿ, ರೇಣುಕ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ, ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಎ.ಎಚ್. ಶಿವಯೋಗಿಸ್ವಾಮಿ, ಬಿ.ಎಂ.ವಾಗೀಶಸ್ವಾಮಿ ಹಾಜರಿದ್ದರು.
ದಾವಣಗೆರೆಯ ರೇಣುಕ ಮಂದಿರದಲ್ಲಿ ಆಯೋಜಿಸಿದ್ದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಪಾಲ್ಗೋಂಡಿದ್ದ ವಿವಿಧ ಮಠದ ಶಿವಾಚಾರ್ಯರು ಹಾಗೂ ಭಕ್ತರು
ದಾವಣಗೆರೆಯ ರೇಣುಕ ಮಂದಿರದಲ್ಲಿ ಆಯೋಜಿಸಿದ್ದ ಶೃಂಗದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರಸ್ತುತಪಡಿಸಿದರು
ಜಾತಿ ಗಣತಿ ಸಂದರ್ಭದಲ್ಲಿ ಸಮುದಾಯ ಒಗ್ಗೂಡದೇ ಹೋದರೆ ಶತಮಾನಗಳ ಕಾಲ ಸಾಧಿಸಿದ ಏಳಿಗೆ ಮುಂದಿನ ಪೀಳಿಗೆಗೆ ದಾಟದೇ ಹೋದೀತುಡಾ.ಪ್ರಭಾ ಮಲ್ಲಿಕಾರ್ಜುನ್ ಸಂಸದೆ
ಇದೊಂದು ಐತಿಹಾಸಿಕ ದಿನ. ಕೋಟ್ಯಂತರ ಭಕ್ತರ ಬಯಕೆ ಈಡೇರಿದ ಕ್ಷಣ. ಧರ್ಮದ ಕಳಶಪ್ರಾಯರಾದ ಪಂಚಪೀಠಾಧೀಶ್ವರು ಒಂದಾಗಿ ದರ್ಶನ ನೀಡಿದ ಸುದಿನಶಂಕರ ಬಿದರಿ ರಾಜ್ಯ ಘಟಕದ ಅಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
ಮಹಾಸಭಾದ ಆಶಯ ಆಗ್ರಹ:
* ಗುರು ವಿರಕ್ತ ಹಾಗೂ ಶರಣ ಪರಂಪರೆ ಒಂದೇ ವೇದಿಕೆಗೆ ತುರುವುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಂಕಲ್ಪ. ಸಂಕುಚಿತ ಮನೋಭಾವದಿಂದ ಹೊರಬಂದು ಸಮುದಾಯದ ಹಿತದೃಷ್ಟಿಯಿಂದ ಮೂರು ಪರಂಪರೆಯ ಮಠಗಳು ಒಗ್ಗೂಡಬೇಕು.
* ಪಂಚಪೀಠಾಚಾರ್ಯರು ವರ್ಷದಲ್ಲಿ ಒಮ್ಮೆಯಾದರೂ ಒಗ್ಗೂಡಿ ಭಕ್ತರಿಗೆ ದರ್ಶನ ನೀಡಬೇಕು. ಪಂಚಪೀಠಾಧೀಶ್ವರರ ತೀರ್ಮಾನಕ್ಕೆ ಸಮುದಾಯ ಬದ್ಧವಾಗಿರಬೇಕು.
* 1975ರ ಬಳಿಕ ಸಮುದಾಯದಲ್ಲಿ ಗೊಂದಲ ಒಡಕು ಬಲಹೀನತೆ ಶುರುವಾಗಿದೆ. 50 ವರ್ಷಗಳ ಈ ಹಾನಿಯನ್ನು ತುಂಬಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು.
* ರಾಜ್ಯದಲ್ಲಿ ಲಿಂಗಾಯತ ಸಮಾಜದ ಉಪಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.
* ಪ್ರತಿ ಕುಟುಂಬ ತಮ್ಮ ಆದಾಯದ ಒಂದು ಪಾಲನ್ನು ಧಾರ್ಮಿಕ ಮತ್ತು ಸಾಮಾಜಿಕ ಉದ್ದೇಶಕ್ಕೆ ದೇಣಿಗೆ ನೀಡಬೇಕು.
* ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ನೀಡುವ ವಿಶೇಷ ರಿಯಾಯಿತಿ ಬೇಧ ಸೃಷ್ಟಿಸಿದೆ. ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಏಕರೂಪದ ರಿಯಾಯಿತಿ ನೀಡಬೇಕು.
‘ಪಂಚಪೀಠಕ್ಕೆ ಪ್ರಾತಿನಿಧ್ಯ ಕಡಿಮೆ’:
ರಾಜ್ಯದ ಬೇರೆ ಮಠಗಳಿಗೆ ಸಿಗುವ ರಾಜಕೀಯ ಪ್ರಾತಿನಿಧ್ಯ ಪಂಚಪೀಠಗಳಿಗೆ ಸಿಗುತ್ತಿಲ್ಲ. ಪಂಚಪೀಠ ಟೀಕಿಸುವ ಮಠಗಳಿಗೆ ಹೆಚ್ಚು ಒತ್ತು ಸಿಗುತ್ತಿದೆ. ರಾಜಕಾರಣಿಗಳು ಮೂಲ ಮಠಗಳ ಕುರಿತು ನಿರ್ಲಕ್ಷ್ಯ ತೋರಬಾರದು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು. ‘ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಪರಿಪೂರ್ಣ ಅವಧಿಗೆ ಅಧಿಕಾರ ಅನುಭವಿಸಲು ಪಕ್ಷದ ವರಿಷ್ಠರು ಅವಕಾಶ ನೀಡಲಿಲ್ಲ. ಅವರನ್ನು ನೆಮ್ಮದಿಯಿಂದ ಇರಲು ಬಿಡದೇ ಸಾಕಷ್ಟು ಕಿರುಕುಳ ನೀಡಿದರು. ಇದರಿಂದ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಹಿನ್ನಡೆ ಆಗಿದೆ’ ಎಂದರು.
ಕೂಡಲ ಸಂಗಮಕ್ಕೆ ಆಹ್ವಾನ:
‘ಪಂಚಪೀಠಾಧೀಶ್ವರರು ಕೂಡಲ ಸಂಗಮಕ್ಕೆ ಬಂದು ಆ ಭೂಮಿಯನ್ನು ಪಾವನ ಮಾಡಬೇಕು. ಅಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡಲಿದ್ದೇವೆ’ ಎಂದು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆಹ್ವಾನ ನೀಡಿದರು. ‘ಮನುಷ್ಯರಾಗಿ ಜನಿಸಿದವರನ್ನು ಮಾನವರನ್ನಾಗಿ ರೂಪಿಸಿದವರು ಪಂಚಾಚಾರ್ಯರು. ಪಟ್ಟಭದ್ರ ಹಿತಾಸಕ್ತಿಗಳು ಸಮುದಾಯವನ್ನು ಒಡೆದಾಳುವ ಹುನ್ನಾರ ನಡೆಸಿವೆ. ಇದಕ್ಕೆ ಅವಕಾಶ ನೀಡಬಾರದು. ಜಾತಿಗಣತಿ ಮೀಸಲಾತಿ ಕುರಿತು ಸೃಷ್ಟಿಯಾದ ಗೊಂದಲಕ್ಕೆ ತೆರೆ ಎಳೆಯಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.