ADVERTISEMENT

ದಾವಣಗೆರೆ; ನೊಂದವರಿಗೆ ಸ್ಪಂದಿಸಲು ಐಎಎಸ್‌, ಐಪಿಎಸ್‌ ಮಾಡಿ: ರವಿ ಡಿ.ಚನ್ನಣ್ಣವರ

ಎಸ್‌–ಯುಪಿಎಸ್‌ಸಿ ಕಾರ್ಯಾಗಾರದಲ್ಲಿ ಸಿಐಡಿ ವರಿಷ್ಠಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:07 IST
Last Updated 29 ನವೆಂಬರ್ 2021, 4:07 IST
ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಿದರು. ತೆರಿಗೆ ಅಧಿಕಾರಿ ಅಶೋಕ್ ಮಿರ್ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಿಐಡಿ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ, ಡಿವೈಎಸ್‌ಪಿ ನರಸಿಂಹ ತಾಮ್ರದ್ವಜ ಅವರೂ ಇದ್ದಾರೆ
ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಿದರು. ತೆರಿಗೆ ಅಧಿಕಾರಿ ಅಶೋಕ್ ಮಿರ್ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಿಐಡಿ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ, ಡಿವೈಎಸ್‌ಪಿ ನರಸಿಂಹ ತಾಮ್ರದ್ವಜ ಅವರೂ ಇದ್ದಾರೆ   

ದಾವಣಗೆರೆ: ನೊಂದವರ, ತುಳಿತಕ್ಕೆ ಒಳಗಾದವರ ಸಮಸ್ಯೆಗಳಿಗೆ ಸ್ಪಂದಿಸಲು ಮನಸ್ಸು ಇರುವವರು, ಸಾಮಾಜಿಕ ಸೇವೆಯ ತುಡಿತ ಉಳ್ಳವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಬರಬೇಕು ಎಂದು ಬೆಂಗಳೂರಿನ ಸಿಐಡಿ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ ಹೇಳಿದರು.

ಇಲ್ಲಿನ ತ್ರಿಶೂಲ ಕಲಾಭವನದಲ್ಲಿ ಎಸ್‌–ಯುಪಿಎಸ್‌ಸಿ ತರಬೇತಿ ಸಂಸ್ಥೆಯು ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಚರಿತ್ರೆ ನೋಡಿದರೆ ಋಷಿ ಮುನಿಗಳು ಜನರ ಏಳಿಗೆಗೆ ಶ್ರಮಿಸುತ್ತಿದ್ದರು. ರಾಜರು ಪ್ರಜೆಗಳ ಏಳಿಗಾಗಿಗಾಗಿ ಆಡಳಿತ ಮಾಡುತ್ತಿದ್ದರು. ಈಗಿನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆ ಕೆಲಸವನ್ನು ಐಎಎಸ್, ಐಪಿಎಸ್, ಕೆಎಎಸ್ ಒಳಗೊಂಡಂತೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ತನ್ನ ಸಮಸ್ಯೆಯ ಜೊತೆಗೆ ತನ್ನಂತೆ ಇರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕನಸು ಇರುವವರು, ನೀರು, ರಸ್ತೆ, ಮನೆ, ಆಸ್ಪತ್ರೆ ಮೊದಲಾದ ಜನರ ತೊಂದರೆಗಳನ್ನು ನಿವಾರಿಸುವವರು ಸರ್ಕಾರಿ ಅಧಿಕಾರಿಗಳಾಗಬೇಕು ಎಂದರು.

