ADVERTISEMENT

ಪರಿಷತ್‌ಗೆ ಪತ್ರಕರ್ತರ ನಾಮ ನಿರ್ದೇಶನ: ಸಿಎಂಗೆ ಒತ್ತಾಯ

ಪತ್ರಕರ್ತರ ಸಮ್ಮೇಳನದಲ್ಲಿ ಸಭಾಪತಿ ಹೊರಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 19:00 IST
Last Updated 4 ಫೆಬ್ರುವರಿ 2024, 19:00 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ದಾವಣಗೆರೆ: ‘ಚಿಂತಕರ ಚಾವಡಿ' ಎನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ಅನುಭವಿ ಪತ್ರಕರ್ತರ ಸೇವೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತರೊಬ್ಬರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಲಾಗುವುದು’ ಎಂದು ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಗರದಲ್ಲಿ ಆಯೋಜಿಸಿದ್ದ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿಧಾನ ಪರಿಷತ್‌ನಲ್ಲಿ ಪತ್ರಕರ್ತರಿಗೆ ಸ್ಥಾನ ನೀಡಲಾಗಿಲ್ಲ. ಪರಿಷತ್‌ನಲ್ಲಿ ಎಲ್ಲ ಕ್ಷೇತ್ರದವರ ಉಪಸ್ಥಿತಿ ಅಗತ್ಯ ಎಂಬ ಉದ್ದೇಶದಿಂದಲೇ ಸಾಹಿತ್ಯ, ಸಂಗೀತ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಅನುಭವ ಇರುವವರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಈ ಹಿಂದೆ ಕೆಲ ಪತ್ರಕರ್ತರನ್ನು ನಾಮನಿರ್ದಶನ ಮಾಡಲಾಗಿತ್ತು’ ಎಂದು ಸ್ಮರಿಸಿದರು.

‘ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋತವರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರೇ ವಿಧಾನ ಪರಿಷತ್‌ ಪ್ರವೇಶಿಸುತ್ತಿದ್ದಾರೆ. ಅಂಥವರು ಬಂದರೆ ಸ್ಥಳೀಯ ಸಂಸ್ಥೆಗಳಿಗೂ ಪರಿಷತ್‌ಗೂ ವ್ಯತ್ಯಾಸ ಇರುವುದಿಲ್ಲ. ಮಾರ್ಗದರ್ಶನ ಮಾಡುವ ನಾವೇ ಮಾರ್ಗ ಬಿಟ್ಟರೆ ಏನಾಗುತ್ತದೆ’ ಎಂದು ಪ್ರಶ್ನಿಸಿದ ಅವರು, ‘ಸದನದಲ್ಲಿ ಅಂತಹ ಸಂದರ್ಭ ಬಂದರೆ ಪತ್ರಿಕಾ ರಂಗದವರ ಹೆಸರನ್ನೇ ಪ್ರಸ್ತಾಪಿಸುತ್ತೇನೆ’ ಎಂದರು.

ADVERTISEMENT

ತುಮಕೂರಿನಲ್ಲಿ ಮುಂದಿನ ಸಮ್ಮೇಳನ:

ಮುಂದಿನ ಬಾರಿ ತುಮಕೂರಿನಲ್ಲಿ ರಾಜ್ಯ ಮಟ್ಟದ 39ನೇ ಪತ್ರಕರ್ತರ ಸಮ್ಮೇಳನ ನಡೆಸಲು ಬೆಳಿಗ್ಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು. ಸಮ್ಮೇಳನ ನಡೆಸಲು ₹ 50 ಲಕ್ಷ ನೀಡಬೇಕು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.

ಸಮ್ಮೇಳನದ ನಿರ್ಣಯಗಳು

* ಎಲ್ಲಾ ಕಾರ್ಯನಿರತ ಪತ್ರಕರ್ತರಿಗೂ ಉಚಿತ ಬಸ್‌ ಪ್ರಯಾಣಕ್ಕೆ ಪಾಸ್ ನೀಡಬೇಕು

* ಅರೋಗ್ಯ ಕ್ಷೇಮಾಭಿವೃದ್ಧಿ ಯೋಜನೆ ಪ್ರಾರಂಭಿಸಬೇಕು

* ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರತ ಪತ್ರಕರ್ತರ ಘಟಕ ಸ್ಥಾಪಿಸಬೇಕು

* ವಸತಿಗಾಗಿ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು

* ಪಿಯುಸಿ ಪದವಿ ಓದುತ್ತಿರುವ ಪತ್ರಕರ್ತರ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಬೇಕು

* ಪತ್ರಕರ್ತರು ಮೃತಪಟ್ಟರೆ ₹ 2 ಲಕ್ಷ ಪರಿಹಾರ ನೀಡಬೇಕು

* ಪತ್ರಕರ್ತರ ವಾಹನಗಳಿಗೆ ಹೆದ್ದಾರಿ ಟೋಲ್‌ಗಳಲ್ಲಿ ಉಚಿತ ಪ್ರವೇಶ ಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.