ಹೊನ್ನಾಳಿ: ರಂಗಭೂಮಿ ಚಟುವಟಿಕೆಗಳು ನಿಂತ ನೀರಾಗಬಾರದು. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಾಗಿದಾಗ ಮಾತ್ರ ಅದು ಉಳಿದು ಬೆಳೆಯಲು ಸಾಧ್ಯ. ಹೊಸ ಹೊಸ ಆವಿಷ್ಕಾರಗಳು ನಡೆಯಲು ಸಹಕಾರಿಯಾಗುತ್ತದೆ ಎಂದು ಹಿರಿಯ ರಂಗಕರ್ಮಿ ಸಿದ್ದರಾಜು ಹೇಳಿದರು.
ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಹೊನ್ನಾಳಿಯ ಅಭಿವ್ಯಕ್ತಿ ಕಲಾತಂಡದ 45ನೇ ವರ್ಷಾಚರಣೆ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಧಾತ್ರಿ ರಂಗಸಂಸ್ಥೆ ಕಲಾವಿದರಿಂದ ಮಂಗಳವಾರ ಆರಂಭವಾದ ಮೂರು ದಿನಗಳ ನಾಟಕೋತ್ಸವ ಕಾರ್ಯಕ್ರಮಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಿನಿಮಾ, ಟಿ.ವಿ. ಮೊಬೈಲ್‌ಗಳಿಂದಾಗಿ ಹಾಗೂ ಆಧುನಿಕ ಜೀವನ ಶೈಲಿ ಪ್ರಭಾವಗಳಿಂದ ರಂಗಭೂಮಿ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಅದಾಗ್ಯೂ ಸಾಣೆಹಳ್ಳಿಯ ಶಿವಸಂಚಾರ, ಹೆಗ್ಗೋಡು ನೀನಾಸಂ, ಧಾತ್ರಿ ರಂಗ ಸಂಸ್ಥೆ, ರಂಗಾಯಣಗಳಂತ ಕೆಲವು ಸಂಸ್ಥೆಗಳ ಮೂಲಕ ರಂಗಭೂಮಿ ಚಟುವಟಿಕೆಗಳು ಮುಂದುವರಿಯುತ್ತಿವೆ ಎಂದರು.
45 ವರ್ಷಗಳಿಂದಲೂ ಅಭಿವ್ಯಕ್ತಿ ಕಲಾ ತಂಡ ಉಳಿದುಕೊಂಡು ಬರುತ್ತಿದೆ ಎಂದರೆ ಅದಕ್ಕೆ ಸ್ಥಳೀಯ ಕಲಾಭಿಮಾನಿಗಳು, ಕಲಾವಿದರ ಸಹಕಾರ ಕಾರಣ ಎಂದು ಅಭಿವ್ಯಕ್ತಿ ಕಲಾತಂಡದ ಸಂಸ್ಥಾಪಕ, ರಂಗಕರ್ಮಿ ಪ್ರೇಂಕುಮಾರ ಬಂಡಿಗಡಿ ಹೇಳಿದರು.
ಕಲಾತಂಡದ ಸತ್ತಿಗೆ ಲೋಕೇಶ್, ಮಲ್ಲಿಕಾರ್ಜುನ ಸ್ವಾಮಿ, ಸತ್ಯನಾರಾಯಣರಾವ್, ಪಟ್ಟಣ ಶೆಟ್ಟಿ ಪರಮೇಶ್ ಅವಿನಾಶ್ ಟೈಲರ್ ಬಸವರಾಜ್, ಕತ್ತಿಗೆ ನಾಗರಾಜ್, ಬೆನಕಪ್ಪ, ಯುವಶಕ್ತಿ ಒಕ್ಕೂಟದ ಚಿನ್ನಪ್ಪ ಮೇದಾರ, ಕೆ.ವಿ.ಚನ್ನಪ್ಪ ಮುಂತಾದವರು ಇದ್ದರು.
ನಾಟಕೋತ್ಸವ ಉದ್ಘಾಟನೆ ಕಾರ್ಯಕ್ರಮದ ನಂತರ ಶ್ರೀಕೃಷ್ಣ ಸಂಧಾನ ನಗೆ ನಾಟಕ ಪ್ರದರ್ಶಿಸಲಾಯಿತು. ಗುರುವಾರ ಸರಸತಿಯಾಲೊಲ್ಲೆ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.