ADVERTISEMENT

ಹೊನ್ನಾಳಿ: ವಿಜೃಂಭಣೆಯ ದೊಡ್ಡಬನ್ನಿ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 3:54 IST
Last Updated 23 ಅಕ್ಟೋಬರ್ 2021, 3:54 IST
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಸನ್ನಿಧಾನದಲ್ಲಿ ಶುಕ್ರವಾರ ದೊಡ್ಡ ಬನ್ನಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಬನ್ನಿ ಮರವೇರಿ ಬನ್ನಿ ಪತ್ರೆ ಕಿತ್ತುಕೊಳ್ಳುತ್ತಿರುವ ದೃಶ್ಯ.
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಸನ್ನಿಧಾನದಲ್ಲಿ ಶುಕ್ರವಾರ ದೊಡ್ಡ ಬನ್ನಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಬನ್ನಿ ಮರವೇರಿ ಬನ್ನಿ ಪತ್ರೆ ಕಿತ್ತುಕೊಳ್ಳುತ್ತಿರುವ ದೃಶ್ಯ.   

ಹೊನ್ನಾಳಿ: ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಯಘೋಷದ ಮಧ್ಯೆ ಅಂಬು ಹೊಡೆಯುವುದರ ಮೂಲಕ ವಿಜೃಂಭಣೆಯಿಂದ ನೆರವೇರಿತು.

ದಸರಾ ಹಬ್ಬದ ನಂತರದ ಶುಕ್ರವಾರ ಬನ್ನಿ ಮಹೋತ್ಸವ ಆಚರಿಸುವುದು ವೈಶಿಷ್ಟ್ಯವಾಗಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಜೋಗಮ್ಮನವರು ಮತ್ತು ಮುತ್ತೈದೆಯರು ಗುರುವಾರದಿಂದಲೇ ಉಪವಾಸ ವ್ರತ ಕೈಗೊಂಡು ಬನ್ನಿ ಮುಡಿಯುವವರೆಗೂ ದೀಪಗಳನ್ನು ಹಿಡಿದು ಬೆಳಗುತ್ತಾರೆ. ಭಕ್ತರು ರೊಟ್ಟಿ, ಬುತ್ತಿ, ಬದನೆಕಾಯಿ, ಹೆಸರುಕಾಳು ಪಲ್ಯ ಕಟ್ಟಿಕೊಂಡು ಎತ್ತಿನ ಗಾಡಿ, ಟ್ರ್ಯಾಕ್ಟರ್, ದ್ವಿ-ಚಕ್ರ ವಾಹನಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಬಂದು ದೇವಿಯ ಆರಾಧನೆಯಲ್ಲಿ ನಿರತರಾಗುತ್ತಾರೆ.

ಪ್ರಧಾನ ಅರ್ಚಕ ಮಲ್ಲಿಕಾರ್ಜುನ್ ಉಪವಾಸ ವ್ರತದೊಂದಿಗೆ ಶಮೀ ವೃಕ್ಷದ ಮುಂಭಾಗದಲ್ಲಿ ಮೂರು ಬಾಣ (ಅಂಬು)ಗಳನ್ನು ಹೊಡೆಯುತ್ತಾರೆ. ಬಾಣಗಳು ಯಾವ ದಿಕ್ಕಿಗೆ ಹೋಗುತ್ತವೆ ಎಂಬುದರ ಆಧಾರದ ಮೇಲೆ ಮಳೆ-ಬೆಳೆ ಹಾಗೂ ನಾಡಿನ ಭವಿಷ್ಯವನ್ನು ಭಕ್ತರು ಲೆಕ್ಕ ಹಾಕುವ ಪದ್ಧತಿ ಇಲ್ಲಿದೆ. ನಂತರ ಪರಸ್ಪರ ಬನ್ನಿ ಪತ್ರೆ ವಿನಿಮಯ ಮಾಡಿಕೊಳ್ಳುವ ಮೂಲಕ ಶುಭ ಕೋರಿದರು. ತಹಶೀಲ್ದಾರ್ ಬಸವನಗೌಡ ಕೋಟೂರ, ಕಂದಾಯ ಇಲಾಖೆಯ ಮೌನೇಶ್, ಹತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ, ಚಿನ್ನಪ್ಪ, ಹಳದಪ್ಪ, ಸಿಪಿಐ ಟಿ.ವಿ. ದೇವರಾಜ್, ಪಿಎಸ್‌ಐ ಬಸನಗೌಡ ಬಿರಾದಾರ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.