ADVERTISEMENT

ದಾವಣಗೆರೆ: ಅಕ್ಟೋಬರ್‌ 3ರಂದು ಶ್ವಾನ, ಬೆಕ್ಕು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 8:31 IST
Last Updated 1 ಅಕ್ಟೋಬರ್ 2021, 8:31 IST
ಗಮನ ಸೆಳೆದ ಶ್ವಾನ
ಗಮನ ಸೆಳೆದ ಶ್ವಾನ   

ದಾವಣಗೆರೆ: ದಾವಣಗೆರೆ ಪೆಟ್‌ ಲವರ್ಸ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಗರದ ಯುಬಿಡಿಟಿ ಕಾಲೇಜಿನ ಮೈದಾನದಲ್ಲಿ ಅಕ್ಟೋಬರ್‌ 3ರಂದು ಬೆಳಿಗ್ಗೆ 9ರಿಂದ ರಾಜ್ಯ ಮಟ್ಟದ 5ನೇ ವರ್ಷದ ಶ್ವಾನ ಪ್ರದರ್ಶನ ಹಾಗೂ ಮೊದಲನೇ ವರ್ಷದ ಬೆಕ್ಕಿನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದಾವಣಗೆರೆ ಪೆಟ್‌ ಲವರ್ಸ್‌ ಅಸೋಸಿಯೇಷನ್‌ನ ಸಚಿನ್‌, ‘ವಿವಿಧ ತಳಿಗಳ 350ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಶ್ವಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ₹ 15 ಸಾವಿರ, ದ್ವಿತೀಯ ಬಹುಮಾನ ₹ 10 ಸಾವಿರ, ತೃತೀಯ ಬಹುಮಾನ ₹ 7,500 ನೀಡಲಾಗುತ್ತದೆ. ನಾಲ್ಕರಿಂದ ಎಂಟನೇ ಸ್ಥಾನದವರೆಗೂ ನಗದು ಬಹುಮಾನ ನೀಡಲಾಗುತ್ತದೆ. ಪಪ್ಪಿಗಳ ವಿಭಾಗದಲ್ಲಿ ₹ 5,000 ಮೊದಲ ಬಹುಮಾನ, ₹ 3,000 ದ್ವಿತೀಯ ಬಹುಮಾನ, ₹ 2,000 ತೃತೀಯ ಬಹುಮಾನ ಕೊಡಲಾಗುತ್ತದೆ. ಭಾರತೀಯ ತಳಿಗೆ ₹ 3,000 ಹಾಗೂ ಮಿಶ್ರತಳಿ ವಿಭಾಗದಲ್ಲಿ ಮೊದಲ ಬಹುಮಾನ ₹ 1,000 ನೀಡಲಾಗುತ್ತದೆ. ಬೆಕ್ಕಿನ ವಿಭಾಗದಲ್ಲಿ ₹ 3 ಸಾವಿರ, ₹ 2 ಸಾವಿರ ಹಾಗೂ ₹ 1,000 ಅನ್ನು ಕ್ರಮವಾಗಿ ಮೊದಲ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.

ಪ್ರತಿ ಶ್ವಾನಕ್ಕೆ ಮುಂಗಡ ನೋಂದಣಿ ಶುಲ್ಕ ₹ 300, ಬೆಕ್ಕಿಗೆ ₹ 200 ನಿಗದಿಗೊಳಿಸಲಾಗಿದೆ. ಸ್ಥಳದಲ್ಲೇ ನೋಂದಣಿ ಮಾಡಿಸುವವರಿಗೆ ಶ್ವಾನಕ್ಕೆ ₹ 500 ಹಾಗೂ ಬೆಕ್ಕಿಗೆ ₹ 300 ವಿಧಿಸಲಾಗುತ್ತಿದೆ. ದೇಶಿ ತಳಿಯ ಶ್ವಾನಕ್ಕೆ ಉಚಿತ ಪ್ರವೇಶವಿದೆ. ನೋಂದಣಿಗೆ ಹಾಗೂ ಮಾಹಿತಿಗೆ 9844174555, 8147912080, 9844430647 ಸಂಪರ್ಕಿಸಬಹುದು.

ADVERTISEMENT

ಅಂದು ಬೆಳಿಗ್ಗೆ 11ಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಸಂಜೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದರು.

ಗುರುರಾಜ ಬಿ.ಎಸ್‌. ಅರವಿಂದ ಎಚ್‌.ಕೆ, ಪವನ್‌ ಡಿ., ಸುನಿಲ್‌, ಶಿವಕುಮಾರ್‌, ಸುದೀಪ್‌ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.