ದಾವಣಗೆರೆ: ಭದ್ರಾ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ ಮುಂದಿನ ಹಂತದ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಕುಡಿಯುವ ನೀರು ನೀಡುವ ಯೋಜನೆಯು ಜಿಲ್ಲೆಯ ರೈತರಿಗೆ ಮರಣ ಶಾಸನವಾಗಿದೆ. ಇದನ್ನು ವಿರೋಧಿಸಿ ಜಿಲ್ಲಾ ರೈತರ ಒಕ್ಕೂಟ ಹಾಗೂ ಬಿಜೆಪಿ ನಡೆಸಿದ ವಿವಿಧ ಹಂತದ ಹೋರಾಟದ ಫಲವಾಗಿ ಇದೀಗ ಬಲದಂಡೆ ನಾಲೆಗೆ ನೀರು ಬಿಟ್ಟಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭದ್ರಾ ಬಲದಂಡೆ ನಾಲೆಯನ್ನು ಸೀಳಿದ್ದ ಸ್ಥಳದಲ್ಲಿ ತಡೆಗೋಡೆ ಕಟ್ಟಿದ್ದಾರೆ. ಅಲ್ಲಿ ಗೇಟ್ ಅಳವಡಿಸಿದ್ದು, ಅಲ್ಲಿಂದ ನೆರೆಯ ಜಿಲ್ಲೆಗಳಿಗೆ ನೀರು ಹರಿಸುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲೆಯ ರೈತರು ಎಚ್ಚೆತ್ತುಕೊಳ್ಳಬೇಕು ಎಂದರು.
‘ಈ ನಡುವೆ ಭದ್ರಾ ಜಲಾಶಯದಿಂದ ಹಿರಿಯೂರು ಭಾಗದ 66 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಇದೇ ರೀತಿ ಆದರೆ ಜಲಾಶಯ ಖಾಲಿಯಾಗುತ್ತದೆ. ನಮ್ಮ ಭಾಗದ ರೈತರಿಗೆ ಅನ್ಯಾಯವಾಗುತ್ತದೆ’ ಎಂದರು.
‘ಭದ್ರಾ ನಾಲೆ ಸೀಳಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೂ ಭೇಟಿ ನೀಡಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿಲ್ಲ. ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ’ ಎಂದು ಮುಖಂಡ ಲೋಕಿಕೆರೆ ನಾಗರಾಜ ಟೀಕಿಸಿದರು.
‘ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದುವರೆಗೂ ಜಿಲ್ಲಾಡಳಿತ ಸಭೆ ನಡೆಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಮುಖಂಡ ಬಿ.ಎಂ. ಸತೀಶ್ ಒತ್ತಾಯಿಸಿದರು.
ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಚಂದ್ರಶೇಖರ ಪೂಜಾರ್, ಬಿ.ಜಿ. ಅಜಯ ಕುಮಾರ್, ಧನಂಜಯ ಕಡ್ಲೆಬಾಳ್, ರಾಜು ತೋಟಪ್ಪನವರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.