ADVERTISEMENT

ಒಆರ್‌ಎಸ್, ಝಿಂಕ್ ಮಾತ್ರೆಗಳಿಂದ ಅತಿಸಾರ ಭೇದಿ ನಿಯಂತ್ರಣ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:01 IST
Last Updated 3 ಜೂನ್ 2019, 14:01 IST
ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌. ಬಸವರಾಜೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅವರು ಇದ್ದರು
ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌. ಬಸವರಾಜೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅವರು ಇದ್ದರು   

ದಾವಣಗೆರೆ: ಮಕ್ಕಳ ಆರೋಗ್ಯವೇ ನಮ್ಮ ಆಸ್ತಿಯಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಿ ಅತಿಸಾರ ಭೇದಿಗೆ ತುತ್ತಾಗದಂತೆ ಪೋಷಕರು ಹೆಚ್ಚಿನ ಜಾಗೃತೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಐಎಪಿ ಹಾಗೂ ಐಎಂಎ ಸಹಯೋಗದೊಂದಿಗೆ ಚಿಗಟೇರಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸೋಮವಾರ ನಡೆದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಮಕ್ಕಳಿಗೆ ಒಆರ್‍ಎಸ್ ದ್ರಾವಣ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಅತಿಸಾರ ಭೇದಿಗೆ ಪರಿಣಾಮಕಾರಿ ಚಿಕಿತ್ಸೆಯಾದ ಒಆರ್‍ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ಮನೆ-ಮನೆಗೆ ತಲುಪಿಸುವ ಜವಾಬ್ದಾರಿಯುತ ಕೆಲಸ ಆಶಾ ಕಾರ್ಯಕರ್ತೆಯರದ್ದು‌. ಅತಿಸಾರ ಭೇದಿಯಿಂದ ಮಗು ನಿತ್ರಾಣಗೊಂಡು ಸಮರ್ಪಕ ಚಿಕಿತ್ಸೆ ದೊರೆಯದಿದ್ದರೆ ಸಾವಿನ ಹಂತದವರೆಗೆ ತಲುಪುವ ಸಂಭವ ಇರುವುದರಿಂದ ಪೋಷಕರು ಮಕ್ಕಳು ಬಳಸುವ ವಸ್ತುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕಾಯಿಲೆ ಬಂದ ಮೇಲೆ ಉಪಚರಿಸುವ ಬದಲು, ಕಾಯಿಲೆ ಬಾರದಂತೆ ತಡೆಗಟ್ಟಲು ಮೊದಲ ಆದ್ಯತೆ ನೀಡಬೇಕು. ಮಕ್ಕಳು ಸಿಕ್ಕ ಸಿಕ್ಕಿದ್ದನ್ನು ಬಾಯಿಗೆ ಇಟ್ಟುಕೊಳ್ಳುತ್ತವೆ. ಮಕ್ಕಳು ಬಳಸುವ ವಸ್ತುಗಳನ್ನು ಕುದಿಯುವ ನೀರಿನಲ್ಲಿ ತೊಳೆದಿಡಬೇಕು. ಪೋಷಕರು ಶೌಚದ ನಂತರ ಸಾಬೂನಿನಿಂದ ಕೈ ತೊಳೆಯಬೇಕು. ಮಕ್ಕಳಿಗೂ ಇದನ್ನು ರೂಢಿಸಬೇಕು’ ಎಂದು ಸಲಹೆ ನೀಡಿದರು.

ಮಗು ಅತಿಸಾರ ಭೇದಿಗೆ ತುತ್ತಾದರೆ ಸರ್ಕಾರದಿಂದ ಸರಬರಾಜಾಗುವ ಒಆರ್‍ಎಸ್ ಮತ್ತು ಝಿಂಕ್ ಎಲ್ಲೆಡೆ ಲಭ್ಯವಿದ್ದು, ಅದನ್ನು ವೈದ್ಯರು ಹೇಳಿದಂತೆ ಮಗುವಿಗೆ ನೀಡಬೇಕು. ಆಶಾ ಕಾರ್ಯಕರ್ತೆಯರು ಅತ್ಯಂತ ಜವಾಬ್ದಾರಿಯಿಂದ ಇದನ್ನು ಮನೆ ಮನೆಗೆ ತಲುಪಿಸುತ್ತಿದ್ದು, ಇದರ ಉಪಯೋಗ ಪಡೆಯಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ ‘ಅತಿಸಾರ ಭೇದಿ ಮಕ್ಕಳಲ್ಲಿ ನಿರ್ಜಲೀಕರಣ ಉಂಟು ಮಾಡಿ ಸಾವಿನಂತಹ ಪರಿಸ್ಥಿತಿಗೂ ತೆಗೆದುಕೊಂಡು ಹೋಗಬಹುದಾದ್ದರಿಂದ ಪೋಷಕರು ಜಾಗರೂಕತೆಯಿಂದ ಮಕ್ಕಳ ಸ್ವಚ್ಛತೆ-ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದದರು.

ಆರ್‍ಸಿಎಚ್‍ಓ ಡಾ.ಈ.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶದಲ್ಲಿ 5 ವರ್ಷದೊಳಗಿನ ಮಕ್ಕಳ ಮರಣ ಕಾರಣಗಳಲ್ಲಿ ಅತಿಸಾರ ಭೇದಿಯ ಪಾತ್ರ ಶೇ 10ರಷ್ಟಿದೆ. ಪ್ರತಿ ವರ್ಷ ಒಂದು ಲಕ್ಷ ಐದು ವರ್ಷದೊಳಗಿನ ಮಕ್ಕಳು ಇದರಿಂದ ಅಸುನೀಗುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಬಳಕೆ, ಶುಭ್ರವಾಗಿ ಕೈತೊಳೆಯುವುದು, ಲಸಿಕೆ ನೀಡುವುದು, ಎದೆ ಹಾಲು ಹಾಗೂ ಸೂಕ್ತ ಆಹಾರ ಬಳಕೆಯಿಂದ ಅತಿಸಾರ ಭೇದಿಯನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ, ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಅಧೀಕ್ಷಕಿ ಡಾ. ನೀಲಾಂಬಿಕೆ, ಡಾ. ರೇಣುಕಾರಾಧ್ಯ, ಚಿಗಟೇರಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ವಿಶ್ವನಾಥ್, ಆಯುಷ್ ಅಧಿಕಾರಿ ಡಾ. ಸಿದ್ದೇಶ್, ಡಾ. ಲೋಹಿತಾಶ್ವ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.