ADVERTISEMENT

ಶೀಘ್ರವೇ ಕಾಮಗಾರಿ ಆರಂಭ: ದಿನೇಶ್ ಭರವಸೆ

ವಿವಿಧ ಕಾಮಗಾರಿಗಳಿಗೆ ಧೂಡಾದಿಂದ ₹ 6.10 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 5:25 IST
Last Updated 23 ಜುಲೈ 2025, 5:25 IST
ಹರಿಹರ ನಗರಸಭೆಯ ಆವರಣದಲ್ಲಿರುವ ಧೂಡಾ ಶಾಖಾ ಕಚೇರಿಗೆ ಧೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಈಚೆಗೆ ಭೇಟಿ ನೀಡಿದ್ದರು
ಹರಿಹರ ನಗರಸಭೆಯ ಆವರಣದಲ್ಲಿರುವ ಧೂಡಾ ಶಾಖಾ ಕಚೇರಿಗೆ ಧೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಈಚೆಗೆ ಭೇಟಿ ನೀಡಿದ್ದರು   

ಹರಿಹರ: ‘ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 6.10 ಕೋಟಿ ಅನುದಾನ ಮಂಜೂರು ಮಾಡಲಾಗಿದೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ದಿನೇಶ್ ಶೆಟ್ಟಿ ಹೇಳಿದರು.

ನಗರಸಭೆಯ ಆವರಣದಲ್ಲಿರುವ ಧೂಡಾ ಶಾಖಾ ಕಚೇರಿಗೆ ಧೂಡಾ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಈಚೆಗೆ ಭೇಟಿ ನೀಡಿ ಅವರು ಮಾತನಾಡಿದರು.

‘1982ರಲ್ಲಿ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು. ಇಲ್ಲಿಯವರೆಗೂ ಈ ಪ್ರಾಧಿಕಾರದಿಂದ ಇಷ್ಟೊಂದು ಅನುದಾನವನ್ನು ಹರಿಹರ ನಗರಕ್ಕೆ ಯಾರು ನೀಡಿರಲಿಲ್ಲ. ಆದರೆ, ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಒತ್ತಾಸೆಯಂತೆ ಇಷ್ಟೊಂದು ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಈ ಅನುದಾನದಲ್ಲಿ ₹ 3.50 ಕೋಟಿಯಲ್ಲಿ ಗುತ್ತೂರಿನಿಂದ ಅಮರಾವತಿ ಹಳೆಯ ಪಿಬಿ ರಸ್ತೆಯವರೆಗೆ 60 ಅಡಿ ಸಿಸಿ ರಸ್ತೆ ನಿರ್ಮಾಣ, ಅಂಜುಮನ್ ಇಸ್ಲಾಮಿಯಾ ಖಬರಸ್ಥಾನ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ₹ 20 ಲಕ್ಷ ಹಾಗೂ ಅಂಬೇಡ್ಕರ್, ಇಂದ್ರಾನಗರ, ವಿದ್ಯಾನಗರದ ಉದ್ಯಾನಗಳ ಅಭಿವೃದ್ಧಿಗೆ ₹ 64 ಲಕ್ಷ ನೀಡಲಾಗಿದೆ’ ಎಂದರು.

‘ಜೀಜಾಮಾತಾ ಕಾಲೊನಿಯ ಉದ್ಯಾನಕ್ಕೆ ₹ 21 ಲಕ್ಷ, ಲೇಬರ್ ಕಾಲೊನಿ ಉದ್ಯಾನಕ್ಕೆ ಅಭಿವೃದ್ಧಿಗೆ ₹ 25 ಲಕ್ಷ ಸೇರಿದಂತೆ ವಿವಿಧ ಕಾಮುಗಾರಿಗಳಿಗೆ ಅನುದಾನವನ್ನು ಮಂಜೂರು ಮಾಡಲಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿವೆ’ ಎಂದು ಹೇಳಿದರು.

‘ನಗರಸಭಾ ಸದಸ್ಯರು ಇನ್ನೂ ಹಲವಾರು ಬೇಡಿಕೆಗಳನ್ನು ಇಟ್ಟಿದ್ದು ಬರುವ ದಿನಗಳಲ್ಲಿ ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಲಾಗುವುದು’ ಎಂದರು.

ಈ ವೇಳೆ ಧೂಡಾ ಆಯುಕ್ತ ತಿಮ್ಮಣ್ಣ ಹುಲ್ಮನಿ, ಸದಸ್ಯ ಹಳ್ಳಳ್ಳಿ ಜಬ್ಬಾರ್‌ಸಾಬ್, ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಣ್ಣಪ್ಪ, ಸಹಾಯಕ ಎಂಜಿನಿಯರ್‌ರಾದ ಪರಮೇಶ್ವರ ನಾಯಕ್, ಸುಜೇಶ್ ಕುಮಾರ, ಯೋಜನಾಧಿಕಾರಿ ಪ್ರದೀಪ್, ಅಕ್ಷತಾ ಕೆ.ಟಿ, ಶ್ವೇತಾ, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಪಿ.ಎನ್.ವಿರೂಪಾಕ್ಷ, ಎಂ.ಆರ್.ಮುಜಾಮಿಲ್ (ಬಿಲ್ಲು), ಆಟೋ ಹನುಮಂತಪ್ಪ, ಕೆ.ಜಿ.ಸಿದ್ದೇಶ್, ನಾಮನಿರ್ದೇಶಿತ ಸದಸ್ಯ ಕೆ.ಬಿ.ರಾಜಶೇಖರ, ರಘು, ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ಧಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಮುಖಂಡರಾದ ಮೊಹಮ್ಮದ್ ಫೈರೋಜ್, ಭಾನುವಳ್ಳಿ ದಾದಾಪೀರ್  ಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.