ADVERTISEMENT

ಜಿಲ್ಲಾ ಆಯೋಗದ ಆದೇಶ ವಜಾ: ರೈತರ ಹೋರಾಟಕ್ಕೆ ಜಯ

ಎಲ್ಲರ ಪರವಾಗಿ ದಾವೆ ಪರಿಗಣಿಸಲು ರಾಜ್ಯ ಆಯೋಗ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 2:39 IST
Last Updated 4 ಜುಲೈ 2022, 2:39 IST
ಬಿ.ಎಂ.ಸಿದ್ದಲಿಂಗಸ್ವಾಮಿ
ಬಿ.ಎಂ.ಸಿದ್ದಲಿಂಗಸ್ವಾಮಿ   

ಹರಿಹರ: ವಿಮಾ ಪರಿಹಾರ ಕೋರಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಮೂವರು ರೈತರು ಸಲ್ಲಿಸಿದ್ದ ದೂರನ್ನು ಗ್ರಾಮದ ಎಲ್ಲಾ ರೈತರಿಗೆ ಅನ್ವಯವಾಗುವಂತೆ ವಿಚಾರಣೆ ನಡೆಸಲು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಾವಣಗೆರೆ ಜಿಲ್ಲಾ ಆಯೋಗಕ್ಕೆ ನಿರ್ದೇಶನ ನೀಡಿದ್ದು, ಈ ಮೂಲಕ ರೈತರ ಸಾಮೂಹಿಕ ಹೋರಾಟಕ್ಕೆ ಆರಂಭಿಕ ಜಯ ದೊರೆತಂತಾಗಿದೆ.

ತಮ್ಮ ದಾವೆ ಪ್ರಾತಿನಿಧಿಕ ಸ್ವರೂಪದ್ದೆಂದು ಪರಿಗಣಿಸಲು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 2022ರ ಮೇ 17ರಂದು ವಜಾ ಮಾಡಿದ್ದ ಜಿಲ್ಲಾ ಆಯೋಗ, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯಿಲ್ಲ. ಮೂವರು ರೈತರ ಜಂಟಿ ದೂರು ಇದು ಎಂದು ಪರಿಗಣಿಸಿತ್ತು.

ಇದನ್ನು ಪ್ರಶ್ನಿಸಿ ರೈತರು 02-06-2022ರಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ರಾಜ್ಯ ಗ್ರಾಹಕರ ಆಯೋಗದ ಪ್ರಧಾನ ಪೀಠ, ಜಿಲ್ಲಾ ಆಯೋಗದ ಆದೇಶವನ್ನು ವಜಾ ಮಾಡಿ, ರೈತರ ಹಿತದೃಷ್ಟಿಯಿಂದ ಮಹತ್ವದ ಆದೇಶ ನೀಡಿದೆ.

ADVERTISEMENT

ಪ್ರಕರಣದ ವಿವರ: ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ನೂರಾರು ರೈತರು ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ 2017-18ರಲ್ಲಿ ಮೆಕ್ಕೆಜೋಳ ಬೆಳೆಗೆ ವಿಮೆ ಮಾಡಿಸಿದ್ದರು. ಬಿತ್ತನೆಯಾದ ಕೆಲ ತಿಂಗಳಲ್ಲೇ ಸೈನಿಕ ಹುಳು ಬಾಧೆಗೆ ಹಾನಿಗೀಡಾಗಿದ್ದರೂ ವಿಮಾ ಪರಿಹಾರ ನೀಡಿರಲಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಇಲಾಖೆಗಳು ಮತ್ತು ಯೂನಿವರ್ಸ್ಲ್ ಸೋಂಪೋ ವಿಮಾ ಕಂಪನಿ ವಿರುದ್ಧ ಗ್ರಾಮದ ಕೆ. ಪರಮೇಶ್ವರಪ್ಪ, ಪರುಸಪ್ಪ ಮತ್ತು ವೈ.ಪ್ರಕಾಶ ಎಂಬುವವರು 2020ರ ಆಗಸ್ಟ್ 11ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ವಿಮೆ ಕಂಪನಿ, ಪ್ರೀಮಿಯಂ ಮೊತ್ತ, ಬೆಳೆ ಹಾನಿಗೆ ಕಾರಣ, ಪರಿಹಾರ ನೀಡಬೇಕಾದುದು ಎಲ್ಲಾ ರೈತರಿಗೆ ಒಂದೇ ಆಗಿರುವುದರಿಂದ ಪ್ರತ್ಯೇಕವಾಗಿ ದೂರು ಸಲ್ಲಿಸಬೇಕಿಲ್ಲ. ಬಹಳಷ್ಟು ರೈತರು ಅನಕ್ಷರಸ್ಥರು, ಬಡವರಾಗಿರಾಗಿದ್ದು, ಖುದ್ದು ಕಾನೂನು ಕ್ರಮ ಕೈಗೊಳ್ಳಲು ಅಸಹಾಯಕರಾಗಿರುವುದರಿಂದ ಎಲ್ಲಾ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿ ವಜಾ ಮಾಡಲಾಗಿತ್ತು.

ರಾಜ್ಯ ಗ್ರಾಹಕರ ಆಯೋಗದ ಪ್ರಧಾನ ಪೀಠದ ಸದಸ್ಯರಾದ ಕೆ.ಬಿ.ಸಂಗಣ್ಣನವರ್, ಜಿಲ್ಲಾ ಆಯೋಗದ ಆದೇಶ ಕಾನೂನು ಉಪಬಂಧಗಳಿಗೆ ವಿರುದ್ಧವಾಗಿದೆ ಎಂದು ವಜಾ ಮಾಡಿ, ವಿಮಾ ಕಂತು ಪಾವತಿಸಿ, ನಷ್ಟಕ್ಕೀಡಾಗಿರುವ ಗ್ರಾಮದ ಎಲ್ಲಾ ರೈತರ ಪರವಾಗಿ ದಾವೆ ಪರಿಗಣಿಸಿ, ವಿಚಾರಣೆ ನಡೆಸಲು ಆದೇಶಿಸಿದ್ದಾರೆ. ಅದರಂತೆ ಜಿಲ್ಲಾ ಆಯೋಗ ಜುಲೈ 12ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.

ರೈತರ ಪರ ನಗರದ ಹಿರಿಯ ವಕೀಲರಾದ ಬಿ.ಎಂ. ಸಿದ್ದಲಿಂಗಸ್ವಾಮಿ, ಇನಾಯತ್ ಉಲ್ಲಾ ಟಿ., ಜಿ.ಎಚ್. ಭಾಗೀರಥಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.