ಸ್ವ ಪ್ರತಿಭೆ ಮತ್ತು ಜ್ಞಾನ ಇದ್ದರೆ ಯಾರು ಬೇಕಾದರೂ ಅಧಿಕಾರಿಗಳಾಗಬಹುದು. ಹಿಂದೆ ರಾಜನ ಮಗ ರಾಜ, ಮಂತ್ರಿಯ ಮಗ ಮಂತ್ರಿ ಆಗುತ್ತಿದ್ದರು. ಆಡಳಿತದ ಅತ್ಯುತ್ತಮ ಪ್ರಕಾರ ಆಗಿರುವ ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಆಡಳಿತಗಾರನಾಗಬಹುದು. ಅದಕ್ಕೆ ಜ್ಞಾನ ಮುಖ್ಯ. ಕೇವಲ ಸ್ಫೂರ್ತಿಯಿಂದ ಸಾಧನೆ ಆಗುವುದಿಲ್ಲ. ಸ್ಫೂರ್ತಿ ಪಡೆಯುವುದರ ಜತೆಗೆ ಬದ್ಧತೆ, ಪರಿಶ್ರಮ ಇರಬೇಕು. ನಾವು ಯಾವ ಪರೀಕ್ಷೆ ಬರೆಯುತ್ತೇವೆಯೇ ಅದನ್ನು ಎದುರಿಸಲು ಒಂದು ಯೋಜನೆ ಹಾಕಿಕೊಳ್ಳಬೇಕು. ಆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಬಹುತೇಕ ಮಂದಿ ಯೋಜನೆ ಚೆನ್ನಾಗಿಯೇ ಮಾಡಿಕೊಂಡಿರುತ್ತಾರೆ. ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಲು ದಿನಕ್ಕೆ 12 ಗಂಟೆ ಓದಬೇಕು ಎಂದು ಸಮಯ ನಿಗದಿಯೂ ಮಾಡಿಕೊಂಡಿರುತ್ತಾರೆ. ಆದರೆ ಅದು ಅನುಷ್ಠಾನಕ್ಕೆ ಬರುವುದಿಲ್ಲ. ಸತತ ಪರಿಶ್ರಮ ಇಲ್ಲದೇ ಪರೀಕ್ಷೆ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪರೀಕ್ಷೆಗೆ ಇರುವ ಸಿಲೆಬಸ್‌, ಅದಕ್ಕ ಸಂಬಂಧಿಸಿದ ಹಳೇ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡಿದರೆ ಯಾವ ಪ್ರಶ್ನೆ ಬರಲಿದೆ ಎಂಬುದು ಗೊತ್ತಾಗುತ್ತದೆ. ಅದಕ್ಕೆ ಸರಿಯಾಗಿ ಓದಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ‘ಯುಪಿಎಸ್‌ಸಿ ಪರೀಕ್ಷೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮೊದಲು ಹೋಗಲಾಡಿಸಿಕೊಂಡರೆ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಲು ಸಾಧ್ಯ. ಸಂದರ್ಶನದಲ್ಲಿ ಏನೋ ನಡೆಯುತ್ತದೆಯಂತೆ ಎಂಬ ವದಂತಿಯನ್ನು ತೆಗೆದು ಹಾಕಿ. ಅರ್ಹತೆಗಷ್ಟೇ ಇಲ್ಲಿ ಮಾನ್ಯತೆ ಇರುತ್ತದೆ. ಅದೃಷ್ಟವನ್ನು ನಂಬಬೇಡಿ. 10 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕುಗ್ಗಬೇಡಿ. ಅರ್ಜಿ ಸಲ್ಲಿಸಿದವರಲ್ಲಿ ಶೇ 50ರಿಂದ 60ರಷ್ಟು ಮಂದಿ ಮಾತ್ರ ಪರೀಕ್ಷೆ ಬರೆಯಲು ಬರುತ್ತಾರೆ. ಆ 5–6 ಲಕ್ಷದಲ್ಲಿ ಅದೃಷ್ಟದಲ್ಲಿ ಪಾಸಾದರೆ ಆಗಲಿ ಎಂದು ಬಂದವರೇ ಶೇ 80ರಷ್ಟು ಮಂದಿ ಇರುತ್ತಾರೆ. ಉತ್ತೀರ್ಣರಾಗಲೇಬೇಕು ಎಂದು ಬರುವವರು ‌60 ಸಾವಿರದಷ್ಟು ಮಂದಿ ಮಾತ್ರ ಇರುತ್ತಾರೆ’ ಎಂದು ತಿಳಿಸಿದರು.

ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಅಶೋಕ್ ಮಿರ್ಜಿ, ‘ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಸಂದರ್ಭದಲ್ಲಿ ಜ್ಞಾನಕ್ಕಾಗಿ ಓದುತ್ತಿದ್ದೇನೆ ಅನ್ನುವುದಕ್ಕಿಂತ ಅಂಕಕ್ಕಾಗಿಯೇ ಓದುತ್ತಿದ್ದೇನೆ ಅಂದುಕೊಳ್ಳಬೇಕು. ಪರೀಕ್ಷೆಗೆ ಯಾವುದು ಬರುತ್ತದೆ ಎಂಬುದನ್ನು ಗುರುತು ಮಾಡಿಕೊಂಡು ಓದಬೇಕು. ಸುಲಭ ಇದೆ ಎಂಬ ಕಾರಣಕ್ಕೆ ಇತಿಹಾಸವನ್ನು ಜಾಸ್ತಿ ಓದುತ್ತಾರೆ. ಆದರೆ ಅದರಲ್ಲಿ ಬರೋದು 15 ಪ್ರಶ್ನೆಗಳು. ಅದೂ ಆಧುನಿಕ ಇತಿಹಾಸದಲ್ಲೇ ಹೆಚ್ಚಿರುತ್ತದೆ. ಪ್ರಾಚೀನ ಇತಿಹಾಸ, ಮಧ್ಯಯುಗದ ಇತಿಹಾಸ ಎಂದೆಲ್ಲ ಓದುತ್ತಾ ಕೂತರೆ ಸಮಯ ವ್ಯರ್ಥವಾಗುತ್ತದೆ. ಸಮಕಾಲೀನ ಆಗುಹೋಗುಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳ ಆದ ಮೇಲೆ ಕೊನೆಗೆ ಇತಿಹಾಸ ಓದಿ’ ಎಂದು ಸಲಹೆ ನೀಡಿದರು.

ಮುಖ್ಯಪರೀಕ್ಷೆಯಲ್ಲಿ ಪ್ರಬಂಧ ಬರೆಯಬೇಕಾಗುತ್ತದೆ. 250 ಅಂಕಗಳ ಐದು ಪೇಪರ್‌ ಇರುತ್ತದೆ. ಹಾಗಾಗಿ ವೇಗವಾಗಿ, ಸಮಯಕ್ಕೆ ಸರಿಯಾಗಿ ಮುಗಿಸುವ ರೀತಿಯಲ್ಲಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಬೇಕು ಎಂದರು.

ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ ಉಪಸ್ಥಿತರಿದ್ದರು.

‘ಮೊಬೈಲ್‌ನಿಂದ ದೂರ ಇರಿ’

‘ಇದು ಜ್ಞಾನದ ಯುಗ. ಬಹಳ ಮಂದಿ ಒಂದು ಗಂಟೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ನೋಡದೇ ಇದ್ದರೆ ಹುಚ್ಚರಾಗುತ್ತಾರೆ. ಇದು ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಪರೀಕ್ಷೆ ಬರೆಯುವವರು ಮೊಬೈಲ್‌ನಿಂದ ದೂರ ಇರಬೇಕು. ಮೊಬೈಲ್‌ ಬೇಕಂದ್ರೆ ನೆಟ್‌ ಇಲ್ಲದ ಬೇಸಿಕ್‌ ಸೆಟ್‌ ಬಳಸಿ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.