ADVERTISEMENT

ಹರಿಹರ: ಶಿವಮೊಗ್ಗ ಹೆದ್ದಾರಿಯಲ್ಲಿ ಪ್ರಯಾಸದ ಪ್ರಯಾಣ

ಗುಂಡಿಮಯ ಹೆದ್ದಾರಿಯಿಂದ ಪ್ರಯಾಣಿಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 14:12 IST
Last Updated 28 ಆಗಸ್ಟ್ 2024, 14:12 IST
ಮಳೆಯಿಂದಾಗಿ ಹರಿಹರದ ಶಿವಮೊಗ್ಗ ಹೆದ್ದಾರಿಯ ಅರ್ಧ ಭಾಗ ಕೊಚ್ಚಿಹೋಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿರುವುದು
ಮಳೆಯಿಂದಾಗಿ ಹರಿಹರದ ಶಿವಮೊಗ್ಗ ಹೆದ್ದಾರಿಯ ಅರ್ಧ ಭಾಗ ಕೊಚ್ಚಿಹೋಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿರುವುದು   

ಹರಿಹರ: ನಗರದ ಮೂಲಕ ಹಾದು ಹೋಗಿರುವ ಶಿವಮೊಗ್ಗ-ಮರಿಯಮ್ಮನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಮಳೆಯಿಂದಾಗಿ ಹೆಜ್ಜೆಗೊಂದು ಗುಂಡಿ ಸೃಷ್ಟಿಯಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ.

ನಗರದ ಶಿವಮೊಗ್ಗ ಸರ್ಕಲ್‌ನಿಂದ ಮಲೇಬೆನ್ನೂರು ಕಡೆಗೆ ಸಾಗುವಾಗ ಹೊರವಲಯದ ಬೈಪಾಸ್ ಸರ್ಕಲ್‌ವರೆಗಿನ ಹೆದ್ದಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಂಡಿಗಳಿವೆ. ಕೆಲೆವೆಡೆ ಅರ್ಧ ಭಾಗದಷ್ಟು ಡಾಂಬರು ಕಿತ್ತು ಹೋಗಿದೆ.

ರಾಜ್ಯ ಹೆದ್ದಾರಿಯಾಗಿದ್ದರೂ ಇಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವಷ್ಟು ವಾಹನ ಸಂಚಾರದ ದಟ್ಟಣೆ ಇದೆ. ಜೊತೆಗೆ ನಗರದ ಲಘು ಹಾಗೂ ದ್ವಿಚಕ್ರ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಹೆದ್ದಾರಿ ಕಾಮಗಾರಿಯ ಗುಣಮಟ್ಟ ಅನಾವರಣಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

ADVERTISEMENT

ಪ್ರಾಣಕ್ಕೆ ಎರವು: ವಾಹನ ದಟ್ಟಣೆ ಹೆಚ್ಚಾಗಿರುವ ಈ ಹೆದ್ದಾರಿಯಲ್ಲಿ ಗುಂಡಿಗಳನ್ನು ತಪ್ಪಿಸಲು ಹೋಗಿ ಎಡ ಭಾಗದಲ್ಲಿ ಸಂಚರಿಸಬೇಕಾದ ವಾಹನಗಳು ಬಲಭಾಗಕ್ಕೆ ತಿರುಗುತ್ತವೆ. ಆಗ ಹಿಂಬದಿ ಇರುವ ಅಥವಾ ಎದುರುಗಡೆಯಿಂದ ಬರುತ್ತಿರುವ ವಾಹನಗಳೊಂದಿಗೆ ಅಪಘಾತ ಸಂಭವಿಸುತ್ತದೆ. ಹಗಲಿನಲ್ಲೇ ದುಸ್ತರವಾಗಿರುವ ಸಂಚಾರ ರಾತ್ರಿ ಸಮಯದಲ್ಲಿ ಮತ್ತಷ್ಟು ಸಂಕಷ್ಟದಾಯಕವಾಗುತ್ತದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಿದೆ ಎನ್ನುತ್ತಾರೆ ಪ್ರಯಾಣಿಕರು.

ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಒಂದು ದಶಕದಿಂದ ಸರ್ಕಾರದ ಮುಂದಿದ್ದು, ಯಾವುದೇ ಪ್ರಗತಿ ಕಂಡುಬಂದಿಲ್ಲ. ಇರುವ ಹೆದ್ದಾರಿಯನ್ನು ಸುಸಜ್ಜಿತವಾಗಿಟ್ಟುಕೊಳ್ಳಲೂ ಲೋಕೋಪಯೋಗಿ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. 

ರಸ್ತೆ ಅವ್ಯವಸ್ಥೆಯಿಂದ ಅಪಘಾತ ನಡೆದು ಅಮಾಯಕರ ಪ್ರಾಣಕ್ಕೆ ತೊಂದರೆಯಾದರೆ ಸಂಬಂಧಿತ ರಸ್ತೆ ನಿರ್ವಹಣೆ ಮಾಡುವ ಇಲಾಖಾಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಬೆಂಗಳೂರು ಹೈಕೋರ್ಟ್ ಈಗಾಗಲೆ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದೆ. ಶಿವಮೊಗ್ಗ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದವರು ಹೈಕೋರ್ಟ್‌ನ ಈ ಆದೇಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಕೀಲ ಬಿ.ಎಂ.ಸಿದ್ದಲಿಂಗಸ್ವಾಮಿ ಹೇಳಿದರು.

ಹರಿಹರದ ಶಿವಮೊಗ್ಗ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಗುಂಡಿಗಳ ಮಧ್ಯೆ ಸರ್ಕಸ್ ಮಾಡುತ್ತಾ ಸಾಗುವ ವಾಹನಗಳು
ಈ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳಿಗೆ ಒಮ್ಮೆ ವೆಟ್‌ಮಿಕ್ಸ್ ಹಾಕಿ ಮುಚ್ಚಲಾಗಿತ್ತು. ಮಳೆಯಿಂದಾಗಿ ಮತ್ತೆ ಗುಂಡಿಗಳು ಸೃಷ್ಟಿಯಾಗಿವೆ. ಮಳೆ ಕಡಿಮೆಯಾದರೆ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿಸುತ್ತೇವೆ
ಸತೀಶ್‌ನಾಯ್ಕ, ಲೋಕೋಪಯೋಗಿ ಇಲಾಖೆ ಎಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.